ರಾಂಬನ್ (ಜಮ್ಮು ಮತ್ತು ಕಾಶ್ಮೀರ): ಜಿಲ್ಲೆಯ ಗಾಮವೊಂದರ ಮನೆಯಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದ ಮೂವರು ಸಹೋದರಿಯರು ಹೊರಗಡೆ ಬರಲು ಸಾಧ್ಯವಾಗದೇ ಸಜೀವ ದಹನಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಉಖ್ರಾಲ್ ತಾಲೂಕಿನ ಧನ್ಮಸ್ತಾ - ತಾಜ್ನಿಹಾಲ್ ಗ್ರಾಮದ ಮೂರು ಅಂತಸ್ತಿನ ಮನೆಯಲ್ಲಿ ಇಂದು ಮುಂಜಾನೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ನೋಡು ನೋಡುತ್ತಿದ್ದಂತೆ ಬೆಂಕಿ ಇಡೀ ಮನೆಗೆ ಆವರಿಸಿತ್ತು. ಮೂವರು ಅಕ್ಕ - ತಂಗಿಯರು ಮೇಲಿನ ಮಹಡಿಯಲ್ಲಿ ಮಲಗಿದ್ದರಿಂದ ಅವರೆಲ್ಲರೂ ಕೆಳಗೆ ಬರಲು ಸಾಧ್ಯವಾಗದೇ ಒಳಗಡೆ ಸಿಲುಕಿಕೊಂಡಿದ್ದರು. ಪರಿಣಾಮ ಮೂವರು ಬೆಂಕಿಗಾಹುತಿಯಾಗಿದ್ದಾರೆ. ಮೃತರನ್ನು ಬಿಸ್ಮಾ (18), ಸೈಕಾ (14) ಮತ್ತು ಸಾನಿಯಾ (11) ಎಂದು ಗುರುತಿಸಲಾಗಿದೆ.
ಇನ್ನು ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತ್ತು. ಬೆಂಕಿಯನ್ನು ನಂದಿಸಿದ ಬಳಿಕ ಮೂವರು ಸಹೋದರಿಯರ ಮೃತದೇಹಗಳನ್ನು ಹೊರ ತೆಗೆಯಲಾಗಿದೆ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಓದಿ: ಪೈಲಟ್ ನಿರ್ಲಕ್ಷ್ಯ: ಪ್ಯಾರಾಗ್ಲೈಡಿಂಗ್ ವೇಳೆ ಮೇಲಿಂದ ಬಿದ್ದ ಹೈದರಾಬಾದ್ ಮಹಿಳೆ ಸಾವು