ನವದೆಹಲಿ: ಭಾರತೀಯ ಮೂಲದ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಬಾಹ್ಯಾಕಾಶದಲ್ಲಿಯೇ ತಮ್ಮ 59ನೇ ಜನ್ಮದಿನವನ್ನು ಆಚರಿಸಿಕೊಂಡರು. ಮೂರನೇ ಬಾಹ್ಯಾಕಾಶ ಯಾನದಲ್ಲಿರುವ ಅವರು, ಸೆ. 19ರ ಗುರುವಾರ ಅವರು ಬಾಹ್ಯಾಕಾಶ ನಿಲ್ದಾಣದ ಮಹತ್ವದ ನಿರ್ವಹಣಾ ಕಾರ್ಯಗಳಲ್ಲಿ ಮತ್ತು ವೈಜ್ಞಾನಿಕ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡರು. ಸಹ ಗಗನಯಾನಿ ಡಾನ್ ಪೆಟ್ಟಿಟ್ ಸಾಥ್ ನೀಡಿದರು.
2012ರಲ್ಲಿ ಅಧ್ಯಯನಕ್ಕಾಗಿ ತೆರಳಿದ್ದಾಗ ಅವರು ಬಾಹ್ಯಾಕಾಶದಲ್ಲಿಯೇ ಮೊದಲ ಬಾರಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಇದೀಗ ಅನಿರೀಕ್ಷಿತವಾಗಿ ಎರಡನೇ ಬಾರಿ ಅಲ್ಲಿಯೇ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು. 59ನೇ ವಸಂತಕ್ಕೆ ಕಾಲಿಟ್ಟ ಗಗನಯಾನಿಗೆ ಸಹ ಗಗನಯಾನಿ ಡಾನ್ ಪೆಟ್ಟಿಟ್ ಬಾಹ್ಯಾಕಾಶದಲ್ಲಿಯೇ ಶುಭಾಶಯ ಕೋರಿದರು.
ಅವರಿಬ್ಬರೂ ಬಾಹ್ಯಾಕಾಶ ಶೌಚಾಲಯ ಎಂದೇ ಕರೆಯಲಾಗುವ ತ್ಯಾಜ್ಯ ಹಾಗೂ ನೈರ್ಮಲ್ಯ ವಿಭಾಗದ ಫಿಲ್ಟರ್‌ಗಳನ್ನು ಬದಲಿಸಿದರು. ಇದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಸಿಬ್ಬಂದಿಗೆ ಸ್ವಚ್ಛ ಮತ್ತು ಆರೋಗ್ಯಕರ ಜೀವನ ಪರಿಸರ ನಿರ್ವಹಿಸಲು ನೆರವಾಗುವ ಅವಶ್ಯಕ ಕಾರ್ಯವಾಗಿದೆ.
ಹೃದಯಸ್ವರ್ಶಿ ವಿಡಿಯೋ ಪೋಸ್ಟ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ಐಎಸ್‌ಎಸ್)ದಲ್ಲಿರುವ ಸುನೀತಾ ವಿಲಿಯಮ್ಸ್ ಅವರಿಗೆ ಭಾರತದ ಪ್ರಸಿದ್ಧ ಸಂಗೀತ ಸಂಸ್ಥೆ ಸರಿಗಮ ಹುಟ್ಟುಹಬ್ಬದ ವಿಶೇಷ ಉಡುಗೊರೆ ನೀಡಿದೆ. ಮೊಹಮ್ಮದ್ ರಫಿ ಅವರ ‘ಬಾರ್ ಬಾರ್ ದಿನ್ ಯೇ ಆಯೆ’ ನ ವಿಶಿಷ್ಟ ಆವೃತ್ತಿಯನ್ನು ಭಾರತೀಯ ಗಾಯಕರು ಮತ್ತು ಸೆಲೆಬ್ರಿಟಿಗಳ ತಂಡ ಈ ಹಾಡನ್ನು ಪ್ರದರ್ಶಿಸಿದೆ. ಸರಿಗಮವು ಪ್ರಮುಖ ಗಾಯಕರಿಂದ ಹುಟ್ಟುಹಬ್ಬದ ಶುಭಾಶಯಗಳನ್ನು ಪ್ರದರ್ಶಿಸುವ ಹೃದಯಸ್ಪರ್ಶಿ ವಿಡಿಯೊವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಸುನಿತಾಗೆ ವಿಶೇಷ ಸಂದೇಶ ಕಳುಹಿಸಿದ ಕರಣ್ ಜೋಹರ್: ನಿರ್ಮಾಪಕ ಕರಣ್ ಜೋಹರ್ ಗಗನಯಾನಿ ಸುನಿತಾ ವಿಲಿಯಮ್ಸ್ ಅವರಿಗೆ ವಿಶೇಷ ಸಂದೇಶವನ್ನು ಕಳುಹಿಸುವುದರೊಂದಿಗೆ ವಿಡಿಯೊ ಪ್ರಾರಂಭವಾಗುತ್ತದೆ. ಪ್ರಸಿದ್ಧ ಗಾಯಕರಾದ ಸೋನು ನಿಗಮ್, ಶಾನ್, ಹರಿಹರನ್ ಮತ್ತು ನೀತಿ ಮೋಹನ್ ಸಾಂಪ್ರದಾಯಿಕ ಹುಟ್ಟುಹಬ್ಬದ ಹಾಡನ್ನು ಹಾಡಿದ್ದಾರೆ.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ 8 ದಿನಗಳ ಭೇಟಿಗಾಗಿ ಜೂನ್ 5 ರಂದು ಬಾಹ್ಯಾಕಾಶ ನಿಲ್ದಾಣಕ್ಕೆ ಸುನೀತಾ ವಿಲಿಯಮ್ಸ್ ತೆರಳಿದ್ದರು. ಅಲ್ಲಿ ಹೋದ ಬಳಿಕ ಯಂತ್ರದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅವರು ಬಾಹ್ಯಾಕಾಶ ನಿಲ್ದಾಣದಲ್ಲಿಯೇ ಉಳಿದುಕೊಂಡಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ಭೂಮಿಗೆ ಮರಳುವ ನಿರೀಕ್ಷೆಯಿದೆ.