ತರ್ನ್ ತರನ್ (ಪಂಜಾಬ್): ತರ್ನ್ ತರನ್ ಜಿಲ್ಲೆಯ ಗಡಿಭಾಗದಲ್ಲಿನ ವಾಲ್ತೋಹಾ ಎಂಬಲ್ಲಿ ಮಹಿಳೆ ವಿವಸ್ತ್ರಗೊಳಿಸಿರುವ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ: ವಾಲ್ತೋಹಾ ಗ್ರಾಮದ ಯುವಕ ಮತ್ತು ಅದೇ ಗ್ರಾಮದ ಯುವತಿ ಪರಸ್ಪರ ಪ್ರೀತಿಸುತ್ತಿದ್ದು, ಓಡಿ ಹೋಗಿ ಕಳೆದ ತಿಂಗಳು ಪ್ರೇಮ ವಿವಾಹ ಮಾಡಿಕೊಂಡಿದ್ದರು. ಬಳಿಕ ಮಾ.31 ರಂದು ಇದೇ ವಿಚಾರವಾಗಿ ಎರಡು ಕುಟುಂಬಗಳ ಮಧ್ಯೆ ವಾಗ್ದಾದ ನಡೆದಿದೆ. ಈ ವೇಳೆ ಇಬ್ಬರು ಅಪರಿಚಿತರೊಂದಿಗೆ ಹುಡುಗಿಯ ಸಹೋದರ ಹುಡುಗನ ಮನೆ ಕಡೆ ತೆರಳಿ ಕಿರುಚಾಡಿದ್ದಾನೆ.
ಈ ವೇಳೆ ಹುಡುಗನ ತಾಯಿ (ಸಂತ್ರಸ್ತೆ) ಮನೆಯಿಂದ ಹೊರ ಬರುತ್ತಿದ್ದಂತೆ ಅವಳನ್ನು ಥಳಿಸಿ ಬಟ್ಟೆಗಳನ್ನು ಹರಿದು ಅರೆಬೆತ್ತಲೆಗೊಳಿಸಿದ್ದಾರೆ. ನಂತರ ಮೊಬೈಲ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾರೆ. ಈ ವೇಳೆ, ಸಂತ್ರಸ್ತೆ ಅಲ್ಲಿಂದ ಓಡಿ ಹೋಗಿ ಅಂಗಡಿಯೊಂದರಲ್ಲಿ ಅಡಗಿ ಕುಳಿತಿದ್ದು, ವಿಡಿಯೋದಲ್ಲಿ ಸೆರೆಯಾಗಿದೆ. ಅಲ್ಲದೇ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ವೈರಲ್ ಮಾಡುವ ಮೂಲಕ ಪೈಶಾಚಿಕ ಕೃತ್ಯ ಎಸಗಿದ್ದಾರೆ.
ಇದರಿಂದ ನೊಂದ ಯುವಕನ ತಾಯಿ ವಾಲ್ತೋಹಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಾಕ್ಷಿಯನ್ನಾಧರಿಸಿ ಏ.3ರಂದು ಐಪಿಸಿ ಸೆಕ್ಷನ್ 354, 354 ಬಿ, 354ಡಿ ಮತ್ತು 149 ಐಪಿಸಿ ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ತಲೆಮರಿಸಿಕೊಂಡಿರುವ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.
55 ವರ್ಷದ ಸಂತ್ರಸ್ತೆ ನೀಡಿದ ದೂರಿನಲ್ಲಿ, ’’ಸುಮಾರು ಒಂದು ತಿಂಗಳ ಹಿಂದೆ ನೆರೆ ಹೊರೆಯಲ್ಲಿ ವಾಸಿಸುವ ಹುಡುಗಿಯೊಂದಿಗೆ ತನ್ನ ಮಗ ರಿಜಿಸ್ಟರ್ ಮದುವೆಯಾಗಿದ್ದ. ಈ ಸಂಬಂಧ ಮಾರ್ಚ್ 31ರ ಸಂಜೆ, ಇಬ್ಬರು ಅಪರಿಚಿತ ವ್ಯಕ್ತಿಗಳೊಂದಿಗೆ ಹುಡುಗಿಯ ಸಹೋದರ ಮತ್ತು ತಾಯಿ ಮನೆ ಬಳಿ ಬಂದು ಕಿರುಚಾಡಿ ತನ್ನ ಬಟ್ಟೆಗಳನ್ನು ಹರಿದು ವಿವಸ್ತ್ರಗೊಳಿಸಿದ್ದಾರೆ ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಪಂಜಾಬ್ ಮಹಿಳಾ ಆಯೋಗದ ಅಧ್ಯಕ್ಷೆ ಶ್ರೀಮತಿ ರಾಜ್ ಕೌರ್ ಲಾಲಿ ಗಿಲ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ತಪ್ಪಿತಸ್ಥರ ವಿರುದ್ದ ಪೊಲೀಸರು ಕೂಡಲೇ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಯುವಕನ ಸಂಬಂಧಿ ಅರೆಬೆತ್ತಲೆಗೊಳಿಸಿ ಥಳಿತ ಆರೋಪ: ಓಡಿ ಹೋಗಿದ್ದ ಜೋಡಿ ಎಸ್ಪಿಗೆ ಮೊರೆ