ಕೊರ್ಬಾ (ಛತ್ತೀಸ್‌ಗಢ): ಬುಡಕಟ್ಟು ಜನಾಂಗಕ್ಕೆ ಸೇರಿದ ಮಹಿಳೆಯೊಬ್ಬರ ಸ್ಪರ್ಧೆಯಿಂದ ಕೊರ್ಬಾ ಲೋಕಸಭಾ ಕ್ಷೇತ್ರ ದೇಶದ ಗಮನ ಸೆಳೆಯುತ್ತಿದೆ. ಶಾಂತಿ ಮಾರಾವಿ (33) ಎಂಬ ಮಹಿಳೆ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿರುವುದರಿಂದ ಈ ಕ್ಷೇತ್ರ ಚರ್ಚೆಯಲ್ಲಿದೆ. ಬುಡಕಟ್ಟು ಮಹಿಳೆ ನಾಮಪತ್ರ ಕೂಡ ಸಲ್ಲಿಸಿದ್ದು, ಅಪರೂಪದಲ್ಲಿ ಅಪರೂಪದ ಅಭ್ಯರ್ಥಿಯಾಗಿದ್ದರಿಂದ ಕ್ಷೇತ್ರ ಅಚ್ಚರಿಗೆ ಕಾರಣವಾಗಿದೆ. ಇದೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಜ್ಯೋತ್ಸ್ನಾ ಮಹಂತ್ ಮತ್ತು ಬಿಜೆಪಿಯಿಂದ ಸರೋಜ್ ಪಾಂಡೆ ಎಂಬುವರು ಕಣಕ್ಕಿಳಿದಿದ್ದು, ಇವರ ನಡುವೆ ಮಹಿಳಾ ಅಭ್ಯರ್ಥಿಯಾಗಿ ಶಾಂತಿ ಮಾರಾವಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ. ಜೀರೋ ಅಕೌಂಟ್ ಬ್ಯಾಲೆನ್ಸ್ ಹೊಂದಿರುವ ಬುಡಕಟ್ಟು ಮಹಿಳೆ ಇವರಾಗಿದ್ದಾರೆ.
ಕೈ-ಕಮಲ ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದು, ನಾಪಪತ್ರ ಸಲ್ಲಿಕೆ ವೇಳೆ ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದಾರೆ. ಇನ್ನು ಮಾರ್ವಾಹಿಯ ಬುಡಕಟ್ಟು ಸಮುದಾಯಕ್ಕೆ ಸೇರಿರುವ ಶಾಂತಿ ಮಾರಾವಿ ಕೂಡ ನಾಮಪತ್ರ ಸಲ್ಲಿಸಿದ್ದು, ತಾವು ತಮ್ಮ ಬ್ಯಾಂಕ್ ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಹೊಂದಿರುವುದಾಗಿ ಆಸ್ತಿ ವಿವರಣೆಯಲ್ಲಿ ಹೇಳಿಕೊಂಡಿದ್ದಾರೆ. ಕೈಯಲ್ಲಿ ಕೇವಲ 20,000 ರೂ. ಇದ್ದು, ಕೋಟ್ಯಧಿಪತಿಗಳಾದ ಮಹಿಳಾ ಅಭ್ಯರ್ಥಿಗಳೊಂದಿಗೆ ಸ್ಪರ್ಧೆಗೆ ಇಳಿದಿದ್ದರಿಂದ ಕ್ಷೇತ್ರದಲ್ಲಿ ಅಪರೂಪದ ಅಭ್ಯರ್ಥಿಯಾಗಿದ್ದಾರೆ.
ತಾವು ದಿನಗೂಲಿ ಕಾರ್ಮಿಕರಾಗಿದ್ದು, ಕೃಷಿಯಿಂದ ಬರುವ ಆದಾಯದಿಂದ ತಮ್ಮ ಮನೆ ನಡೆಸುತ್ತಿರುವೆ. ಚುನಾವಣೆಗೆ ಸ್ಪರ್ಧಿಸಲು ಕೇವಲ 20 ಸಾವಿರ ರೂ. ಮಾತ್ರ ಇದ್ದು, ಇದನ್ನು ಬಿಟ್ಟರೆ ತಮ್ಮ ಬಳಿ ಯಾವುದೇ ಹಣ ಇಲ್ಲ. ಬ್ಯಾಂಕ್ ಆಫ್ ಬರೋಡಾದ ಪೆಂಡ್ರಾ ಶಾಖೆಯಲ್ಲಿ ತಮ್ಮ ಹೆಸರಿನ ಖಾತೆ ಇದೆ. ಅದರಲ್ಲಿ 1 ರೂಪಾಯಿ ಕೂಡ ಇಲ್ಲ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಯಲ್ಲಿ 2 ಸಾವಿರ ರೂ. ಇದೆ. ಒಂದೂವರೆ ಎಕರೆ ಕೃಷಿ ಭೂಮಿ ಇದ್ದು, 10 ಗ್ರಾಂ ಚಿನ್ನ ಮತ್ತು 50 ಗ್ರಾಂ ಬೆಳ್ಳಿ ಇದೆ ಎಂದು ಶಾಂತಿ ತಮ್ಮ ಸ್ಥಿರಾಸ್ತಿ ಬಗ್ಗೆಯೂ ತಮ್ಮ ನಾಮಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ. ಅವರ ಆಸ್ತಿ ವಿವರ ಮತ್ತು ಸ್ಪರ್ಧೆಯಿಂದ ಕ್ಷೇತ್ರ ದೇಶದ ಗಮನ ಸೆಳೆಯುತ್ತಿದೆ.
ಮೂಲತಃ ಗೌರೇಲ ಪೇಂದ್ರ ನಿವಾಸಿಯಾಗಿರುವ ತಾವು, ವೃತ್ತಿಯಲ್ಲಿ ಕೃಷಿಕರು. ಐದನೇ ತರಗತಿವರೆಗೂ ಓದಿಕೊಂಡಿರುವೆ. ಯಾವುದೇ ಸಾಮಾಜಿಕ ಜಾಲತಾಣದಲ್ಲೂ ಖಾತೆ ಹೊಂದಿಲ್ಲ. ತಮ್ಮ ಬಳಿ ಪಾನ್ ನಂಬರ್ ಕೂಡ ಇಲ್ಲ. ಕೊರ್ಬಾ ಲೋಕಸಭಾ ಮತಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುತ್ತಿರುವುದಾಗಿ ಶಾಂತಿ ಹೇಳಿಕೊಂಡಿದ್ದಾರೆ.
ಹೇಗೆ ಪ್ರಚಾರ ಮಾಡುತ್ತಿದ್ದಾರೆ? ಎಂಬುದರ ಬಗ್ಗೆ ಕೇಳಲು ಮೊಬೈಲ್ ಸಂಖ್ಯೆಗೆ ಕರೆ ಮಾಡಲಾಯಿತು. ಆದರೆ, ಅವರ ಈ ಸಂಖ್ಯೆ ಸ್ವಿಚ್ ಆಫ್ ಆಗಿರುವುದು ಕಂಡುಬಂದಿದೆ. ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲೂ ಅವರು ಅದೇ ಸಂಖ್ಯೆಯನ್ನು ನೀಡಿದ್ದಾರೆ. ಆದರೆ, ನಾಮಪತ್ರ ಸಲ್ಲಿಕೆಯಿಂದ ಕ್ಷೇತ್ರ ಚರ್ಚೆಗೆ ಕಾರಣವಾಗಿದೆ.