ರಾಜಗಢ, ಮಧ್ಯಪ್ರದೇಶ: ಮದುವೆ ಮೆರವಣಿಗೆಯಲ್ಲಿ ಜನರನ್ನು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ 3 ಮಕ್ಕಳು ಸೇರಿ 13 ಮಂದಿ ಮೃತಪಟ್ಟಿರುವ ಘಟನೆ ರಾಜ್‌ಗಢದ ಪಿಪ್ಲೋಡಿಯದಲ್ಲಿ ಭಾನುವಾರ ರಾತ್ರಿ 9 ಗಂಟೆ ನಡೆದಿದೆ. ಘಟನೆಯಲ್ಲಿ 16 ಮಂದಿ ಗಾಯಗೊಂಡಿದ್ದಾರೆ.
ಅಪಘಾತದ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಾಜಸ್ಥಾನದ ಮೋತಿಪುರದಿಂದ ಕುಲಂಪುರಕ್ಕೆ ಮದುವೆ ಮೆರವಣಿಗೆ ಸಾಗುತ್ತಿತ್ತು ಎಂಬ ಮಾಹಿತಿ ದೊರಕಿದೆ. ಘಟನೆಗೆ ಸಿಎಂ ಮೋಹನ್ ಯಾದವ್ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಸಂತಾಪ ಸೂಚಿಸಿದ್ದಾರೆ.
ಸಿಎಂ ಮೋಹನ್ ಯಾದವ್ ಟ್ವೀಟ್: "ರಾಜ್‌ಗಢ ಜಿಲ್ಲೆಯ ಪೀಪ್ಲೋಡಿಯ ರಸ್ತೆಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ರಾಜಸ್ಥಾನದ ಜಲಾವರ್ ಜಿಲ್ಲೆಯ 13 ಜನರು ಸಾವನ್ನಪ್ಪಿರುವ ಸುದ್ದಿ ಅತ್ಯಂತ ದುಃಖಕರ ವಿಷಯವಾಗಿದೆ. ಸಚಿವ ಶ್ರೀನಾರಾಯಣ ಸಿಂಗ್ ಪನ್ವಾರ್, ಜಿಲ್ಲಾಧಿಕಾರಿ ಹಾಗೂ ರಾಜಗಢ್ ಎಸ್ಪಿ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ನಾವು ರಾಜಸ್ಥಾನ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ರಾಜಸ್ಥಾನ ಪೊಲೀಸರು ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್‌ಗಢ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ಕೆಲ ರೋಗಿಗಳನ್ನು ಭೋಪಾಲ್‌ಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ಅಗಲಿದ ಕುಟುಂಬಕ್ಕೆ ನನ್ನ ಆಳವಾದ ಸಂತಾಪ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಎಕ್ಸ್ನಲ್ಲಿ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಟ್ವೀಟ್: "ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದಿಂದ ಹಲವರು ಸಾವನ್ನಪ್ಪಿರುವ ಸುದ್ದಿ ತುಂಬಾ ದುಃಖಕರವಾಗಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಹಾಗೂ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ" ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ರಾಜ್‌ಗಢ ಡಿಸಿ ಹರ್ಷ್ ದೀಕ್ಷಿತ್ ಮಾಹಿತಿ: "ರಾಜಸ್ಥಾನದಿಂದ ಮದುವೆ ಮೆರವಣಿಗೆಗೆ ಬರುತ್ತಿದ್ದರು. ಈ ವೇಳೆ ರಾಜ್‌ಗಢ ಮತ್ತು ರಾಜಸ್ಥಾನದ ಗಡಿಯ ನಡುವೆ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿದ್ದು, ಅದರಲ್ಲಿ 13 ಜನರು ಸಾವನ್ನಪ್ಪಿದ್ದಾರೆ. 15 ಮಂದಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಭೋಪಾಲ್‌ಗೆ ಕಳುಹಿಸಲಾಗಿದೆ" ಎಂದು ಡಿಸಿ ಹೇಳಿದ್ದಾರೆ.
ಇನ್ನು ಆಸ್ಪತ್ರೆಗೆ ಆಗಮಿಸುವ ಮೂಲಕ ಖುದ್ದಾಗಿ ಗಾಯಾಳುಗಳನ್ನು ಸಚಿವ ನಾರಾಯಣ ಸಿಂಗ್ ಪನ್ವಾರ್ ವಿಚಾರಿಸಿದರು. ಘಟನೆ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿ, ಮೃತರ ಬಗ್ಗೆ ಮಾಹಿತಿ ದೃಢಪಡಿಸಿದರು. ಜತೆಗೆ ಜಿಲ್ಲಾಸ್ಪತ್ರೆಯ ಚಿಕಿತ್ಸೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಗಾಯಾಳುಗಳಿಗೆ ಅಗತ್ಯವಾದ ಎಲ್ಲಾ ಚಿಕಿತ್ಸೆಗೆ ಕ್ರಮಕೈಗೊಳ್ಳುವ ಬಗ್ಗೆ ಹಾಗೂ ಅವರ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಇದೇ ವೇಳೆ ಭರವಸೆ ನೀಡಿದರು.
ಇದನ್ನೂ ಓದಿ: ಗೂಡ್ಸ್ ರೈಲುಗಳ ಮಧ್ಯೆ ಭೀಕರ ಅಪಘಾತ; ಇಬ್ಬರು ಲೋಕೋ ಪೈಲಟ್ಗಳಿಗೆ ಗಂಭೀರ ಗಾಯ - Train Accident