ಮುಂಬೈ (ಮಹಾರಾಷ್ಟ್ರ): ಇತ್ತೀಚೆಗೆ ಮುಗಿದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ 'ಮಹಾಯುತಿ' ಮೈತ್ರಿಕೂಟದ ಮುಂದೆ ಭಾರೀ ಮುಖಭಂಗ ಅನುಭವಿಸಿ ಸೋಲೊಪ್ಪಿಕೊಂಡಿರುವ ಪ್ರತಿಪಕ್ಷಗಳ ಮೈತ್ರಿಕೂಟ 'ಮಹಾವಿಕಾಸ್ ಅಘಾಡಿ'ಗೆ ಮತ್ತೊಂದು ಶಾಕ್ ಎದುರಾಗಿದೆ.
ಎಂವಿಎ ಕೂಟದಲ್ಲಿ ಗುರುತಿಸಿಕೊಂಡಿದ್ದ ಸಮಾಜವಾದಿ ಪಕ್ಷವು ಮೈತ್ರಿಯಿಂದ ಹೊರಬರುವುದಾಗಿ ಹೇಳಿದೆ. ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಕಾರಣ ಎಂದು ಬೊಟ್ಟು ಮಾಡಿದೆ. ಸೋಲಿನ ನಡುವೆ ಎಸ್ಪಿಯ ಈ ನಿರ್ಧಾರ ಕಾಂಗ್ರೆಸ್, ಎನ್ಸಿಪಿ (ಎಸ್ಪಿ), ಶಿವಸೇನೆ(ಯುಬಿಟಿ) ಬಣಕ್ಕೆ ಹಿನ್ನಡೆ ಉಂಟು ಮಾಡಿದೆ.
#WATCH | On Shiv Sena - UBT reportedly expressing support to those who demolished Babri Mosque in Ayodhya - in their mouthpiece 'Saamana', Maharashtra SP President Abu Azmi says, " they (shiv sena - ubt) were saying that they have become secular now - as they were in alliance… pic.twitter.com/V9pcZINNgR
— ANI (@ANI) December 7, 2024
ಶಿವಸೇನೆ ಮೇಲೆ ಎಸ್ಪಿ ಕಿಡಿ: ಎಂವಿಎ ಕೂಟದಿಂದ ತಾನು ಹೊರಬರಲು ಶಿವಸೇನೆಯತ್ತ ಎಸ್ಪಿ ಬೆರಳು ತೋರಿಸಿದೆ. ಇದಕ್ಕೆ ಕಾರಣ, ಆ ಪಕ್ಷದ ನೇತಾರರು ನೀಡಿದ ಜಾಹೀರಾತು. ಠಾಕ್ರೆ ಬಣದ ಶಿವಸೇನೆಯು ಬಾಬಾರಿ ಮಸೀದಿ ಧ್ವಂಸದ ಬಗ್ಗೆ ಜಾಹೀರಾತು ನೀಡಿದೆ. ಇದನ್ನು ಪಕ್ಷದ ಮುಖಂಡರೊಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಬೆಂಬಲ ನೀಡಿದ್ದಾರೆ.
ಇದನ್ನು ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಅಬು ಅಜ್ಮಿ ಅವರು ಟೀಕಿಸಿದ್ದಾರೆ. 'ಬಾಬರಿ ಮಸೀದಿ ಧ್ವಂಸದ ಬಗ್ಗೆ ಶಿವಸೇನೆಯು ಇನ್ನು ತನ್ನ ಹಳೆಯ ನಿರ್ಧಾರಕ್ಕೆ ಬದ್ಧವಾಗಿದೆ. ಮಹಾವಿಕಾಸ್ ಅಘಾಡಿಯು ಇದಕ್ಕೆ ವಿರುದ್ಧವಾಗಿದೆ. ಹಳೆಯ ಘಟನೆಗಳನ್ನು ಮತ್ತೆ ಮುನ್ನೆಲೆಗೆ ತಂದು ಸಮುದಾಯಕ್ಕೆ ನೋವು ತಂದಿದೆ' ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.
ಎಂವಿಎ ಕೂಟದ ಭಾಗವಾಗಿರುವ ಶಿವಸೇನೆಯು ಇಲ್ಲಿನ ಸಿದ್ಧಾಂತಗಳನ್ನು ಪಾಲಿಸಬೇಕು. ಇದನ್ನು ಮೀರಿದ್ದರಿಂದ ಪಕ್ಷವು ಕೂಟದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರಿಗೆ ಮಾಹಿತಿ ನೀಡಲಾಗುವುದು ಎಂದು ಅಬು ಅಜ್ಮಿ ಹೇಳಿದ್ದಾರೆ.
ಶಿವಸೇನೆ ತಿರುಗೇಟು: ಇದಕ್ಕೆ ತಿರುಗೇಟು ನೀಡಿರುವ ಠಾಕ್ರೆ ಬಣದ ಶಿವಸೇನೆ, ಬಾಬರಿ ಮಸೀದಿ ಧ್ವಂಸ ಕುರಿತು ತಮ್ಮ ಪಕ್ಷದ ನಿಲುವು 1992 ರಿಂದಲೂ ಒಂದೇ ತೆರನಾಗಿದೆ. 31 ವರ್ಷಗಳ ಬಳಿಕವೂ ಪಕ್ಷ ತನ್ನ ನಿರ್ಧಾರಕ್ಕೆ ಬದ್ಧವಾಗಿದೆ. ಇದನ್ನು ಸಮಾಜವಾದಿ ಪಕ್ಷ ಅರಿತುಕೊಂಡಿಲ್ಲ. ಎಸ್ಪಿ ನಾಯಕರು ಆಡಳಿತಾರೂಢ ಮಹಾಯುತಿ ಕಡೆಗೆ ವಾಲುತ್ತಿದ್ದಾರೆ. ಹೀಗಾಗಿ ಶಿವಸೇನೆ ವಿರುದ್ಧ ಟೀಕಿಸುತ್ತಿದ್ದಾರೆ ಎಂದಿದೆ.
288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸಮಾಜವಾದಿ ಪಕ್ಷವು ಇಬ್ಬರು ಶಾಸಕರನ್ನು ಹೊಂದಿದೆ. ಚುನಾವಣೆಯಲ್ಲಿ 8 ಸ್ಥಾನಗಳಲ್ಲಿ ಅದು ಸ್ಪರ್ಧೆ ಮಾಡಿ ಆರು ಕಡೆ ಸೋಲು ಅನುಭವಿಸಿದೆ. ಎಂವಿಎ ಕೂಟದಲ್ಲಿದ್ದರೂ ಅದು ಚುನಾವಣಾ ಮೈತ್ರಿ ಮಾಡಿಕೊಳ್ಳದೆ ಸೌಹಾರ್ದಯುತ ಹೋರಾಟ ನಡೆಸಿತ್ತು.
ಇದನ್ನೂ ಓದಿ: ಇವಿಎಂ ದುರ್ಬಳಕೆ ಆರೋಪ: ಶಾಸಕತ್ವ ಪ್ರಮಾಣವಚನ ಬಹಿಷ್ಕರಿಸಿದ ವಿಪಕ್ಷ ಸದಸ್ಯರು