ಮುಜಾಫರ್ನಗರ (ಉತ್ತರ ಪ್ರದೇಶ): ಹೊಲದಲ್ಲಿದ್ದ ಅಜ್ಜನ ಬಳಿ ಹೊರಟಿದ್ದ 6 ವರ್ಷದ ಬಾಲಕನ ಮೇಲೆ ನಾಯಿಗಳ ಹಿಂಡು ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ವೇಳೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಮುಜಾಫರ್ನಗರ ಜಿಲ್ಲೆಯ ಚಾರ್ತಾವಾಲ್ ಪ್ರದೇಶದ ಹೋಶಿಯಾಪುರ ಗ್ರಾಮದಲ್ಲಿ ಬುಧವಾರ ನಡೆದಿದೆ.
ಬಾಲಕ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಬೀದಿ ನಾಯಿಗಳು ಬಾಲಕನನ್ನು ಸುತ್ತುವರೆದು, ದಾಳಿ ನಡೆಸಿವೆ. ಬಾಲಕನ ಕಿರುಚಾಟ ಕೇಳಿ ಅಜ್ಜ ಸ್ಥಳಕ್ಕಾಗಮಿಸಿದ್ದು, ನಾಯಿಗಳನ್ನು ಓಡಿಸಿದ್ದಾರೆ. ಅದಾಗಲೇ ನಾಯಿಗಳು ಬಾಲಕನ ಕುತ್ತಿಗೆ ಹಾಗೂ ಎದೆಯ ಭಾಗಕ್ಕೆ ಪರಚಿದ್ದು, ತೀವ್ರ ಗಾಯಗಳಾಗಿದ್ದವು. ತಕ್ಷಣವೇ ಮನೆಯವರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಬಾಲಕ ಸಾವನ್ನಪ್ಪಿದ್ದಾನೆ.
ಘಟನೆ ಬಗ್ಗೆ ಬಾಲಕನ ತಂದೆ ಓಂಕಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, "ಆರು ವರ್ಷದ ಮಗ ದೇವ್ ಅಲಿಯಾಸ್ ಗೋಲು, ಬಹೇರಿ ಶಾಲೆಯಲ್ಲಿ ಓದುತ್ತಿದ್ದ. ಬುಧವಾರ ಸಂಜೆ ಗ್ರಾಮದ ಕೆಲ ಮಕ್ಕಳೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ತಾತನ ಬಳಿ ಹೋಗುತ್ತಿದ್ದ. ಈ ವೇಳೆ ನಾಲ್ಕೈದು ನಾಯಿಗಳು ಆತನನ್ನು ಸುತ್ತುವರಿದಿದ್ದವು. ಉಳಿದ ಮಕ್ಕಳು ಹೇಗೋ ಓಡಿಹೋಗಿದ್ದು, ಒಬ್ಬನೇ ಇದ್ದ ದೇವ್ ಮೇಲೆ ನಾಯಿಗಳು ದಾಳಿ ಮಾಡಿದ್ದವು. ದೇವ್ ಕಿರುಚಲು ಪ್ರಾರಂಭಿಸಿದಾಗ, ಅವನ ತಾತ ಸ್ಥಳಕ್ಕೆ ಓಡಿ ಬಂದಿದ್ದರು. ಹೇಗೋ ನಾಯಿಗಳನ್ನು ಓಡಿಸಿ, ದೇವ್ನನ್ನು ಕಾಪಾಡಿದ್ದರು. ಅದಾಗಲೇ ನಾಯಿಗಳು ದೇವ್ನ ಎದೆ ಹಾಗೂ ಕುತ್ತಿಗೆ ಭಾಗಕ್ಕೆ ಕಚ್ಚಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ" ಎಂದು ತಿಳಿಸಿದರು.
"ತಕ್ಷಣವೇ ಮನೆಯವರು ದೇವ್ನನ್ನು ಹತ್ತಿರದ ಸ್ವಾಮಿ ಕಲ್ಯಾಣ್ದೇವ್ ಜಿಲ್ಲಾಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರು ತಕ್ಷಣ ಬಾಲಕನನ್ನು ಮೀರತ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದರು. ಆದರೆ ಕುಟುಂಬಸ್ಥರು ಅಲ್ಲೇ ಚಿಕಿತ್ಸೆ ನೀಡುವಂತೆ ಕೇಳಿಕೊಂಡಿದ್ದರು. ಚಿಕಿತ್ಸೆ ನೀಡಿದ ಕೆಲವೇ ಗಂಟೆಗಳಲ್ಲಿ ಮಗು ಸಾವನ್ನಪ್ಪಿದೆ. ಬಾಲಕ ಸಾವನ್ನಪ್ಪಿದ ವೇಳೆ ತಂದೆ ಓಂಕಾರ್ ಔಷಧ ತರಲು ಹೋಗಿದ್ದರು. ಗುರುವಾರ ಬಾಲಕನ ಅಂತ್ಯಸಂಸ್ಕಾರ ನೆರವೇರಿಸಲಾಯಿತು." ಎಂದು ಬಾಲಕನ ಚಿಕ್ಕಪ್ಪ ಸೋನು ಹೇಳಿದರು.
ಇದನ್ನೂ ಓದಿ: ರಾಯಚೂರು: ಯುವಕನ ಮೇಲೆ ಬೀದಿ ನಾಯಿ ದಾಳಿ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ