ಚೆನ್ನೈ (ತಮಿಳುನಾಡು): ತಮಿಳುನಾಡು ಸಚಿವಾಲಯದಲ್ಲಿ ಬಾಂಬ್ ಇಡಲಾಗಿದೆ ಎಂದು ಖಾಸಗಿ ಟಿವಿ ವಾಹಿನಿ ಕಚೇರಿಯೊಂದಕ್ಕೆ ಇಂದು ಬೆಳಗ್ಗೆ ಅಪರಿಚಿತ ಬೆದರಿಕೆ ಕರೆಯೊಂದು ಬಂದಿದೆ. ಈ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ಮತ್ತು ಬಾಂಬ್ ನಿಷ್ಕ್ರೀಯ ತಂಡ ಸಚಿವಾಲಯ ಸಂಕೀರ್ಣದ ಸುತ್ತ ಸುತ್ತುವರಿದಿದೆ. ಬೆಳಗ್ಗಿನಿಂದ ಸಚಿವಾಲಯದ ಸುತ್ತ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸಾರ್ವಜನಿಕರು ಜಾಗರೂಕರಾಗಿರಿ, ಹಾಗೂ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಹಾಗೂ ವಸ್ತುಗಳು ಕಂಡಬಂದಲ್ಲಿ ತಕ್ಷಣವೇ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಇಂದು ಬೆಳಗ್ಗೆ ಸುಮಾರು 7.30ರ ಸಮಯಕ್ಕೆ ಖಾಸಗಿ ಟಿವಿ ಚಾನಲ್ ಒಂದರ ಕಚೇರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಬೆದರಿಕೆ ಫೋನ್ ಕರೆ ಮಾಡಿದ್ದರು. ಸಚಿವಾಲಯದಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿ ಏಕಾಏಕಿ ವ್ಯಕ್ತಿ ಕರೆ ಅಂತ್ಯಗೊಳಿಸಿದ್ದರು. ಇದರಿಂದ ಗಾಬರಿಗೊಂಡ ಚಾನೆಲ್ನವರು ತಕ್ಷಣವೇ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಯಪ್ರವೃತ್ತಗೊಂಡ ಇಲಾಖೆ ಸಚಿವಾಲಯ ಬಾಂಬ್ ಶೋಧ ಕಾರ್ಯಾಚರಣೆ ಕೈಗೊಂಡಿದೆ.
ಸಹಾಯಕ ಪೊಲೀಸ್ ಆಯುಕ್ತರ ನೇತೃತ್ವದ ತಂಡಗಳು, ಸಚಿವರ ಕೊಠಡಿಗಳು, ಅಧಿಕಾರಿಗಳ ಕೊಠಡಿಗಳು, ಸಭಾಂಗಣ, ಪಾರ್ಕಿಂಗ್ ಸ್ಥಳಗಳು ಸೇರಿದಂತೆ ಸಚಿವಾಲಯದ ಎಲ್ಲಾ ಪ್ರದೇಶಗಳಲ್ಲಿ ವ್ಯಾಪಕ ಶೋಧ ಕಾರ್ಯಾಚರಣೆ ಕೈಗೊಂಡರು. ಸಚಿವಾಲಯದಲ್ಲಿರುವ ಪ್ರತಿಯೊಬ್ಬರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ತೀವ್ರ ಶೋಧ ಕಾರ್ಯದಲ್ಲಿ ತೊಡಗಿದೆ.
ಕೆಲವು ದಿನಗಳ ಹಿಂದೆ ಚೆನ್ನೈನ 13 ಖಾಸಗಿ ಶಾಲೆಗಳಿಗೆ ಇದೇ ರೀತಿಯ ಬಾಂಬ್ ಬೆದರಿಕೆ ಕರೆ ಬಂದ ಬೆನ್ನಲ್ಲೆ ಇದೀಗ ಸಚಿವಾಲಯಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ. ಈ ಎರಡೂ ಘಟನೆಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ದೆಹಲಿ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಕರೆ