ಹೈದರಾಬಾದ್, ತೆಲಂಗಾಣ:ನಿಮ್ಮ ಕುಟುಂಬದ ಯಾರಾದರೂ ರಾಜಕೀಯ ಸ್ಥಾನಗಳನ್ನು ಪಡೆದಿದ್ದಾರೆಯೇ?, ಸಾರ್ವಜನಿಕ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆಯೇ?, ನೀವು ಸರ್ಕಾರದ ಕಲ್ಯಾಣ ಯೋಜನೆಗಳ ಪ್ರಯೋಜನೆ ಪಡೆಯುತ್ತಿದ್ದೀರಾ?, ನಿಮ್ಮ ಮನೆಯಲ್ಲಿ ಎಷ್ಟು ಮಂದಿ ಉದ್ಯೋಗದಲ್ಲಿದ್ದಾರೆ? ನಿಮಗೆ ಜಮೀನು ಇದೆಯೇ?, ಕುಟುಂಬದಲ್ಲಿ ಎಷ್ಟು ಜನರ ಇದ್ದೀರಿ ? ವರ್ಷಕ್ಕೆ ಆದಾಯ? ಈ ಎಲ್ಲಾ ಪ್ರಶ್ನೆಗಳು ನಿಮಗೆ ಎದುರಾಗಲಿವೆ. ಜಾತಿ ಗಣತಿ ಮತ್ತು ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಇದೇ ರೀತಿಯ ಪ್ರಶ್ನೆಗಳನ್ನು ಕೇಳಲು ತೆಲಂಗಾಣದ ರಾಜ್ಯ ಯೋಜನಾ ಇಲಾಖೆ ಕರಡು ಪ್ರತಿ ಸಿದ್ಧಪಡಿಸಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಸಮೀಕ್ಷೆ ಆರಂಭಿಸಲು ಯೋಚಿಸಲಾಗಿದೆ. ಪ್ರತಿ ಕುಟುಂಬದ ಸದಸ್ಯರಿಂದ ಮಾಹಿತಿ ಸಂಗ್ರಹಿಸಲು ಹೀಗೆ ಒಟ್ಟು 60 ಪ್ರಶ್ನೆಗಳನ್ನು ಸಿದ್ಧಪಡಿಸಲಾಗಿದೆ.
ಇವುಗಳಲ್ಲಿ ಅರ್ಧದಷ್ಟು ಕೌಟುಂಬಿಕ ಹಿನ್ನೆಲೆಗೆ ಸಂಬಂಧಿಸಿದ್ದರೆ ಉಳಿದವು ವೈಯಕ್ತಿಕ ವಿವರಗಳಿಗೆ ಸಂಬಂಧಿಸಿವೆ. ಇವುಗಳಲ್ಲಿ ಯಾವುದು ಅಗತ್ಯ ಎಂಬುದನ್ನು ರಾಜ್ಯ ಸರ್ಕಾರ ನಿರ್ಧರಿಸಬೇಕಿದೆ. ರಾಜ್ಯ ಸರ್ಕಾರವು ಹಿಂದುಳಿದ ಜಾತಿಗಳ ವಿವರಗಳಿಗಾಗಿ ಈ ಸಮೀಕ್ಷೆಯನ್ನು ಮಾಡಲು ತೀರ್ಮಾನಿಸಿದೆ. BC ( ಹಿಂದುಗಳಿದ ಜಾತಿ)ಗಳ ಜೊತೆಗೆ ರಾಜ್ಯದ ಪ್ರತಿಯೊಬ್ಬ ಜನರ ಜಾತಿ ಮತ್ತು ಉಪಜಾತಿ ಯಾವುದು? ಜಾತಿ ಹೆಸರಿನಲ್ಲಿ ಸ್ಥಳೀಯ ಬದಲಾವಣೆಗಳಿವೆಯೇ? ಅಂತಹ ಎಲ್ಲಾ ವಿವರಗಳನ್ನು ಸಂಗ್ರಹಿಸಲು ನಿರ್ಧರಿಸಲಾಗಿದೆ. ಈ ಸಂದರ್ಭದಲ್ಲಿ ಯಾರಾದರೂ ತಪ್ಪಾಗಿ ಜಾತಿ ಹೆಸರು ನೋಂದಾಯಿಸಿದರೆ ಭವಿಷ್ಯದಲ್ಲಿ ಹಲವು ರೀತಿಯಲ್ಲಿ ಗಂಭೀರ ಹಾನಿಯಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ತಪ್ಪು ವಿವರಗಳು ದಾಖಲಾಗದಂತೆ ಮುನ್ನೆಚ್ಚರಿಕೆ ವಹಿಸಲು ಸ್ಥಳೀಯ ಅಧಿಕಾರಿಗಳು ಕೂಡಾ ನಿರ್ಧರಿಸಿದ್ದಾರೆ.
ಭವಿಷ್ಯದ ಯೋಜನೆಗಳಿಗಾಗಿ ಜಾತಿಗಣತಿ: ಈ ಸಮೀಕ್ಷೆ ನಡೆಸಿ, ಭವಿಷ್ಯದಲ್ಲಿ ಕಲ್ಯಾಣ ಯೋಜನೆಗಳ ಜತೆಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಸರ್ಕಾರದ ಯೋಚನೆಯಾಗಿದೆ . ಈ ಸಮೀಕ್ಷೆ ವೇಳೆ ಪ್ರತಿಯೊಬ್ಬರ ಆಧಾರ್, ಮೊಬೈಲ್ ಸಂಖ್ಯೆ ಮತ್ತು ವಯಸ್ಸು ಇತ್ಯಾದಿ ವಿವರಗಳನ್ನು ದಾಖಲಿಸಲಾಗುತ್ತದೆ. ಶಿಕ್ಷಣ, ಉದ್ಯೋಗ, ಸ್ವಂತ ಮನೆ, ಕಾರು, ಬೈಕ್ ಇದೆಯೇ? ಎಂದು ಕೇಳುವ ಮೂಲಕ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತದೆ . ಜನಗಣತಿಗಿಂತ ಹೆಚ್ಚಿನ ಮಾಹಿತಿಯನ್ನು ರಾಜ್ಯ ಸರ್ಕಾರ ಈ ಸಮೀಕ್ಷೆ ಮೂಲಕ ಸಂಗ್ರಹಿಸಲಿದೆ. ಪ್ರಸ್ತುತ ರಾಜ್ಯವು 3.80 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ ಮತ್ತು ಒಟ್ಟು ಕುಟುಂಬಗಳ ಸಂಖ್ಯೆ 1.10 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಇದರ ಪ್ರಕಾರ ಯೋಜನಾ ಇಲಾಖೆ ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
150 ಮನೆಗಳಿಗೆ ಒಬ್ಬರಂತೆ ಸಮೀಕ್ಷಾ ಗಣತಿದಾರ: ಪ್ರತಿ 150 ಮನೆಗಳಿಗೆ ಒಬ್ಬ ಸಮೀಕ್ಷಾ ಗಣತಿದಾರರನ್ನು ನೇಮಿಸಲು ತೀರ್ಮಾನಿಸಲಾಗಿದ್ದು, ಈ ಲೆಕ್ಕಾಚಾರದ ಪ್ರಕಾರ ಒಟ್ಟು 75 ಸಾವಿರ ಜನರ ಅಗತ್ಯವಿದೆ. ಇನ್ನು 15 ಸಾವಿರ ಮಂದಿ ಮೇಲ್ವಿಚಾರಕರ ಅಗತ್ಯವಿದೆ. ಅವರನ್ನು ನೇಮಿಸಲು ಎಲ್ಲ ಇಲಾಖೆಗಳ ಸಿಬ್ಬಂದಿಯಿಂದ ವಿವರ ಸಂಗ್ರಹಿಸಲಾಗುತ್ತಿದೆ. ಶಿಕ್ಷಕರನ್ನು ಸಮೀಕ್ಷೆಗೆ ಬಳಸಿಕೊಳ್ಳದಂತೆ ಈ ಹಿಂದೆ ನ್ಯಾಯಾಲಯದ ತೀರ್ಪುಗಳು ಬಂದಿರುವುದರಿಂದ ಈ ಸಮೀಕ್ಷೆಗೆ ಶಿಕ್ಷಣ ಇಲಾಖೆಯ ಇತರ ಸಾವಿರಾರು ನೌಕರರನ್ನು ನೇಮಿಸಲಾಗುವುದು. ಪ್ರತಿ ಸರ್ಕಾರಿ ಇಲಾಖೆಯಲ್ಲಿ ಎಷ್ಟು ಜನರನ್ನು ತೆಗೆದುಕೊಳ್ಳಬೇಕು ಎಂಬುದರ ಕುರಿತು ಜಿಲ್ಲಾವಾರು ವಿವರಗಳನ್ನು ಕಳುಹಿಸಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಜಿಎಚ್‌ಎಂಸಿಯೇ ಒಂದು ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವುದರಿಂದ ಇಲ್ಲಿ 30 ಸಾವಿರಕ್ಕೂ ಹೆಚ್ಚು ಗಣಕರು ಬೇಕಾಗುವ ನಿರೀಕ್ಷೆ ಇದೆ.
ಮಾದರಿ ತಪಾಸಣೆ ಸಮೀಕ್ಷೆ: ಕುಟುಂಬಗಳ ಸಂಖ್ಯೆ ಆಧರಿಸಿ ಜಿಲ್ಲೆಗಳಲ್ಲಿ ಎಲ್ಲ ಇಲಾಖೆಗಳಿಂದ ಸಮೀಕ್ಷೆಗೆ ಕನಿಷ್ಠ 2,500ರಿಂದ 3,000 ನೌಕರರನ್ನು ನೇಮಕಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ . ಇವರೆಲ್ಲ ಸೇರಿ 15 ದಿನಗಳ ಕಾಲ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆ ಮುಗಿದ ನಂತರ, ವಿವರಗಳನ್ನು ಸರಿಯಾಗಿ ಸಂಗ್ರಹಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಮಾದರಿ ತಪಾಸಣೆ ಸಮೀಕ್ಷೆಯನ್ನು ನಡೆಸಲು ಯೋಜಿಸಲಾಗಿದೆ. ಈ ತಿಂಗಳ ಅಂತ್ಯದೊಳಗೆ ಸಮೀಕ್ಷೆ ಆರಂಭಿಸಲು ಪ್ರಯತ್ನಿಸಲಾಗುತ್ತಿದೆ. ಈ ಸಮೀಕ್ಷಾ ವರದಿಯನ್ನು 60 ದಿನದೊಳಗೆ ರಾಜ್ಯ ಸರಕಾರಕ್ಕೆ ಸಲ್ಲಿಸುವುದು ಯೋಜನಾ ಇಲಾಖೆಯ ಪ್ರಮುಖ ಉದ್ದೇಶವಾಗಿದೆ.
ಇದನ್ನು ಓದಿ:ವಯನಾಡ್ ಲೋಕಸಭಾ ಉಪಚುನಾವಣೆ: ಅ.23ರಂದು ಪ್ರಿಯಾಂಕಾ ನಾಮಪತ್ರ ಸಾಧ್ಯತೆ