ಜೈಪುರ: ಲೋಕಸಭೆ ಚುನಾವಣೆಯ ಫಲಿತಾಂಶದ ಕುರಿತು ತೀವ್ರ ಟೀಕೆ ವ್ಯಕ್ತಪಡಿಸಿದ ಹಿರಿಯ ಆರ್‌ಎಸ್‌ಎಸ್ ನಾಯಕ ಇಂದ್ರೇಶ್ ಕುಮಾರ್ ಆಡಳಿತಾರೂಢ ಬಿಜೆಪಿಯನ್ನು 'ಅಹಂಕಾರ್' ಎಂದು ಜರಿದಿದ್ದಾರೆ. ಇದೇ ವೇಳೆ ಇಂಡಿಯಾ ಮೈತ್ರಿ ಕೂಟವನ್ನು ಸಹ 'ರಾಮ ವಿರೋಧಿ' ಎಂದು ಕರೆಯುವ ಮೂಲಕ ವಾಗ್ದಾಳಿ ನಡೆಸಿದ್ದಾರೆ.
ಜೈಪುರ ಸಮೀಪದ ಕನೋಟಾದಲ್ಲಿ ನಡೆದ 'ರಾಮರಥ ಅಯೋಧ್ಯಾ ಯಾತ್ರೆ ದರ್ಶನ ಪೂಜಾನ್ ಸಮರೋಹ್'ದಲ್ಲಿ ಮಾತನಾಡಿದ ಅವರು, ಯಾವುದೇ ರಾಜಕೀಯ ನಾಯಕರ ಹೆಸರನ್ನು ಉಲ್ಲೇಖಿಸದೇ, ಚುನಾವಣಾ ಫಲಿತಾಂಶವು ಅವರ ವರ್ತನೆಗಳನ್ನು ಪ್ರತಿಬಿಂಬಿಸುತ್ತದೆ ಎಂದಷ್ಟೇ ಹೇಳುವ ಮೂಲಕ ಕಿಡಿ ಕಾರಿದರು.
ಭಗವಾನ್ ರಾಮನನ್ನು ಪೂಜಿಸಿದವರು ಕ್ರಮೇಣ ದುರಹಂಕಾರಿಗಳಾದರು. ದೊಡ್ಡ ಪಕ್ಷ ಎಂದು ಹೇಳಿಕೊಳ್ಳುವವರನ್ನು ಹಾಗೂ ದುರಹಂಕಾರಿಗಳಾದವರನ್ನು ಶ್ರೀರಾಮನು 240ಕ್ಕೆ ನಿಲ್ಲಿಸಿದ. ಅಲ್ಲದೇ ರಾಮನನ್ನು ವಿರೋಧಿಸಿದವರಲ್ಲಿ ಯಾರಿಗೂ ಅಧಿಕಾರ ಸಿಕ್ಕಿಲ್ಲ. ಎಲ್ಲರೂ ಜೊತೆಯಾಗಿದ್ದರೂ ಎರಡನೇ ಸ್ಥಾನ ದೊರೆಯಿತು. ದೇವರ ನ್ಯಾಯ ನಿಜ ಮತ್ತು ಆನಂದದಾಯಕ ಎಂದು ಇಂಡಿಯಾ ಕೂಟದ ವಿರುದ್ಧವೂ ವಾಗ್ದಾಳಿ ನಡೆಸಿದರು.
ರಾಮನನ್ನು ಆರಾಧಿಸುವವರು ವಿನೀತರಾಗಿರಬೇಕು ಮತ್ತು ರಾಮನನ್ನು ವಿರೋಧಿಸಿದವರನ್ನು ರಾಮನೇ ನೋಡಿಕೊಂಡ ಎಂದು ಹೇಳಿದ ಅವರು, ಶ್ರೀರಾಮ ಯಾರಿಗೂ ನೋವುಂಟು ಮಾಡುವುದಿಲ್ಲ, ಎಲ್ಲರಿಗೂ ನ್ಯಾಯ ಒದಗಿಸುತ್ತಾರೆ. ರಾಮ ಯಾವತ್ತೂ ನ್ಯಾಯದ ಪರ ಎಂದು ಇಂದ್ರೇಶ್ ಕುಮಾರ್ ಹೇಳಿದ್ದಾರೆ.
ದಾರ್ಷ್ಟ್ಯದಿಂದ ಕೆಲಸ ಮಾಡುವವನು ನಿಜವಾದ ಸೇವಕ ಆಗಲು ಸಾಧ್ಯವಿಲ್ಲ ಎಂದು ಇತ್ತೀಚೆಗಷ್ಟೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹೇಳಿಕೆ ನೀಡಿದ್ದರು. ಇದೀಗ ಇಂದ್ರೇಶ್ ಕುಮಾರ್ ಕೂಡ ಅದೇ ದಾಟಿಯಲ್ಲಿ ಹೇಳಿಕೆ ನೀಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಬಹುಮತ ಪಡೆಯಲು ವಿಫಲವಾದ ಬಳಿಕ ಇವರ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.
ಇದನ್ನೂ ಓದಿ: ಕಾಂಗ್ರೆಸ್ ಬಗ್ಗೆ ಮೋಹನ್ ಭಾಗವತ್ ಶ್ಲಾಘಿಸಿದ್ದು 2018ರಲ್ಲಿ, ಈಗಲ್ಲ; ಫ್ಯಾಕ್ಟ್ ಚೆಕ್ ಇಲ್ಲಿದೆ - Fact Check