ಶ್ರೀನಗರ: ಜಮ್ಮು- ಕಾಶ್ಮೀರ ಕಣಿವೆಯಲ್ಲಿ ಕೆಲ ದಿನಗಳಿಂದ ಗುಂಡಿನ ಜೋರಾಗಿದೆ. ಬಂಡಿಪೋರಾ ಜಿಲ್ಲೆಯಲ್ಲಿ ಭಾನುವಾರ ಮತ್ತು ಸೋಮವಾರ ಮಧ್ಯರಾತ್ರಿ ನಡೆದ ಎನ್ಕೌಂಟರ್ನಲ್ಲಿ ಓರ್ವ ಉಗ್ರನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಇನ್ನಷ್ಟು ಭಯೋತ್ಪಾದಕರು ಅಡಗಿರುವ ಶಂಕೆಯ ಮೇಲೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಭಾನುವಾರ ರಾತ್ರಿ ಜಿಲ್ಲೆಯ ಅರಗಾಂ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ಆರಂಭಿಸಿದರು. ಈ ವೇಳೆ ಉಗ್ರರು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಓರ್ವ ಭಯೋತ್ಪಾದಕನನ್ನು ಬೇಟೆ ಆಡಿರುವ ಬಗ್ಗೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಸೇನಾ ಸಿಬ್ಬಂದಿ, ಜೂನ್16-17ರ ಮಧ್ಯರಾತ್ರಿ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಡಿಪೋರಾದ ಅರಗಂ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದರು. ಗುಂಡಿನ ಚಕಮಕಿಯಲ್ಲಿ ಒಬ್ಬ ಭಯೋತ್ಪಾದಕನನ್ನು ಎನ್‌ಕೌಂಟರ್ ಮಾಡಲಾಗಿದೆ. ಕಾರ್ಯಾಚರಣೆ ಮುಂದುವರಿದಿದೆ ಎಂದು ಚಿನಾರ್ ಕಾರ್ಪ್ಸ್ ತಿಳಿಸಿದೆ.
ಭದ್ರತಾ ಸಿಬ್ಬಂದಿಯ ಮೇಲೆ ಉಗ್ರರು ದಾಳಿ ನಡೆಸಿದ ನಂತರ ಗುಂಡಿನ ಚಕಮಕಿ ನಡೆಯಿತು. ಹತನಾದ ಉಗ್ರನ ಗುರುತು ಇನ್ನೂ ಪತ್ತೆಯಾಗಿಲ್ಲ. ಎನ್‌ಕೌಂಟರ್ ಸ್ಥಳದಲ್ಲಿ ಮೃತದೇಹ ಪತ್ತೆಯಾಗಿದ್ದು, ಈ ಪ್ರದೇಶದಲ್ಲಿ ಇನ್ನಷ್ಟು ಭಯೋತ್ಪಾದಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಲಾಜಿಲ್ಲದೇ ಹೊಡೆದು ಹಾಕಿ: ಕಣಿವೆ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಸರಣಿ ದಾಳಿಗಳು ನಡೆದಿರುವುದು ಆತಂಕಕಾರಿ ವಿಷಯವಾಗಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಿರಿಯ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು, ಉಗ್ರರನ್ನು ಮುಲಾಜಿಲ್ಲದೇ ಹೊಡೆದುಹಾಕುವಂತೆ ಆದೇಶಿಸಿದ್ದಾರೆ.
ಕೆಲ ದಿನಗಳಿಂದ ಶಾಂತವಾಗಿದ್ದ ಜಮ್ಮು- ಕಾಶ್ಮೀರದಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿಬಂದಿದ್ದು, ಭಯೋತ್ಪಾದಕರ ಸದ್ದಡಗಿಸಲು ಕೇಂದ್ರ ಸರ್ಕಾರ ಎಲ್ಲ ನೆರವು ನೀಡಿದೆ. ಉಗ್ರರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಲು ಅವಕಾಶವಿದೆ. ಕಾಶ್ಮೀರದಲ್ಲಿ ಮತ್ತೆ ಶಾಂತಿ ನೆಲೆಸಬೇಕು ಎಂದು ಗೃಹ ಸಚಿವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಒಂದು ವಾರದಲ್ಲಿ ನಾಲ್ಕು ಭಯೋತ್ಪಾದಕ ದಾಳಿಗಳು ನಡೆದಿವೆ. ಒಂಬತ್ತು ಯಾತ್ರಿಕರು ಮತ್ತು ಒಬ್ಬ ಸಿಆರ್‌ಪಿಎಫ್ ಯೋಧ ಪ್ರಾಣ ಕಳೆದುಕೊಂಡಿದ್ದಾರೆ. ಈಗಾಗಲೇ ಅಲರ್ಟ್ ಆಗಿರುವ ಭದ್ರತಾ ಪಡೆಗಳು ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿವೆ.