ಧಾರವಾಡ: ಅಯೋಧ್ಯೆಯಲ್ಲಿ ಶ್ರೀ ರಾಮನ ಮೂರ್ತಿ ಪ್ರತಿಷ್ಠಾಪನೆಗೆ ದಿನಗಣನೇ ಆರಂಭವಾಗಿದೆ. ರಾಜ್ಯದಲ್ಲಿಯೇ ಮೊದಲು ನಿರ್ಮಿಸಲಾದ ಭಾರತ ಮಾತಾ ದೇವಸ್ಥಾನ ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿದೆ. ಇಲ್ಲಿಂದಲೇ ಹಿಂದು ಧರ್ಮ ಜಾಗೃತಿ ನಡೆಯುತ್ತಿತ್ತು ಎನ್ನಲಾಗುತ್ತಿದೆ.
ಭಾರತ ಮಾತಾ ದೇವಸ್ಥಾನದಲ್ಲಿ ಶ್ರೀರಾಮ, ಸೀತಾದೇವಿ ಹಾಗೂ ಆಂಜನೇಯನ ಮೂರ್ತಿ ಇರುವುದು ವಿಶೇಷವಾಗಿದ್ದು, ಮೂರ್ತಿಗಳು ಎಲ್ಲರ ಗಮನ ಸೆಳೆಯುತ್ತಿವೆ. ಅಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ದೊಡ್ಡ ಹೋರಾಟ ನಡೆದಿತ್ತು. ಅದರಲ್ಲಿ ಧಾರವಾಡದಿಂದ ಬಹಳಷ್ಟು ಕರಸೇವಕರು ಕೂಡ ಪಾಲ್ಗೊಂಡಿದ್ದರು.
ದೇವರ ಹುಬ್ಬಳ್ಳಿ ಗ್ರಾಮದಿಂದ ಸಹ ಇಬ್ಬರು ಕರಸೇವಕರು ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಹೋರಾಟದಲ್ಲಿ ಪಾಲ್ಗೊಂಡಿದ್ದರು. 1980ರ ದಶಕದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಶ್ರೀರಾಮ ರಥಯಾತ್ರೆ ಆರಂಭಿಸಿದ್ದರು. ಈ ರಥಯಾತ್ರೆ ಹಳ್ಳಿ ಹಳ್ಳಿಗಳಿಗೂ ಸಂಚರಿಸಿತ್ತು. ಈ ವೇಳೆ ಮೂರ್ತಿಗಳನ್ನು ಮೆರವಣಿಗೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ದೇವರ ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ಭಾರತ ಮಾತಾ ದೇವಸ್ಥಾನದಲ್ಲಿ ಮೆರವಣಿಗೆ ಮಾಡಿ ಶ್ರೀರಾಮ, ಸೀತೆ ಹಾಗೂ ಆಂಜನೇಯನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.
80ರ ದಶಕದಲ್ಲಿ ದೇವರ ಹುಬ್ಬಳ್ಳಿ ಗ್ರಾಮದಲ್ಲೂ ಅಯೋಧ್ಯೆ ಹೋರಾಟದ ಕಿಚ್ಚು ಹಬ್ಬಿ ಭಾರತ ಮಾತಾ ದೇವಸ್ಥಾನ ನಿರ್ಮಿಸಲಾಗಿತ್ತು. ಅಂದು ನಡೆದ ಹೋರಾಟ ಇಂದು ಫಲಪ್ರದವಾಗಿದೆ. ದೇವರ ಹುಬ್ಬಳ್ಳಿ ಕರಸೇವಕರು ಖುಷಿಯಾಗಿದ್ದಾರೆ. ಅಂದಿನಿಂದ ಇಲ್ಲಿಯವರೆಗೂ ರಾಮನ ಜಪ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಆಯೋಜಿಸಿ ಜನರನ್ನು ಜಾಗೃತಿ ಮಾಡುವ ಕಾರ್ಯವನ್ನು ಗ್ರಾಮಸ್ಥರು, ಇಲ್ಲಿನ ಮಠಾಧೀಶರು ಮಾಡುತ್ತ ಬರುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಕೈಯಲ್ಲಿ ಅರಳಿದ ಅಯೋಧ್ಯೆ ರಾಮಮಂದಿರ