ನವದೆಹಲಿ: ಪವರ್ ಟಿವಿ ಪ್ರಸಾರಕ್ಕೆ ನಿರ್ಬಂಧ ಹೇರಿದ್ದ ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಸೂಕ್ತ ಪರವಾನಗಿ ಇಲ್ಲದೇ ಕನ್ನಡದ ಸುದ್ದಿ ವಾಹಿನಿಯಾದ ಪವರ್ ಟಿವಿ ಕಾರ್ಯ ನಿರ್ವಹಿಸುತ್ತಿತ್ತು ಎಂಬ ಆರೋಪದ ಮೇಲೆ ಕರ್ನಾಟಕ ಹೈಕೋರ್ಟ್ ಪ್ರಸಾರಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಪವರ್ ಟಿವಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠ, ಕರ್ನಾಟಕ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿ, ಇದು ಸಂಪೂರ್ಣ ರಾಜಕೀಯ ದ್ವೇಷವಲ್ಲದೇ ಬೇರೇನೂ ಅಲ್ಲ ಎಂದು ಹೇಳಿದೆ.
ನಾವು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಬದ್ಧವಾಗಿದ್ದೇವೆ. ಇದು ರಾಜಕೀಯ ದ್ವೇಷದ ಕ್ರಮ ಎನ್ನುವುದು ಸ್ಪಷ್ಟವಾಗುತ್ತಿದೆ. ಅರ್ಜಿದಾರರನ್ನು ರಕ್ಷಿಸದಿದ್ದರೆ ನ್ಯಾಯಾಲಯವು ತನ್ನ ಕರ್ತವ್ಯದಲ್ಲಿ ವಿಫಲವಾಗುತ್ತದೆ ಎಂದು ಪೀಠವು ಒತ್ತಿ ಹೇಳಿತು. ಕೇಂದ್ರ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಫೆಬ್ರವರಿ 9ರಂದು ನೀಡಿದ್ದ ಶೋಕಾಸ್ ನೋಟಿಸ್ ಚಾನೆಲ್ನ ಅಪ್‌ಲಿಂಕ್ ಮತ್ತು ಡೌನ್‌ಲಿಂಕಿಂಗ್ ಪರವಾನಗಿಗೆ ಸಂಬಂಧಿಸಿದೆ ಎಂದು ವಾದ ಮಂಡಿಸಿದರು. ಆದಾಗ್ಯೂ, ಪವರ್ ಟಿವಿ ಮತ್ತು ಇತರರು ಸಲ್ಲಿಸಿದ ಅರ್ಜಿಯ ಮೇರೆಗೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರ ಮತ್ತು ಇತರರಿಗೆ ನೋಟಿಸ್ ಜಾರಿ ಮಾಡಿತು.
ಪವರ್ ಟಿವಿ ಪರ ಹಿರಿಯ ವಕೀಲರಾದ ರಂಜಿತ್ ಕುಮಾರ್, ಸುನಿಲ್ ಫರ್ನಾಂಡಿಸ್, ವಕೀಲರಾದ ಮಿಥು ಜೈನ್ ಮತ್ತು ಆರ್.ಸ್ವರೂಪ್ ಆನಂದ್ ವಾದ ಮಂಡಿಸಿದರು. ಸುಪ್ರೀಂಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 15ಕ್ಕೆ ನಿಗದಿಪಡಿಸಿದೆ.
ಅರ್ಜಿದಾರರನ್ನು ಇತರ 34 ಚಾನೆಲ್ಗಳಂತೆಯೇ ಪರಿಗಣಿಸದೇ ಹೈಕೋರ್ಟ್ ತಪ್ಪು ಮಾಡಿದೆ. ಹೀಗಾಗಿ, ರಿಟ್ ಅರ್ಜಿದಾರರ ಮನವಿಯ ಮೇರೆಗೆ ಅರ್ಜಿದಾರರನ್ನು ಅಸಮಾನ ಮತ್ತು ವಿಭಿನ್ನವಾಗಿ ನಡೆಸಿಕೊಳ್ಳಲಾಗಿದೆ. ಪರವಾನಗಿ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಲು ಬಾಕಿ ಇರುವ ಅನೇಕ ಸುದ್ದಿ ವಾಹಿನಿಗಳಿವೆ ಮತ್ತು ಅವು ಇನ್ನೂ ಕಾರ್ಯನಿರ್ವಹಿಸುತ್ತಿವೆ ಎಂದು ಅರ್ಜಿದಾರರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಆದಾಗ್ಯೂ, ಪ್ರತಿವಾದಿಗಳ ಅರ್ಜಿ ಸಲ್ಲಿಕೆ ಮತ್ತು ಶೋಕಾಸ್ ನೋಟಿಸ್ ಆಧಾರದ ಮೇಲೆ ಯಾವುದೇ ಮನವಿ ಮಾಡದೇ ಅಥವಾ ಪ್ರತಿ ಅರ್ಜಿ ಸಲ್ಲಿಸಲು ಅವಕಾಶ ನೀಡದೆ 200 ಉದ್ಯೋಗಿಗಳು ಕೆಲಸ ಮಾಡುತ್ತಿರುವ ಅರ್ಜಿದಾರರ ಸುದ್ದಿ ವಾಹಿನಿಯನ್ನು ಮುಚ್ಚುವುದು ಅತ್ಯಂತ ಪೂರ್ವಾಗ್ರಹ ಪೀಡಿತವಾಗಿದೆ ಮತ್ತು ನ್ಯಾಯದ ತತ್ವಗಳನ್ನು ಉಲ್ಲಂಘಿಸಿದಂತಾಗಿದೆ. ಆದ್ದರಿಂದ ಈ ಆದೇಶಕ್ಕೆ ತಡೆಯಾಜ್ಞೆ ನೀಡಲು ಅರ್ಹವಾಗಿದೆ" ಎಂದು ಪವರ್ ಟಿವಿ ಸಲ್ಲಿಸಿದ ಮನವಿಯಲ್ಲಿ ತಿಳಿಸಿತ್ತು.
ಜುಲೈ 9 ರವರೆಗೆ ಪವರ್ ಟಿವಿಗೆ ಯಾವುದೇ ಪ್ರಸಾರ ಚಟುವಟಿಕೆ ನಡೆಸದಂತೆ ಕರ್ನಾಟಕ ಹೈಕೋರ್ಟ್ ನಿರ್ಬಂಧಿಸಿತ್ತು. ಜೂನ್ 25 ರಂದು ಹಿರಿಯ ಐಪಿಎಸ್ ಅಧಿಕಾರಿ ಡಾ.ಬಿ.ಆರ್.ರವಿಕಂಠೇಗೌಡ ಮತ್ತು ಜೆಡಿಎಸ್ ಮುಖಂಡ ಮತ್ತು ಎಂಎಲ್‌ಸಿ ಎಚ್‌ಎಂ ರಮೇಶ್ ಹಾಗೂ ಅವರ ಪತ್ನಿ ಡಾ.ಎ.ರಮ್ಯಾ ರಮೇಶ್ ಸಲ್ಲಿಸಿದ್ದ ಎರಡು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.
ಪರವಾನಗಿ ನವೀಕರಣ ಮಾಡಿಸಿಕೊಳ್ಳದ ಸುದ್ದಿ ವಾಹಿನಿ ಮತ್ತು ಇತರ ಖಾಸಗಿ ಪ್ರತಿವಾದಿಗಳ ವಿರುದ್ಧ ಕೇಂದ್ರವು ಈಗಾಗಲೇ ಪ್ರಕ್ರಿಯೆ ಪ್ರಾರಂಭಿಸಿದ್ದರೂ, ಅವರು ಇನ್ನೂ ಪರವಾನಗಿ ನವೀಕರಣ ಮಾಡಿಸಿಕೊಳ್ಳದೇ ಪ್ರಸಾರ ಮುಂದುವರೆಸಿದ್ದಾರೆ ಎಂದು ಹೈಕೋರ್ಟ್‌ನಲ್ಲಿ ವಾದ ಮಂಡಿಸಲಾಗಿತ್ತು.
ದೂರಿನ ಮೇರೆಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಮತ್ತು ಪವರ್ ಟಿವಿಗೆ ಪ್ರಸಾರದ ಅನುಮತಿ ಅಕ್ಟೋಬರ್ 12, 2021 ರವರೆಗೆ ಮಾನ್ಯವಾಗಿರುತ್ತದೆ ಎಂದು ಕೇಂದ್ರ ಅರ್ಜಿ ಸಲ್ಲಿಸಿತ್ತು. ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಡಿಸೆಂಬರ್ 30, 2022 ದಿನಾಂಕದಿಂದ ಪರವಾನಗಿ ನವೀಕರಣ ಅರ್ಜಿಯು ಪರಿಶೀಲನೆಯಲ್ಲಿದೆ ಎಂದು ತಿಳಿಸಿದೆ.
ಇದನ್ನೂ ಓದಿ: ಶಂಭು ಗಡಿಯ ಹೆದ್ದಾರಿ ಸಂಚಾರಕ್ಕೆ ಮುಕ್ತಗೊಳಿಸಿ: ಹರಿಯಾಣ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ - Farmers Protest