ಚೆನ್ನೈ (ತಮಿಳುನಾಡು): ತಮಿಳುನಾಡು- ಕರ್ನಾಟಕ ಗಡಿ ಭಾಗದಲ್ಲಿರುವ ಕೃಷ್ಣಗಿರಿ ಜಿಲ್ಲೆಯ ಹೊಸೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಕಳೆದ ತಿಂಗಳು ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದರು.
ಸುಮಾರು 2,000 ಎಕರೆ ಪ್ರದೇಶದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುವುದು. ಮತ್ತು ವರ್ಷಕ್ಕೆ ಮೂರು ಕೋಟಿ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಈ ವಿಮಾನ ನಿಲ್ದಾಣವು ಹೊಂದಿದೆ ಎಂದು ತಿಳಿಸಿದ್ದರು. ಹೊಸೂರಿನಲ್ಲಿ ಅಸ್ತಿತ್ವದಲ್ಲಿರುವ ಖಾಸಗಿ ಏರ್‌ಸ್ಟ್ರಿಪ್ ಸೇರಿದಂತೆ 5 ಸ್ಥಳಗಳನ್ನು ತಮಿಳುನಾಡು ಸರ್ಕಾರ ಆಯ್ಕೆ ಮಾಡಿದೆ.
ಈ ಮಧ್ಯೆಯೇ, ಹೊಸೂರು ವಿಮಾನ ನಿಲ್ದಾಣದ ಸ್ಥಳದ ಸಮೀಕ್ಷೆಯನ್ನು ಕೈಗೊಳ್ಳಲು ತಮಿಳುನಾಡು ಸರ್ಕಾರ ಇತ್ತೀಚೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಮನವಿ ಮಾಡಿತ್ತು. ಅದರ ಆಧಾರದ ಮೇಲೆ ತಮಿಳುನಾಡು ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ (TIDCO) ವಿಮಾನ ನಿಲ್ದಾಣವನ್ನು ನಿರ್ಮಿಸಬಹುದಾದ 5 ಸ್ಥಳಗಳು ಮತ್ತು ವಿಮಾನ ಟೇಕ್ ಆಫ್ ಮತ್ತು ಲ್ಯಾಂಡಿಂಗ್ ಸೇರಿದಂತೆ ತಾಂತ್ರಿಕ ಅಧ್ಯಯನಗಳನ್ನು ಕೈಗೊಳ್ಳಲು ಮನವಿ ಮಾಡಿದೆ. ಈ 5 ಸ್ಥಳಗಳ ಪಟ್ಟಿಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು TIDCO ಮೂಲಗಳು ಈಟಿವಿ ಭಾರತಕ್ಕೆ ತಿಳಿಸಿವೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ನೀಡುವ ವರದಿ ಆಧರಿಸಿ ಮುಂದಿನ ಹಂತದ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಲಾಗಿದೆ.
ಹೊಸೂರಿನ ಮಹತ್ವ: ಹೊಸೂರು ನಗರವು ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನ ಬಳಿ ಅವಳಿ ನಗರದಂತೆ ನೆಲೆಗೊಂಡಿದೆ. ಸದಾ ಟ್ರಾಫಿಕ್ ಜಾಮ್ನಿಂದ ಹೆಸರುವಾಸಿಯಾದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನಗರದ ವಾಯುವ್ಯ ಹೊರವಲಯದಲ್ಲಿದೆ. ಆದರೆ, ಎಲೆಕ್ಟ್ರಾನಿಕ್ ಸಿಟಿಯಂತಹ ನಗರದ ತಂತ್ರಜ್ಞಾನ ಕಂಪನಿಗಳ ಕೇಂದ್ರವು ತಮಿಳುನಾಡು ಗಡಿಯಲ್ಲಿ ನಗರದ ದಕ್ಷಿಣ ಭಾಗದಲ್ಲಿ ನೆಲೆಗೊಂಡಿದೆ. ಬೆಂಗಳೂರಿನ ಜೊತೆಗೆ ಅನೇಕ ಕಂಪನಿಗಳು ಹೊಸೂರಿನಲ್ಲಿ ತಮ್ಮ ಕಾರ್ಖಾನೆಗಳನ್ನು ಹೊಂದಿವೆ. ಬೆಂಗಳೂರಿನ ಗಡಿಬಿಡಿಯಿಂದ ದೂರ ಉಳಿಯಲು ಬಯಸುವವರು ಹೊಸೂರಿನಲ್ಲಿ ತಮ್ಮ ಮನೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಹೊಸೂರು ಜಾಗತಿಕವಾಗಿ ಪ್ರಮುಖ ನಗರವಾಗಿ ಹೊರಹೊಮ್ಮುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ಇಲ್ಲಿ ವಿಮಾನ ನಿಲ್ದಾಣ ಸ್ಥಾಪಿಸಲು ಉತ್ಸುಕತೆ ತೋರಿರುವುದು ಅಚ್ಚರಿ ಮೂಡಿಸಿದೆ.
ಕರ್ನಾಟಕದವರು ಹೇಳುವುದೇನು: ಕರ್ನಾಟಕ ರಾಜ್ಯಕ್ಕೆ ಮ್ಯಾನ್ಪವರ್ ಮತ್ತು ಸಾರಿಗೆ ದೃಷ್ಟಿಯಿಂದ ಬೆಂಗಳೂರಿನ ಅಭಿವೃದ್ಧಿಗೂ ಹೊಸೂರು ಅತ್ಯಗತ್ಯ. ಬೆಂಗಳೂರು ಮೆಟ್ರೋ ರೈಲು ಸೇವೆಯ ಹಳದಿ ಮಾರ್ಗವನ್ನು ಹೊಸೂರಿನವರೆಗೆ ವಿಸ್ತರಿಸಲು ತಮಿಳುನಾಡು ಸರ್ಕಾರದ ಮನವಿಯನ್ನು ಕರ್ನಾಟಕ ಸರ್ಕಾರ ಒಪ್ಪಿಕೊಂಡಿದೆ. ಬೆಂಗಳೂರಿನ ದಕ್ಷಿಣ ಭಾಗದಲ್ಲಿರುವ ಬೊಮ್ಮಸಂದ್ರದಿಂದ ಹೊಸೂರುವರೆಗೆ ಮೆಟ್ರೋ ರೈಲು ಸೇವೆಯನ್ನು ವಿಸ್ತರಿಸುವ ಕಾರ್ಯಸಾಧ್ಯತೆಯ ಅಧ್ಯಯನವೂ ನಡೆಯುತ್ತಿದೆ. ಇದಲ್ಲದೇ, ಕರ್ನಾಟಕ ರಾಜ್ಯ ಟ್ರಾವೆಲ್ ಆಪರೇಟರ್ಸ್ ಅಸೋಸಿಯೇಷನ್ (KSTOA) ಕೂಡ ಹೊಸೂರು ವಿಮಾನ ನಿಲ್ದಾಣಕ್ಕೆ ತನ್ನ ಬೆಂಬಲವನ್ನು ವಿಸ್ತರಿಸಿದೆ.
ಯೋಜನೆಗೆ ತೊಡಕು: ಹೊಸೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಾರ್ವಜನಿಕರ ಹಾಗೂ ಉದ್ಯಮಿಗಳ ಜನಪ್ರಿಯ ಯೋಜನೆಯಾಗಿದ್ದರೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್) ಜೊತೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಂಡಿರುವುದು ಯೋಜನೆಗೆ ತೊಡಕಾಗಿದೆ. ಮುಂದಿನ 25 ವರ್ಷಗಳವರೆಗೆ ನಿಲ್ದಾಣದಿಂದ 150 ಏರೋನಾಟಿಕಲ್ ಕಿಮೀವರೆಗೂ ಯಾವುದೇ ಹೊಸ ವಿಮಾನ ನಿಲ್ದಾಣವನ್ನು ಸ್ಥಾಪಿಸಲಾಗುವುದಿಲ್ಲ ಎಂಬ ಒಪ್ಪಂದವಿದೆ. ಬೆಳವಣಿಗೆಯ ಆಧಾರದ ಮೇಲೆ ಕೆಲವು ಸಡಿಲಿಕೆ ಮಾಡುವ ಅಧಿಕಾರ ಕೇಂದ್ರಕ್ಕೆ ಇದೆ ಎಂದು ತಮಿಳುನಾಡು ಸರ್ಕಾರದ ಕೈಗಾರಿಕಾ ಅಧಿಕಾರಿಗಳು ಗಮನಸೆಳೆದಿದ್ದಾರೆ.
ಉದಾಹರಣೆಗೆ, ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ಕಾರ್ಯನಿರ್ವಹಿಸುತ್ತಿರುವಾಗ, ನೋಯ್ಡಾದಲ್ಲಿ (ಜೆವಾರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವನ್ನು ಸ್ಥಾಪಿಸಲಾಗಿದೆ ಎಂದು ಅವರು ತಿಳಿಸುತ್ತಾರೆ. ಈ ಎರಡು ವಿಮಾನ ನಿಲ್ದಾಣಗಳ ನಡುವಿನ ವೈಮಾನಿಕ ಅಂತರವು 72 ಕಿ.ಮೀ. ಇದೆ. ಇದಕ್ಕೆ ವ್ಯತಿರಿಕ್ತವಾಗಿ, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಹೊಸೂರಿನ ಉದ್ದೇಶಿತ ಸ್ಥಳದ ನಡುವೆ ಪ್ರಸ್ತುತ 74 ಕಿಮೀ ಅಂತರವಿದೆ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಿದ ಎಐಎಡಿಎಂಕೆ ಸಂಸದ: ಎಐಎಡಿಎಂಕೆ ಸಂಸದ ಸಿ.ವಿ. ಷಣ್ಮುಗಂ ಅವರು ಹೊಸೂರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ನಿನ್ನೆ (26.07.2024) ರಾಜ್ಯಸಭೆಯಲ್ಲಿ ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು, ಹೊಸೂರು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರದಿಂದ ನಿವೇಶನ ಮಂಜೂರಾತಿಗೆ ಯಾವುದೇ ಶಿಫಾರಸು ಬಂದಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ತಮಿಳುನಾಡು ಸರ್ಕಾರ ಇದಕ್ಕಾಗಿ ಪೂರ್ವಭಾವಿಯಾಗಿ ಕಾರ್ಯ ಆರಂಭಿಸಿದೆ. ಹೊಸೂರಿನಲ್ಲಿ ಏರ್‌ಸ್ಟ್ರಿಪ್ ಹೊಂದಿರುವ ತನೇಜಾ ಏರೋ ಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್ ಸೇರಿದಂತೆ ವಿವಿಧ ಪಾಲುದಾರರೊಂದಿಗೆ ತಮಿಳುನಾಡು ಸರ್ಕಾರ ಪ್ರಾಥಮಿಕ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಚರ್ಚಿಸಿ ತೀರ್ಮಾನ: ಸಚಿವ ಎಂ.ಬಿ.ಪಾಟೀಲ್ - 2nd Airport In Bengaluru