ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿಪರೀತ ದೇಹ ತೂಕ ಕಳೆದುಕೊಂಡು ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಆಪ್ ಆರೋಪಿಸಿದ ಬೆನ್ನಲ್ಲೇ, ತಿಹಾರ್ ಜೈಲು ಅಧಿಕಾರಿಗಳು ಆಪ್ ಸಂಚಾಲಕರ ಆರೋಗ್ಯ ವರದಿ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಈವರೆಗೂ ಕೇಜ್ರಿವಾಲ್ ತೂಕದಲ್ಲಿ 2 ಕೆಜಿ ಇಳಿದಿದೆ. ಏಮ್ಸ್ ವೈದ್ಯರ ನಿಯಮಿತ ತಪಾಸಣೆಯಲ್ಲಿದ್ದಾರೆ ಎಂದಿದೆ.
ಅಬಕಾರಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ದೆಹಲಿ ಸಿಎಂ ಅವರನ್ನು ಕೇಂದ್ರೀಯ ತನಿಖಾ ದಳ(ಸಿಬಿಐ) ಬಂಧಿಸಿದೆ. ನಿರಂತರವಾಗಿ ಜೈಲು ಶಿಕ್ಷೆಗೆ ಒಳಗಾಗಿರುವುದರಿಂದ ಆರೋಗ್ಯ ಹದಗೆಟ್ಟಿದೆ. ಅಪಾಯದ ಮುನ್ಸೂಚನೆ ಇದೆ ಎಂದು ಆಪ್ ಆರೋಪಿಸಿದೆ.
ದಾರಿ ತಪ್ಪಿಸಲು ಆಪ್ ಆರೋಪ: ಈ ಬಗ್ಗೆ ತಿಹಾರ್ ಜೈಲಧಿಕಾರಿಗಳು ದೆಹಲಿ ಸರ್ಕಾರದ ಗೃಹ ಇಲಾಖೆಗೆ ವರದಿ ಕಳುಹಿಸಿದ್ದಾರೆ. ಕೇಜ್ರಿವಾಲ್ ಅವರ ಆರೋಗ್ಯದ ಬಗ್ಗೆ ಆಪ್ ನಾಯಕರು ಮಾಡುತ್ತಿರುವ ಆರೋಪ ಜನರಲ್ಲಿ ಗೊಂದಲ ಮತ್ತು ದಾರಿತಪ್ಪಿಸುತ್ತಿದೆ. ಏಮ್ಸ್ ವೈದ್ಯರು ನಿರಂತರವಾಗಿ ತಪಾಸಣೆ ಮಾಡುತ್ತಿದ್ದಾರೆ. ತೂಕದಲ್ಲಿ 2 ಕೆಜಿ ಕಡಿಮೆಯಾಗಿದೆ. ಸಕ್ಕರೆಯ ಮಟ್ಟವೂ ನಿಯಮಿತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕೇಜ್ರಿವಾಲ್ ಅವರು ಬಂಧನವಾದ ಮೊದಲ ದಿನ ಅಂದರೆ ಏಪ್ರಿಲ್ 1 ರಂದು 65 ಕೆಜಿ ತೂಕವಿದ್ದರು. ನಂತರದ ತಿಂಗಳಲ್ಲಿ 66 ಕೆಜಿ ಏರಿತ್ತು. 21 ದಿನಗಳ ಮಧ್ಯಂತರ ಜಾಮೀನು ಪಡೆದ ಚುನಾವಣಾ ಪ್ರಚಾರದಲ್ಲಿ ತೊಡಗಿದ ಬಳಿಕ ಅವರು ಜೂನ್ 2 ರಂದು ಮತ್ತೆ ಜೈಲಿಗೆ ಮರಳಿದರು. ಅಂದು 63.5 ಕೆಜಿ ತೂಕ ಹೊಂದಿದ್ದರು. ಜುಲೈ 14 ರಂದು ಅವರ ದೇಹ ತೂಕ 61.5ಕೆಜಿ ಇದೆ. ಅಂದರೆ, 2 ಕೆಜಿ ಇಳಿಕೆಯಾಗಿದೆ ಎಂದು ವಿವರವಾದ ಮಾಹಿತಿ ಹಂಚಿಕೊಂಡಿದೆ.
ಕೇಜ್ರಿವಾಲ್ಗೆ ನಿತ್ಯ ಮನೆ ಊಟ: ಕೇಜ್ರಿವಾಲ್ ಜೈಲಿನಲ್ಲಿ ಮನೆಯಿಂದ ಬೇಯಿಸಿ ತಂದ ಆಹಾರವನ್ನು ಸೇವಿಸುತ್ತಿದ್ದಾರೆ. ಕೆಲವೊಮ್ಮೆ ಆಹಾರವನ್ನು ತಿನ್ನದೆ ವಾಪಸ್ ಕಳುಹಿಸುತ್ತಿದ್ದಾರೆ. ಏಮ್ಸ್‌ನ ವೈದ್ಯರ ತಂಡ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಕೇಜ್ರಿವಾಲ್ ಪತ್ನಿ ಸುನೀತಾ ಅವರು ವೈದ್ಯರ ಜೊತೆಗೆ ನಿಕಟ ಸಂಪರ್ಕದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಆಪ್ನ ಆಕ್ಷೇಪವೇನು?: ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸಂಜಯ್ ಸಿಂಗ್, ಕೇಜ್ರಿವಾಲ್ ಅವರ ಆರೋಗ್ಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜೈಲು ಅಧಿಕಾರಿಗಳು ಆರೋಗ್ಯ ವರದಿಯನ್ನು ಸೋರಿಕೆ ಮಾಡಿದ್ದಾರೆ. 8.5 ಕೆಜಿಗೂ ಅಧಿಕ ತೂಕವನ್ನು ಕಳೆದುಕೊಂಡಿದ್ದಾರೆ. ಕೇಜ್ರಿವಾಲ್ ಕೆಲವು ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಕ್ತದಲ್ಲಿನ ಸಕ್ಕರೆ ಮಟ್ಟವು ಐದು ಬಾರಿ 50 mg/dl ಗಿಂತ ಕಡಿಮೆಯಾಗಿದೆ. ಜೈಲಿನಲ್ಲಿ ಏನೋ ಅಹಿತಕರ ಘಟನೆಗಳು ನಡೆಯುತ್ತಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ದೆಹಲಿ ಸಿಎಂ ಕೇಜ್ರಿವಾಲ್ಗೆ ಮತ್ತೆ ಸೆರೆವಾಸ: 14 ದಿನ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್ - Arvind Kejriwal