ವಯನಾಡು (ಕೇರಳ) : ವಾಹನದ ಮೇಲೆ, ಅಡಿಯಲ್ಲಿ ವ್ಯಕ್ತಿಗಳನ್ನು/ ವಾಹನಗಳನ್ನು ಎಳೆದೊಯ್ಯುವ ಘಟನೆಗಳು ಹೆಚ್ಚಾಗಿವೆ. ಕೇರಳದ ವಯನಾಡಿನಲ್ಲೂ ಇಂಥಹದ್ದೇ ಪ್ರಕರಣವೊಂದು ಭಾನುವಾರ ನಡೆದಿದೆ. ಹೆಬ್ಬೆರಳು ಕಾರಿನ ಡೋರ್‌ನಲ್ಲಿ ಸಿಲುಕಿಕೊಂಡಿದ್ದರೂ, ಆದಿವಾಸಿ ವ್ಯಕ್ತಿಯೊಬ್ಬರನ್ನು ರಸ್ತೆಯ ಮೇಲೆ ಸುಮಾರು ಅರ್ಧ ಕಿಲೋ ಮೀಟರ್ ದೂರ ಎಳೆದೊಯ್ಯಲಾಗಿದೆ. ಇದರಿಂದ ಆತ ತೀವ್ರವಾಗಿ ಗಾಯಗೊಂಡಿದ್ದಾನೆ.
ಗಾಯಾಳುವನ್ನು ಚೆಮ್ಮಾಡ್ ಬುಡಕಟ್ಟು ಜನಾಂಗದ ಮಥನ್ ಎಂದು ಗುರುತಿಸಲಾಗಿದೆ. ಈತನನ್ನು ಇಲ್ಲಿಗೆ ಬಂದಿದ್ದ ಪ್ರವಾಸಿಗರು ಕಾರಿನಲ್ಲಿ ಕೈ ಬೆರಳು ಸಿಲುಕಿಸಿಕೊಂಡಿದ್ದರೂ ಸಹ ಎಳೆದೊಯ್ದಿದ್ದಾರೆ. ಪರಿಣಾಮ ಕೈ, ಕಾಲು ಮತ್ತು ಸೊಂಟಕ್ಕೆ ತೀವ್ರ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಘಾತಕಾರಿ ದೃಶ್ಯ ಟಿವಿಗಳಲ್ಲಿ ಪ್ರಸಾರ: ಬುಡಕಟ್ಟು ವ್ಯಕ್ತಿಯನ್ನು ಎಳೆದೊಯ್ದ ಕಾರಿನ ದೃಶ್ಯಗಳು ನ್ಯೂಸ್ ಚಾನಲ್ಗಳಲ್ಲಿ ಪ್ರಸಾರವಾಗಿವೆ. ಕಾರಿನ ನಂಬರ್ ಪತ್ತೆ ಹಚ್ಚಿದಾಗ, ಅದು ಕುಟ್ಟಿಪುರಂ ಮೂಲದ ಮೊಹಮದ್ ರಿಯಾಸ್ ಎಂಬುವರ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಆರೋಪಿಗಳು ಎಂದು ಗುರುತಿಸಲಾಗಿರುವ ವಯನಾಡಿನ ಕಣಿಯಂಬಟ್ಟ ಮೂಲದ ಹರ್ಷಿದ್ ಮತ್ತು ಆತನ ಸ್ನೇಹಿತರು ಇಲ್ಲಿನ ಚೆಕ್ ಡ್ಯಾಂ ನೋಡಲು ಆಗಮಿಸಿದ್ದರು.
ಈ ವೇಳೆ ಆರೋಪಿಗಳು ಮತ್ತು ಸ್ಥಳೀಯರ ಮಧ್ಯೆ ವಾಗ್ವಾದ ನಡೆದಿದೆ. ಸಂತ್ರಸ್ತ ಮಥನ್ ಸೇರಿ ಕೆಲವರು ಮಧ್ಯಪ್ರವೇಶಿಸಿದ್ದಾರೆ. ಆಗ ಆರೋಪಿಗಳು ಮಥನ್ ಅವರನ್ನು ಕಾರಿನಲ್ಲಿ ಸಿಕ್ಕಿಸಿಕೊಂಡು ಸುಮಾರು 500 ಮೀಟರ್ ದೂರ ಎಳೆದೊಯ್ದಿದ್ದಾರೆ. ಬಳಿಕ ಅವರು ಸಂತ್ರಸ್ತನನ್ನು ರಸ್ತೆ ಮೇಲೆಯೇ ಬಿಸಾಡಿ ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರು ಆರೋಪಿಗಳ ವಿರುದ್ಧ ಮಾನಂತವಾಡಿ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 110 (ಹತ್ಯೆ ಯತ್ನ) ಸೇರಿದಂತೆ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕ್ರಮಕ್ಕೆ ಸಚಿವರ ಆದೇಶ: ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಚಿವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದ್ದಾರೆ. ಆದಿವಾಸಿ ವ್ಯಕ್ತಿಯ ಮೇಲಿನ ದಾಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿಗಳನ್ನು ಬಂಧಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಗಾಯಾಳು ಮಥನ್ ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಇಲ್ಲವೆಂದು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ: ಹಾವು ಕಚ್ಚಿದ ಬಾಲಕಿ ಸಾವು