ಹೈದರಾಬಾದ್: ಪೋನ್ ಕದ್ದಾಲಿಕೆ ಪ್ರಕರಣ ಮತ್ತು ಸಾಕ್ಷ್ಯ ನಾಶ ಪ್ರಕರಣದಲ್ಲಿ ಹಲವಾರು ಸ್ಪೋಟಕ ಮಾಹಿತಿಗಳು ಬಹಿರಂಗವಾಗಿವೆ. ವಿಶೇಷ ಗುಪ್ತಚರ ದಳದಲ್ಲಿ (ಎಸ್ಐಬಿ) ಆರೋಪಿಗಳು 45 ನಿಮಿಷಗಳಲ್ಲಿ ಎಲ್ಲ ಸಾಕ್ಷ್ಯಗಳನ್ನು ನಾಶಪಡಿಸಿದ್ದಾರೆ ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ಮರುದಿನ ಡಿಸೆಂಬರ್ 4 ರಂದು ಸಂಜೆ 7.30 ರಿಂದ 8.15 ರ ಅವಧಿಯಲ್ಲಿ ಎಸ್ಐಬಿಯಲ್ಲಿನ ಕಂಪ್ಯೂಟರ್ಗಳ ಹಾರ್ಡ್ ಡಿಸ್ಕ್ಗಳನ್ನು ಕಟರ್ಗಳಿಂದ ಕತ್ತರಿಸಲಾಗಿದೆ ಎಂದು ತಿಳಿದು ಬಂದಿದೆ. ಸಾಕ್ಷ್ಯ ನಾಶ ಪ್ರಕರಣದ ಪ್ರಮುಖ ಆರೋಪಿ, ಅಮಾನತುಗೊಂಡ ಸಿರಿಸಿಲ್ಲಾ ಡಿಸಿಆರ್ಬಿ ಡಿಎಸ್ಪಿ ದುಗ್ಯಾಲ ಪ್ರಣೀತ್ ರಾವ್ ಈ ಎಲ್ಲ ಮಾಹಿತಿಯನ್ನು ಪೊಲೀಸರ ಎದುರು ಬಹಿರಂಗಪಡಿಸಿದ್ದಾರೆ.
ನ್ಯಾಯಾಲಯಕ್ಕೆ ಸಲ್ಲಿಸಲಾದ ಪ್ರಣೀತ್ ರಾವ್ ಅವರ ತಪ್ಪೊಪ್ಪಿಗೆ ಹೇಳಿಕೆಯಲ್ಲಿನ ವಿಷಯಗಳು ಇತ್ತೀಚೆಗೆ ಬೆಳಕಿಗೆ ಬಂದಿದೆ. ಆರೋಪಿಯ ತಪ್ಪೊಪ್ಪಿಗೆ ಹೇಳಿಕೆ ಹೀಗಿದೆ:
"ಕಳೆದ ವರ್ಷ ನವೆಂಬರ್ 30 ರಂದು ಚುನಾವಣೆ ನಡೆದಾಗ ನಾವು ಫೋನ್ ಕದ್ದಾಲಿಸುವುದನ್ನು ನಿಲ್ಲಿಸಿದೆವು. ಎಕ್ಸಿಟ್ ಪೋಲ್ ಫಲಿತಾಂಶಗಳು ಬಿಡುಗಡೆಯಾದ ನಂತರ ಕದ್ದಾಲಿಕೆಗೆ ಸಂಬಂಧಿಸಿದ ಎಲ್ಲ ಎಲೆಕ್ಟ್ರಾನಿಕ್ ಪುರಾವೆಗಳು ಮತ್ತು ದಾಖಲೆಗಳನ್ನು ನಾಶಪಡಿಸುವಂತೆ ಎಸ್ಐಬಿ ಮುಖ್ಯಸ್ಥ ಪ್ರಭಾಕರ್ ರಾವ್ ಆದೇಶಿಸಿದರು. ಬಿಆರ್ಎಸ್ ಚುನಾವಣೆಯಲ್ಲಿ ಸೋತ ನಂತರ ಅವರು ಡಿಸೆಂಬರ್ 4 ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಕಚೇರಿಯಿಂದ ಹೊರಡುವ ಮೊದಲು ಪುರಾವೆಗಳನ್ನು ಅಳಿಸಲು ಅವರು ನಮಗೆ ಆದೇಶಿಸಿದ್ದರಿಂದ, ನಾವು ಕಂಪ್ಯೂಟರ್ ಮತ್ತು ಸರ್ವರ್ಗಳಲ್ಲಿನ ಪುರಾವೆಗಳನ್ನು ನಾಶಪಡಿಸಿದೆವು."
"ಅದೇ ದಿನ ರಾತ್ರಿ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡುವಂತೆ ಆರ್ಎಸ್ಐ ಅನಿಲ್ ಕುಮಾರ್ಗೆ ನಾನು ಸೂಚನೆ ನೀಡಿದ್ದೆ. ಆತ ಆರಂಭದಲ್ಲಿ ಹಾಗೆ ಮಾಡಲು ನಿರಾಕರಿಸಿದ. ನಾನು ಅದನ್ನು ಪ್ರಭಾಕರ್ ರಾವ್ ಅವರಿಗೆ ತಿಳಿಸಿದೆ. ತಮ್ಮ ಆದೇಶಗಳನ್ನು ಮೀರುವಂತಿಲ್ಲ ಎಂದು ಪ್ರಭಾಕರ್ ರಾವ್ ಹೇಳಿದರು. ಅವರ ಆದೇಶದಂತೆ ಅನಿಲ್ ಕುಮಾರ್ ರಾತ್ರಿ 7.30 ಕ್ಕೆ ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ. ನಂತರ ಆರ್ಎಸ್ಐ ಹರಿಕೃಷ್ಣ ಅವರು ಕಂಪ್ಯೂಟರ್ ಸಿಸ್ಟಮ್ಗಳು ಮತ್ತು ಸರ್ವರ್ಗಳಲ್ಲಿನ 50 ಹಾರ್ಡ್ ಡಿಸ್ಕ್ಗಳನ್ನು ತೆಗೆದುಹಾಕಿದರು. ಅದೇ ಸಮಯದಲ್ಲಿ ಶ್ರೀನಿವಾಸ್, ಅನಂತ್ ಮತ್ತು ಕನ್ವರ್ಜೆನ್ಸ್ ಇನ್ನೋವೇಶನ್ ಲ್ಯಾಬ್ಸ್ನ ಇನ್ನೊಬ್ಬ ವ್ಯಕ್ತಿ ಎಸ್ಐಬಿಗೆ ಬಂದು ಹೊಸ ಸರ್ವರ್ ಮತ್ತು ಹಾರ್ಡ್ ಡಿಸ್ಕ್ಗಳನ್ನು ನೀಡಿದರು. ಹಳೆಯವುಗಳನ್ನು ತೆಗೆದು ಹಾಕಿ ಹೊಸದನ್ನು ಇನ್ಸ್ಟಾಲ್ ಮಾಡಿದೆವು. ಹೆಡ್ ಕಾನ್ಸ್ಟೆಬಲ್ ಕೃಷ್ಣ ಹಳೆಯದನ್ನು ವಿದ್ಯುತ್ ಕಟ್ಟರ್ನಿಂದ ಕತ್ತರಿಸಿದರು. ನಂತರ ನಾವು ನಾಶವಾದ ಹಾರ್ಡ್ ಡಿಸ್ಕ್ಗಳನ್ನು ಸಂಗ್ರಹಿಸಿಕೊಂಡೆವು. ನಾನು ನನ್ನ ಸೆಲ್ ಫೋನ್ ಮತ್ತು ಲ್ಯಾಪ್ ಟಾಪ್ ಅನ್ನು ಫಾರ್ಮ್ಯಾಟ್ ಮಾಡಿದೆ. ಪೆನ್ ಡ್ರೈವ್ ಗಳನ್ನು ಸಹ ಎಸೆದೆ. ಅದೇ ತಿಂಗಳ 13ರಂದು ಸರ್ಕಾರ ನನ್ನನ್ನು ಎಸ್ಐಬಿ ಸೇವೆಯಿಂದ ಮುಕ್ತಗೊಳಿಸಿ ಡಿಜಿಪಿ ಕಚೇರಿಗೆ ನಿಯೋಜಿಸಿತು. ನಂತರ, ನನ್ನನ್ನು ಡಿಸಿಆರ್ಬಿ ಡಿಎಸ್ಪಿಯಾಗಿ ಸಿರಿಸಿಲ್ಲಾಕ್ಕೆ ವರ್ಗಾಯಿಸಲಾಯಿತು" ಎಂದು ಪ್ರಣೀತ್ ರಾವ್ ತಮ್ಮ ಸಾಕ್ಷ್ಯದಲ್ಲಿ ತಿಳಿಸಿದ್ದಾರೆ.
"ಎಸ್ಐಬಿಯಲ್ಲಿ ವಿಶೇಷ ಕಾರ್ಯಗಳಿಗಾಗಿ ನಾವು ಇಬ್ಬರು ಇನ್ಸ್ಪೆಕ್ಟರ್ಗಳು, ಎಸ್ಐಗಳು, ಎಎಸ್ಐಗಳು ಮತ್ತು ಮೂವರು ಕಾನ್ಸ್ಟೇಬಲ್ಗಳನ್ನು ಒಳಗೊಂಡ ತಂಡವೊಂದನ್ನು ರಚಿಸಿದ್ದೆವು. ಕೋಡಾಡಾದ ಇನ್ಸ್ಪೆಕ್ಟರ್ ಗುಂಡು ವೆಂಕಟೇಶ್ವರ ರಾವ್ ನಮ್ಮ ಜಾತಿಯವರೇ ಆಗಿದ್ದರು. ಹೀಗಾಗಿ ಪ್ರಭಾಕರ್ ರಾವ್ ಅವರ ಪ್ರಭಾವದಿಂದ ನಾವು ಅವರನ್ನು ಗುಪ್ತಚರ ಇಲಾಖೆಗೆ ಸೇರಿಸಿಕೊಂಡೆವು. ಆಂಧ್ರಪ್ರದೇಶದ ಕೈಕಾಲೂರಿನ ಇನ್ಸ್ಪೆಕ್ಟರ್ ಬಾಳೆ ರವಿಕಿರಣ್ ನನ್ನ ಬಾಲ್ಯದ ಸ್ನೇಹಿತ. ಹೀಗಾಗಿ ಅವನನ್ನೂ ಜೊತೆಗೆ ಸೇರಿಸಿಕೊಂಡೆವು.ನಮಗೆ ವಿಶ್ವಾಸಾರ್ಹರಾದ ಎಸ್ಐಗಳಾದ ಹನುಮಂತ ರಾವ್, ಶ್ರೀನಿವಾಸ್, ಎಸ್ಐಗಳಾದ ಬ್ರಹ್ಮಚಾರಿ, ಮಾಧವರಾವ್, ಹೆಡ್ ಕಾನ್ಸ್ಟೇಬಲ್ಗಳಾದ ಯಡಯ, ರಫಿ, ಕಾನ್ಸ್ಟೆಬಲ್ಗಳಾದ ಹರೀಶ್, ಸಂದೀಪ್ ಮತ್ತು ಮಧುಕರ್ ರಾವ್ ಅವರನ್ನು ನಮ್ಮ ತಂಡದಲ್ಲಿ ಸೇರಿಸಿಕೊಂಡಿದ್ದೆವು" ಎಂದು ಪ್ರಣೀತ್ ರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನಾನು 2007ರಲ್ಲಿ ಎಸ್ಐ ಆಗಿ ಪೊಲೀಸ್ ಇಲಾಖೆಗೆ ಸೇರಿದೆ. ನವೆಂಬರ್ 2008 ರಲ್ಲಿ, ನಲ್ಗೊಂಡ ಜಿಲ್ಲೆಯ ಮೋತ್ಕುರು ಥಾನಾದಲ್ಲಿ ಪ್ರಾಯೋಗಿಕ ತರಬೇತಿ ಪಡೆದೆ. ಅಧಿಕಾರ ದುರುಪಯೋಗ ಪ್ರಕರಣದಲ್ಲಿ ಆಗಿನ ಎಸ್ಪಿ ರಾಜೇಶ್ ಕುಮಾರ್ ನನ್ನ ವಿರುದ್ಧ ಶಿಸ್ತು ಕ್ರಮ ಕೈಗೊಂಡರು. ಪ್ರಭಾಕರ್ ರಾವ್ ಅವರು ನಲ್ಗೊಂಡದ ಎಸ್ಪಿಯಾಗಿ ಬಂದ ನಂತರ, ಸಾಮಾಜಿಕ ಸಂಪರ್ಕದ ಭಾಗವಾಗಿ ನನ್ನನ್ನು ಬೀಬಿನಗರದ ಎಸ್ಐ ಆಗಿ ನೇಮಿಸಲಾಯಿತು. ಅಂದಿನಿಂದ ಅವರೊಂದಿಗೆ ನನ್ನ ಸಂಬಂಧಗಳು ಹೆಚ್ಚಾದವು. 2016ರಲ್ಲಿ ಪ್ರಭಾಕರ್ ರಾವ್ ಗುಪ್ತಚರ ಇಲಾಖೆಗೆ ಸೇರಿದಾಗ ನಾನೂ ಕೂಡ ಅವರೊಂದಿಗೆ ಸೇರಿಕೊಂಡೆ. ಆರಂಭದಲ್ಲಿ ನನಗೆ ಗುಪ್ತಚರ ಇಲಾಖೆಯಲ್ಲಿ ಯಾವುದೇ ಕೆಲಸವನ್ನು ನಿಯೋಜಿಸಿರಲಿಲ್ಲ. ನಂತರ ನನಗೆ ಎಸ್ಐಬಿಯಲ್ಲಿ ಪೋಸ್ಟಿಂಗ್ ನೀಡಿದರೂ, ಪ್ರಭಾಕರ್ ರಾವ್ ಸೂಚಿಸಿದಂತೆ ನಾನು ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೆ. 2017ರ ಡಿಸೆಂಬರ್ 29ರಂದು ಜ್ಯೇಷ್ಠತಾ ಆಧಾರದ ಮೇಲೆ ನನಗೆ ಇನ್ಸ್ಪೆಕ್ಟರ್ ಆಗಿ ಬಡ್ತಿ ಸಿಕ್ಕಿತು. ಪ್ರಭಾಕರ್ ರಾವ್ ಐಜಿಯಾಗಿ ಬಡ್ತಿ ಪಡೆದು ಎಸ್ಐಬಿ ಮುಖ್ಯಸ್ಥರಾದ ನಂತರ, ನನ್ನನ್ನು ಮತ್ತೆ ಎಸ್ಐಬಿಗೆ ಕರೆದೊಯ್ಯಲಾಯಿತು. ಪ್ರಭಾಕರ್ ರಾವ್ ಅವರು 2021 ರಲ್ಲಿ ನನಗೆ ಡಿಎಸ್ಪಿಯಾಗಿ ತ್ವರಿತ ಬಡ್ತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾಪಿಸಿದರು. ಆದರೆ, ಅದನ್ನು ತಿರಸ್ಕರಿಸಲಾಯಿತು. ಡಿಸೆಂಬರ್ 2022 ರಲ್ಲಿ, ಪ್ರಭಾಕರ್ ರಾವ್ ಮತ್ತೆ ಅದನ್ನು ಪ್ರಸ್ತಾಪಿಸಿದರು ಮತ್ತು ನನಗೆ ಡಿಎಸ್ಪಿಯಾಗಿ ಬಡ್ತಿ ಸಿಕ್ಕಿತು. ನಮ್ಮ ಬ್ಯಾಚ್ನಲ್ಲಿ ಡಿಎಸ್ಪಿಯಾಗಿ ಬಡ್ತಿ ಪಡೆದ ಏಕೈಕ ವ್ಯಕ್ತಿ ನಾನು" ಎಂದು ಪ್ರಣೀತ್ ರಾವ್ ಹೇಳಿದರು.
"ಎಸ್ಐಬಿ ಕಚೇರಿಯ ಮೊದಲ ಮಹಡಿಯಲ್ಲಿರುವ ಪ್ರಭಾಕರ್ ರಾವ್ ಅವರ ಕೊಠಡಿಯ ಪಕ್ಕದಲ್ಲಿ ನಮಗೆ ಎರಡು ಕೊಠಡಿಗಳನ್ನು ನೀಡಲಾಗಿತ್ತು. ನಮ್ಮ ತಂಡಕ್ಕೆ ವಿಶೇಷ ಕಾರ್ಯಾಚರಣೆ ತಂಡ (ಎಸ್ಒಟಿ) ಎಂದು ಹೆಸರಿಸಲಾಗಿತ್ತು. ಇಂಥ ತಂಡ ಈ ಹಿಂದೆ ಯಾವತ್ತೂ ಇರಲಿಲ್ಲ. ಹೈದರಾಬಾದ್ನ ಕನ್ವರ್ಜೆನ್ಸ್ ಇನ್ನೋವೇಶನ್ ಲ್ಯಾಬ್ಸ್ ಒದಗಿಸಿದ ಸಾಧನಗಳನ್ನು ಬಳಸಿ ರಾಜಕೀಯ ನಾಯಕರ ಪ್ರೊಫೈಲ್ಗಳನ್ನು ರಚಿಸುವುದು ನಮ್ಮ ಕೆಲಸವಾಗಿತ್ತು. ಇದಕ್ಕಾಗಿ ನಾವು 17 ಕಂಪ್ಯೂಟರ್ಗಳು, ಒಂದು ಲ್ಯಾಪ್ ಟಾಪ್ ಮತ್ತು ಕೆಲ ಪೆನ್ಡ್ರೈವ್ಗಳನ್ನು ಪಡೆದುಕೊಂಡೆವು. ನಮಗೆ ಡೆಡಿಕೇಟೆಡ್ ಲೀಸ್ಡ್ ಲೈನ್ ಇಂಟರ್ನೆಟ್ ನೀಡಲಾಗಿತ್ತು. ವಿಶೇಷ ಮೇಲ್ ಐಡಿಗಳು ಮತ್ತು ರಿಕ್ವೆಸ್ಟ್ ಐಡಿಗಳ ಮೂಲಕ ಕಾಲ್ ಡೇಟಾ ರೆಕಾರ್ಡರ್ (ಸಿಡಿಆರ್), ಐಎಂಇಐ ಮತ್ತು ಲೋಕೇಶನ್ ಮಾಹಿತಿಗಳನ್ನು ಸಂಗ್ರಹಿಸಲು ನಮಗೆ ಅನುಮತಿ ನೀಡಲಾಯಿತು. ನಾವು 1000 ದಿಂದ 1200 ಜನರ ಪ್ರೊಫೈಲ್ಗಳನ್ನು ತಯಾರಿಸಿ ಅವರೆಲ್ಲರ ಸಂಭಾಷಣೆಗಳನ್ನು ರಹಸ್ಯವಾಗಿ ಕೇಳಲಾರಂಭಿಸಿದೆವು. ನನ್ನ ಬಳಿ ಎಸ್ಐಬಿ ನೀಡಿದ ಮೂರು ಅಧಿಕೃತ ಫೋನ್ ನಂಬರ್ ಇದ್ದವು. ಅಲ್ಲದೇ ಇನ್ನೂ ಐದು ನಂಬರ್ಗಳನ್ನು ನಾನು ಬಳಸುತ್ತಿದ್ದೆ." ಎಂದು ಪ್ರಣೀತ್ ರಾವ್ ತಮ್ಮ ಸಾಕ್ಷ್ಯದಲ್ಲಿ ತಿಳಿಸಿದ್ದಾರೆ.
ಭುಜಂಗರಾವ್, ತಿರುಪತಣ್ಣ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ: ಫೋನ್ ಕದ್ದಾಲಿಕೆ ಪ್ರಕರಣದ ಆರೋಪಿಗಳಾದ ಭುಜಂಗರಾವ್ ಮತ್ತು ತಿರುಪತಣ್ಣ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ನಾಂಪಲ್ಲಿ ನ್ಯಾಯಾಲಯ ಜೂನ್ 3 ಕ್ಕೆ ಮುಂದೂಡಿದೆ. ಹೆಚ್ಚುವರಿ ಎಸ್ಪಿ ಭುಜಂಗ ರಾವ್ ಮತ್ತು ಹೆಚ್ಚುವರಿ ಡಿಸಿಪಿ ತಿರುಪತಣ್ಣ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ಬುಧವಾರ ವಿಚಾರಣೆ ನಡೆಸಿತು. ಅವರ ವಿರುದ್ಧ ಕೌಂಟರ್ ಸಲ್ಲಿಸುವಂತೆ ಪಂಜಗುಟ್ಟ ಪೊಲೀಸರಿಗೆ ನೋಟಿಸ್ ನೀಡಿದ್ದಾರೆ.
ಹಿಂದಿನ ಸರ್ಕಾರದ ಅವಧಿಯಲ್ಲಿ ಖಾಸಗಿ ವ್ಯಕ್ತಿಗಳ ಫೋನ್ಗಳನ್ನು ಟ್ಯಾಪ್ ಮಾಡುವಲ್ಲಿ ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವಲ್ಲಿ ಇಬ್ಬರೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಪೊಲೀಸರು ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಆರೋಪಿಗಳು ಈ ಹಿಂದೆ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ಮತ್ತೆ ಅರ್ಜಿ ಸಲ್ಲಿಸಲಾಗಿದೆ. ಇದೇ ಪ್ರಕರಣದ ಮತ್ತೊಬ್ಬ ಆರೋಪಿ, ಮಾಜಿ ಡಿಸಿಪಿ ರಾಧಾಕಿಶನ್ ರಾವ್ ಅವರು ಮನೆಯಿಂದ ಊಟ ತರಿಸಿಕೊಳ್ಳಲು ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಎರಡು ದಿನ ಮುಂಚಿತವಾಗಿಯೇ ಕೇರಳಕ್ಕೆ ಅಪ್ಪಳಿಸಿದ ಮುಂಗಾರು; ಅನ್ನದಾತರ ಸಂಭ್ರಮ; ಕರ್ನಾಟಕಕ್ಕೆ ಯಾವಾಗ? - monsoon arrives in kerala