ತಿರುವನಂತಪುರಂ (ಕೇರಳ): ಕೇರಳ ಪಶು ವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಲಪತಿ ಡಾ.ಎಂ.ಆರ್.ಸಸೀಂದ್ರನಾಥ್ ಅವರನ್ನು ಶನಿವಾರ ಕುಲಾಧಿಪತಿಗಳಾದ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅಮಾನತುಗೊಳಿಸಿ ಆದೇಶಿಸಿದ್ದಾರೆ.
ವಿಶ್ವವಿದ್ಯಾಲಯದ ಹಾಸ್ಟೆಲ್ನ ಸ್ನಾನಗೃಹದಲ್ಲಿ ಫೆಬ್ರವರಿ 18ರಂದು ಬಿ.ವಿಸ್ಸಿ ವಿದ್ಯಾರ್ಥಿ ಜೆ.ಎಸ್.ಸಿದ್ಧಾರ್ಥ್ (20) ಎಂಬಾತ ಮೃತಪಟ್ಟಿದ್ದ. ಕ್ಯಾಂಪಸ್ನಲ್ಲಿ ಎಸ್ಎಫ್ಐ ಮುಖಂಡರನ್ನೊಳಗೊಂಡ ವಿದ್ಯಾರ್ಥಿಗಳ ಗುಂಪು ರ‍್ಯಾಗಿಂಗ್ ಮಾಡಿ, ಚಿತ್ರಹಿಂಸೆ ನೀಡಿದ್ದರಿಂದ ಸಿದ್ಧಾರ್ಥ್ ಸಾವನ್ನಪ್ಪಿದ್ದಾನೆ ಎಂದು ಸಹಪಾಠಿಗಳು ಮತ್ತು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಇದೇ ವಿಷಯವಾಗಿ ಶನಿವಾರ ಮೃತ ಸಿದ್ಧಾರ್ಥ್ ಕುಟುಂಬಸ್ಥರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ. ಪೋಷಕರು ತಮ್ಮನ್ನು ಭೇಟಿಯಾದ 24 ಗಂಟೆಯೊಳಗೆ ವಿವಿಯ ಕುಲಾಧಿಪತಿಯಾದ ಆರೀಫ್ ಮೊಹಮ್ಮದ್ ಖಾನ್ ಅವರು ಕುಲಪತಿ ಡಾ.ಎಂ.ಆರ್.ಸಸೀಂದ್ರನಾಥ್ ಅವರನ್ನು ಅಮಾನತು ಮಾಡಿದ್ದಾರೆ. 2019ರಲ್ಲಿ ಸಸೀಂದ್ರನಾಥ್ ಕುಲಪತಿಯಾಗಿ ನೇಮಕಗೊಂಡಿದ್ದರು.
ನ್ಯಾಯಾಂಗ ತನಿಖೆಗೂ ರಾಜ್ಯಪಾಲರ ನಿರ್ಧಾರ: ಜೊತೆಗೆ ಈ ಘಟನೆ ಬಗ್ಗೆ ನ್ಯಾಯಾಂಗ ತನಿಖೆ ಮಾಡಿಸಲು ಕೂಡ ರಾಜ್ಯಪಾಲರು ತೀರ್ಮಾನಿಸಿದ್ದಾರೆ. ಈ ಬಗ್ಗೆ ಹೈಕೋರ್ಟ್ಗೆ ಪತ್ರ ಪಡೆದಿದ್ದಾರೆ. ಮೂರ್ನಾಲ್ಕು ದಿನಗಳಲ್ಲೇ ನ್ಯಾಯಾಂಗ ತನಿಖೆ ಆಗಬೇಕೆಂದೂ ಅವರು ಕೋರಿದ್ದಾರೆ. ಇದೇ ವೇಳೆ, ವಿವಿಯ ಕ್ಯಾಂಪಸ್ನಲ್ಲಿ ನಡೆದ ಇಂತಹ ಘಟನೆ ಬಗ್ಗೆ ನಿನ್ನೆಯಷ್ಟೇ ವಿವಿಯ ಅಧಿಕಾರಿಗಳು ನನಗೆ ಮಾಹಿತಿ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜ್ಯಪಾಲರು, ''ಇದು ಸ್ಪಷ್ಟವಾಗಿ ಕೊಲೆ ಪ್ರಕರಣವಾಗಿದೆ. 24 ಗಂಟೆಗಳ ಕಾಲ ಆ ವಿದ್ಯಾರ್ಥಿಗೆ ಆಹಾರ, ನೀರು ಕೊಟ್ಟಿರಲಿಲ್ಲ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿದೆ. ಕ್ಯಾಂಪಸ್ನ ಒಳಗಡೆ ಅಧಿಕಾರಿಗಳ ಗಮನಕ್ಕೆ ಬಾರದೇ ಇಂತಹ ಭೀಕರ ಘಟನೆ ಹೇಗೆ ಸಂಭವಿಸುತ್ತದೆ?. ಒಬ್ಬ ವಿದ್ಯಾರ್ಥಿಗೆ ಮೂರು ದಿನಗಳ ದೈಹಿಕ, ಮಾನಸಿಕವಾಗಿ ಹಿಂಸೆ ಕೊಟ್ಟಿದ್ದರೂ, ಅಧಿಕಾರಿಗಳು ಎಲ್ಲಿದ್ದರು?'' ಎಂದು ತೀವ್ರ ಅಸಮಾಧಾನ ಹೊರಹಾಕಿದರು.
''ತನ್ನ ದಬ್ಬಾಳಿಕೆಗೆ ಎಸ್ಎಫ್ಐ ಕಾಲೇಜು ಹಾಸ್ಟೆಲ್ಗಳನ್ನು ಬಳಸಿಕೊಳ್ಳುತ್ತದೆ ಎಂಬುವುದನ್ನು ತೋರುತ್ತದೆ. ಪಶು ವೈದ್ಯಕೀಯ ವಿವಿಯ ಕ್ಯಾಂಪಸ್ನಲ್ಲಿ ಎಸ್ಎಫ್ಐ, ಪಿಎಫ್ಐ ಕಾರ್ಯಕರ್ತರು ಅನೇಕ ದಿನಗಳಿಂದ ಇದೇ ರೀತಿ ವರ್ತಿಸುತ್ತಿದ್ದಾರೆ. ಹಾಸ್ಟೆಲ್ಗಳ ತಪಾಸಣೆಗೆ ಬೋಧಕರು, ಸಿಬ್ಬಂದಿ ಹೋಗಲು ಭಯ ಪಡುತ್ತಾರೆ'' ಎಂದು ಆರೀಫ್ ಮೊಹಮ್ಮದ್ ಖಾನ್ ಟೀಕಿಸಿದರು.
ಮತ್ತೊಂದೆಡೆ, ಸಿದ್ಧಾರ್ಥ್ ಸಾವಿನ ಪ್ರಕರಣದಲ್ಲಿ ತನ್ನ ಪಾತ್ರದ ಬಗ್ಗೆ ಎಸ್ಎಫ್ಐ ಅಲ್ಲಗೆಳೆದಿದೆ. ಈ ಘಟನೆ ತನಿಖೆ ನಡೆಸುತ್ತಿರುವ ಪೊಲೀಸರು, ಇದುವರೆಗೆ 11 ಜನ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಪ್ರವಾಸಕ್ಕೆ ಬಂದ ಸ್ಪ್ಯಾನಿಷ್ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ