ಲತೇಹರ್(ಜಾರ್ಖಂಡ್): ಜಾರ್ಖಂಡ್ನ ಲತೇಹರ್ ಜಿಲ್ಲೆಯಲ್ಲಿ ಶುಕ್ರವಾರ ಸಂಜೆ ರೈಲು ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಇದುವರೆಗೆ ಇಬ್ಬರು ಪುರುಷರು, ಓರ್ವ ಮಹಿಳೆ ಸೇರಿ ಮೂವರು ಸಾವನ್ನಪ್ಪಿದ್ಧಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಬನಾರಸ್-ರಾಂಚಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಇಲ್ಲಿನ ಕುಮಾಂಡಿಹ್ ರೈಲು ನಿಲ್ದಾಣ ತಲುಪಿದ ತಕ್ಷಣವೇ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಗ ವ್ಯಕ್ತಿಯೊಬ್ಬರು ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿ, ಇತರರಿಗೆ ಎಚ್ಚರಿಸಿದ್ದಾರೆ. ಈ ವಿಚಾರ ಕಾಳ್ಗಿಚ್ಚಿನಂತೆ ಹಬ್ಬಿ ಪ್ರಯಾಣಿಕರು ಆತಂಕದಿಂದ ರೈಲಿನಿಂದಿಳಿದು ಓಡಲಾರಂಭಿಸಿದ್ದಾರೆ. ಇದೇ ವೇಳೆ, ಎದುರುಗಡೆಯಿಂದ ಗೂಡ್ಸ್ ರೈಲು ಬಂದಿದೆ.
ಈ ಗೂಡ್ಸ್ ರೈಲು ಹಲವು ಪ್ರಯಾಣಿಕರಿಗೆ ಗುದ್ದಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಮೂವರು ಸಾವನ್ನಪ್ಪಿದ್ದು, ಮೃತದೇಹಗಳನ್ನು ಹೊರತೆಗೆಯಲಾಗಿದೆ. ಆದರೆ, ತಕ್ಷಣಕ್ಕೆ ಗುರುತು ಪತ್ತೆಯಾಗಿಲ್ಲ. ಜೊತೆಗೆ ಅನೇಕರು ಗಾಯಗೊಂಡಿದ್ದಾರೆ. ಹೀಗಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ತಕ್ಷಣವೇ ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಘಟನೆಯನ್ನು ಲತೇಹರ್ ಎಸ್ಪಿ ಅಂಜನಿ ಅಂಜನ್ 'ಈಟಿವಿ ಭಾರತ್'ಗೆ ಖಚಿತಪಡಿಸಿದ್ದಾರೆ. ಮತ್ತೊಂದೆಡೆ, ಇಡೀ ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅಧಿಕ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಧನ್ಬಾದ್ ರೈಲ್ವೆ ವಿಭಾಗದ ಪಿಆರ್‌ಒ ಪುಷ್ಕರ್ ತಿಳಿಸಿದರು.
ಇದನ್ನೂ ಓದಿ: ಕುವೈತ್ ಅಗ್ನಿ ದುರಂತ; 45 ಮೃತದೇಹಗಳ ಸ್ಥಳಾಂತರ, ಕೇರಳದಲ್ಲಿ ಸಂತ್ರಸ್ತರಿಗೆ ಕಣ್ಣೀರಿನ ವಿದಾಯ