ವಿಕಾರಾಬಾದ್ (ತೆಲಂಗಾಣ): ಅಪಘಾತಗಳು ಯಾವಾಗ ಸಂಭವಿಸುತ್ತವೆ ಎಂದು ಯಾರಿಗೂ ತಿಳಿದಿರುವುದಿಲ್ಲ. ಹಠಾತ್ ಆಗಿ ಸಂಭವಿಸುವ ಅಪಘಾತಗಳಲ್ಲಿ ಹಲವರು ಪ್ರಾಣ ಕಳೆದುಕೊಂಡ ಉದಾಹರಣೆಗಳು ಸಾಕಷ್ಟಿವೆ. ಅವರಲ್ಲಿ ಕೆಲವರು ಮಾತ್ರ ಅದೃಷ್ಟವಶಾತ್ ಬದುಕುಳಿದ ವರದಿಗಳಾಗಿವೆ. ಅದಕ್ಕಿಂತ ಮುಖ್ಯವಾಗಿ, ರೈಲು ಅಪಘಾತದಿಂದ ಬದುಕುಳಿಯುವುದು ವಿರಳ. ಆದರೆ ವಿಕಾರಾಬಾದ್ ಜಿಲ್ಲೆಯ ತಾಂಡೂರು ಕ್ಷೇತ್ರದ ನಾವಂದಗಿ ರೈಲು ನಿಲ್ದಾಣದಲ್ಲಿ ಆದಿವಾಸಿ ಮಹಿಳೆಯೊಬ್ಬರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ರೈಲ್ವೆ ನಿಲ್ದಾಣದ ಬಳಿಯ ಟಾಕಿ ತಾಂಡಾದ ಮಹಿಳೆಯೊಬ್ಬರು ಬಶೀರಾಬಾದ್‌ನಿಂದ ರೈಲು ನಿಲ್ದಾಣದ ಇನ್ನೊಂದು ಬದಿಗೆ ಹಳಿಗಳನ್ನು ದಾಟಿ ಹೋಗುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ಗೂಡ್ಸ್ ರೈಲೊಂದು ನಿಂತಿತ್ತು. ರೈಲು ನಿಂತಿದೆಯೇ ಎಂದು ಮಹಿಳೆ ರೈಲಿನಡಿಯಿಂದ ಹಳಿ ದಾಟಲು ಯತ್ನಿಸಿದ್ದಾರೆ. ಈ ವೇಳೆ ರೈಲು ಚಲಿಸಲು ಪ್ರಾರಂಭಿಸಿತು. ಮಹಿಳೆ ಆಘಾತಕ್ಕೊಳಗಾಗದೇ, ತಕ್ಷಣ ಎಚ್ಚೆತ್ತು, ಧೈರ್ಯದಿಂದ ಹಳಿಗಳ ಮಧ್ಯೆ ಮಲಗಿದ್ದರು. ರೈಲು ಚಲಿಸುತ್ತಿದ್ದ ವೇಳೆ ಮಹಿಳೆ ತನ್ನ ತಲೆ ಮತ್ತು ದೇಹವನ್ನು ಮೇಲಕ್ಕೆತ್ತದೆ ಉಸಿರು ಬಿಗಿಹಿಡಿದುಕೊಂಡು ಸ್ಥಳೀಯರ ಸೂಚನೆಯಂತೆ ಧೈರ್ಯದಿಂದ ಹಳಿಗಳ ಮಧ್ಯೆ ಮಲಗಿದ್ದರು.
ರೈಲು ಹೋದ ಬಳಿಕ ಬದುಕಿ ಹೊರ ಬಂದಿದ್ದೇನೆ ದೇವ್ರೇ ಅಂತಾ ಉಸಿರು ಬಿಟ್ಟಿದ್ದಾರೆ. ಈ ಅಪಘಾತದಿಂದ ಮಹಿಳೆ ಸುರಕ್ಷಿತವಾಗಿ ಪಾರಾಗಿದ್ದಾರೆ. ಅಲ್ಲಿದ್ದ ಕೆಲ ಸ್ಥಳೀಯರು ಈ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗುತ್ತಿದ್ದು, ವಿಡಿಯೋ ನೋಡಿದ ನೆಟ್ಟಿಗರು ಮಹಿಳೆಯನ್ನು ವಾವ್.. ಹ್ಯಾಟ್ಸಾಫ್ ಎಂದು ಹೊಗಳುತ್ತಿದ್ದಾರೆ. ಮತ್ತೊಂದೆಡೆ, ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ ಎಂದು ಠಾಣಾಧಿಕಾರಿ ಈಟಿವಿ ಭಾರತಗೆ ತಿಳಿಸಿದ್ದಾರೆ.