ಚೆನ್ನೈ (ತಮಿಳುನಾಡು): ನೀಟ್ ಪರೀಕ್ಷೆಯಲ್ಲಿ ಕೇಳಿಬಂದಿರುವ ಅಕ್ರಮವು ದೊಡ್ಡ ಹಗರಣವಾಗಿದೆ. ಇದು ವಿದ್ಯಾರ್ಥಿಗಳ ಹಿತಾಸಕ್ತಿಗೆ ಮಾರಕವಾಗಿದೆ. ಜೊತೆಗೆ ಸಾಮಾಜಿಕ ನ್ಯಾಯ ಮತ್ತು ಬಡವರ ವಿರುದ್ಧವಾಗಿದೆ. ಇದನ್ನು ಕೇಂದ್ರ ಸರ್ಕಾರ ಸಮರ್ಥನೆ ಮಾಡಿಕೊಳ್ಳಬಾರದು ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ಹೇಳಿದ್ದಾರೆ.
ನೀಟ್ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಟೀಕಿಸಿರುವ ಸಿಎಂ ಸ್ಟಾಲಿನ್ ಅವರು, ಅರ್ಹತಾ ಪರೀಕ್ಷೆಯ ಸುತ್ತಲಿನ ವಿವಾದಗಳನ್ನು ಗಮನಿಸಿದರೆ, ಅದು ಮೂಲಭೂತವಾಗಿ ಅಸಮಾನತೆಯ ಆಗರವಾಗಿದೆ. ಸಾವಿರಾರು ವರ್ಷಗಳಿಂದ ಅಕ್ಷರ ಜ್ಞಾನ ವಂಚಿತವಾಗಿದ್ದ ಜನರಿಗೆ ಶಿಕ್ಷಣ ದೊರೆಯುತ್ತಿದೆ. ಇದೀಗ, ಆ ಅವಕಾಶವನ್ನು ನೀಟ್ ಪರೀಕ್ಷೆ ಕಿತ್ತುಕೊಳ್ಳುತ್ತಿದೆ. ಸಮಾಜದಲ್ಲಿ ನಾವು ಪ್ರಗತಿಗೆ ಅವಕಾಶ ನೀಡಬೇಕು. ಇದಕ್ಕೆ ವಿರುದ್ಧವಾಗಿ ನೀಟ್ ಪರೀಕ್ಷೆ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಅಡ್ಡಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಕ್ರಮ ನಡೆದಿದೆ ಎಂದು ಶಂಕಿಸಲಾಗಿರುವ ಪರೀಕ್ಷೆ ನಡೆಸಿದ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಯನ್ನು ಕೇಂದ್ರ ಶಿಕ್ಷಣ ಸಚಿವರು ಸಮರ್ಥಿಸಿಕೊಂಡಿದ್ದಾರೆ. ಇದನ್ನು ಸುಳ್ಳು ಎಂದು ಸಾಬೀತು ಮಾಡಲು ಗುಜರಾತ್ ಪೊಲೀಸರು ದಾಖಲಿಸಿದ ಎಫ್ಐಆರ್ ಸಾಕು. ಕೊಠಡಿ ಮೇಲ್ವಿಚಾರಕರು ಒಎಂಆರ್ ಶೀಟ್ಗಳನ್ನು ತಿದ್ದಿದ ಆರೋಪದ ಮೇಲೆ ಗುಜರಾತ್ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಎಂಟು ಖಾಲಿ ಚೆಕ್‌ಗಳು ಇಲ್ಲಿ ಪತ್ತೆಯಾಗಿವೆ. ಇದರಲ್ಲಿ ಕಾಲೇಜಿನ ಪ್ರಾಂಶುಪಾಲರು, ಭೌತಶಾಸ್ತ್ರದ ಶಿಕ್ಷಕರು ಮತ್ತು ಹಲವು ನೀಟ್ ಕೋಚಿಂಗ್ ಸೆಂಟರ್‌ಗಳು ಈ ಪಿತೂರಿಯ ಭಾಗವಾಗಿವೆ ಎಂಬುದು ಇಲ್ಲಿ ತಿಳಿದುಬಂದಿದೆ ಎಂದಿದ್ದಾರೆ.
ತಮಿಳುನಾಡಿನಲ್ಲಿ ಅನಿತಾ ಎಂಬ ವಿದ್ಯಾರ್ಥಿನಿ ಸಾವಿಗೀಡಾಗಿದ್ದನ್ನು ಉಲ್ಲೇಖಿಸಿರುವ ಸ್ಟಾಲಿನ್, ಅನಿತಾ ಅವರಂತೆ ಹಲವು ವಿದ್ಯಾರ್ಥಿಗಳ ಸಾವನ್ನು ಕಂಡಿದ್ದೇವೆ. ಅರ್ಹತೆ ಹೆಸರಲ್ಲಿ ನೀಟ್ ಪರೀಕ್ಷೆಯು ಸಾಮಾಜಿಕ ನ್ಯಾಯ ಮತ್ತು ಬಡವರ ವಿರೋಧಿಯಾಗಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಮೇಲೆ ವ್ಯಾಪಕ ಪರಿಣಾಮ ಬೀರುತ್ತದೆ ಎಂದು ಅವರು ಟೀಕಿಸಿದ್ದಾರೆ.
ಏನಿದು ಅನಿತಾ ಕೇಸ್: ತಮಿಳುನಾಡಿನ ವಿದ್ಯಾರ್ಥಿನಿಯಾಗಿದ್ದ ಅನಿತಾ, 12ನೇ ತರಗತಿಯಲ್ಲಿ 1200 ಅಂಕಕ್ಕೆ 1176 ಅಂಕ (ಶೇಕಡಾ 98) ಸಂಪಾದಿಸಿ ವೈದ್ಯಕೀಯ ಶಿಕ್ಷಣ ಪಡೆಯುವ ಕನಸು ಕಂಡಿದ್ದರು. ಆದರೆ, ಅರ್ಹತಾ ಪರೀಕ್ಷೆಯಾದ ನೀಟ್ನಲ್ಲಿ ಅನುತ್ತೀರ್ಣ ಆಗಿದ್ದರು. ಇದು ವಿದ್ಯಾರ್ಥಿನಿಯನ್ನು ಕಂಗೆಡಿಸಿತ್ತು. ಇದರಿಂದ ಆಕೆ 2017 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಇದು ರಾಜ್ಯದಲ್ಲಿ ನೀಟ್ ಪರೀಕ್ಷೆಯ ವಿರುದ್ಧ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಅಂದಿನಿಂದ ತಮಿಳುನಾಡು ಸರ್ಕಾರ ನೀಟ್ ಪರೀಕ್ಷೆಯನ್ನು ರದ್ದು ಮಾಡಬೇಕು ಎಂದು ಪ್ರತಿಭಟಿಸುತ್ತಿದೆ. ವಿದ್ಯಾರ್ಥಿನಿ ಅನಿತಾ ಅವರನ್ನೇ ಹೋರಾಟದ ಕೇಂದ್ರ ಬಿಂದುವಾಗಿ ಮಾಡಲಾಗಿದೆ.