ಬಟಿಂಡಾ(ಪಂಜಾಬ್): ನ್ಯೂಯಾರ್ಕ್ ಮೂಲದ ಮಾಸ್ಟರ್ ಮೈಂಡ್ ಗುರುಪತ್ವಂತ್ ಪನ್ನು ಬೆಂಬಲದೊಂದಿಗೆ, ಪಂಜಾಬ್ ಮತ್ತು ದೆಹಲಿ ಸೇರಿದಂತೆ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆದಿದ್ದಕ್ಕಾಗಿ ಮೂವರು ಸಿಖ್ಸ್ ಫಾರ್ ಜಸ್ಟೀಸ್ ಕಾರ್ಯಕರ್ತರನ್ನು ಬಟಿಂಡಾ ಪೊಲೀಸರು ಬಂಧಿಸಿದ್ದಾರೆ.
ಬಟಿಂಡಾದ ಜಿಲ್ಲಾ ಆಡಳಿತ ಸಂಕೀರ್ಣ ಮತ್ತು ನ್ಯಾಯಾಲಯ ಸಂಕೀರ್ಣದ ಗೋಡೆಗಳ ಮೇಲೆ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿತ್ತು. ಇದಲ್ಲದೆ, ಮೇ 9 ರಂದು ಝಂಡಿವಾಲ್ ಮೆಟ್ರೋ ನಿಲ್ದಾಣ ಮತ್ತು ಕರೋಲ್ ಬಾಗ್ ಮೆಟ್ರೋ ನಿಲ್ದಾಣದಲ್ಲಿ ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿತ್ತು.
ಈ ಹಿಂದೆಯೂ ಆರೋಪಿಗಳ ಬಂಧನ: ಇದು ಮೊದಲ ಪ್ರಕರಣವಲ್ಲ. ಈ ಹಿಂದೆ ಕೂಡ ಹಣಕ್ಕಾಗಿ ಮೊಗಾ ಬಸ್ ನಿಲ್ದಾಣದ ಟಿಕೆಟ್ ಕೌಂಟರ್ ಮೇಲೆ ಖಲಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಬರೆದಿದ್ದ ಆರೋಪಿಗಳನ್ನು ಮೊಗಾ ಪೊಲೀಸರು ಬಂಧಿಸಿದ್ದರು. ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೆ.ಇಳಂಚೆಲಿಯನ್, ಈ ಪ್ರಕರಣದಲ್ಲಿ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಬಂಧಿತರನ್ನು ಚುಹಾರ್ಚಕ್ ನಿವಾಸಿ ದಲ್ಜಿತ್ ಸಿಂಗ್ ಮತ್ತು ಮೊಗಾ ಘೋಲಿ ಖುರ್ದ್ ಜಿಲ್ಲೆಯ ನಿವಾಸಿ ಪ್ರೀತಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ಹಿಂದೆ ಸಂಗ್ರೂರಿನಲ್ಲಿಯೂ ಖಲಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಬರೆದ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ವಿವಿಧ ಸ್ಥಳಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಪೊಲೀಸರು ಈ ಆರೋಪಿಗಳನ್ನು ಬಂಧಿಸಿದ್ದರು. ಬಂಧಿತ ಆರೋಪಿಗಳು ಕಳೆದ ವರ್ಷ ಜೂನ್ 19 ಮತ್ತು 20 ರಂದು ಸಂಗ್ರೂರಿನ ಕಾಳಿ ಮಾತಾ ದೇವಾಲಯದ ಹೊರ ಗೋಡೆಗಳು ಮತ್ತು ಬಾಗಿಲುಗಳ ಮೇಲೆ ಮತ್ತು ಜೂನ್ 26 ಮತ್ತು 27 ರಂದು ಸರ್ಕಾರಿ ಕಚೇರಿಗಳ ಗೋಡೆಗಳ ಮೇಲೆ ಖಲಿಸ್ತಾನ್ ಜಿಂದಾಬಾದ್ ಮತ್ತು ಎಸ್ಎಫ್ಜೆ ಘೋಷಣೆಗಳನ್ನು ಬರೆದಿದ್ದರು ಎಂದು ಪೊಲೀಸರು ತಿಳಿಸಿದ್ದರು.
ಇದನ್ನೂ ಓದಿ: ಡಿವೈಡರ್ ಹಾರಿ ಟ್ರಕ್ಗೆ ಗುದ್ದಿದ ಕಾರು; ಸ್ಥಳದಲ್ಲೇ 6 ಜನ ಸಾವು - UP Road Accident