ಚೆನ್ನೈ(ತಮಿಳುನಾಡು): ಇಲ್ಲಿನ ತೆಂಕಶಿ ಜಿಲ್ಲೆಯ ಪುಲಿಯಂಗುಡಿ ಸಮೀಪ ಸಿಮೆಂಟ್ ಚೀಲಗಳನ್ನು ಸಾಗಿಸುತ್ತಿದ್ದ ಲಾರಿ ಮತ್ತು ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಪುಲಿಯಂಗುಡಿ ನಿವಾಸಿಗಳು ಎಂದು ಗುರುತಿಸಲಾಗಿದೆ.
ನಿನ್ನೆ (ಜ.27) ರಾತ್ರಿ ಪುಳಿಯಂಗುಡಿಯ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಉತ್ಸವದಲ್ಲಿ ಪುಲಿಯಂಗುಡಿಯ ಭಗವತಿ ಅಮ್ಮನ್ ದೇವಸ್ಥಾನದ ಹತ್ತಿರದ ನಿವಾಸಿಗಳಾದ ಕಾರ್ತಿಕ್, ವೇಲ್ ಮನೋಜ್, ಸುಬ್ರಮಣಿ, ಮನೋಕರನ್, ಬೋತಿರಾಜ್ ಸೇರಿದಂತೆ ಆರು ಮಂದಿ ಪಾಲ್ಗೊಂಡು, ನಂತರ ಕುರ್ಟಾಲಂ ಜಲಪಾತಕ್ಕೆ ತೆರಳಿದ್ದರು. ಇಂದು ಕುರ್ಟಾಲಂನಿಂದ ಸ್ವಗ್ರಾಮಕ್ಕೆ ಹಿಂತಿರುಗುವಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಬೆಳಗಿನ ಜಾವ 3:30ಕ್ಕೆ ಕುರ್ಟಾಲಂನಿಂದ ಪುಲಿಯಂಗುಡಿಗೆ ಕಾರಿನಲ್ಲಿ ಹಿಂತಿರುಗುತ್ತಿದ್ದರು. ಪುನ್ನಯ್ಯಪುರಂ ಮತ್ತು ಸಿಂಗಿಲಿಪಟ್ಟಿ ನಡುವೆ ವಾಹನ ಚಲಾಯಿಸುತ್ತಿದ್ದಾಗ ಚಾಲಕ ನಿದ್ದೆಗೆ ಜಾರಿದ್ದ ಎನ್ನಲಾಗಿದೆ. ಇದರಿಂದ ಕೇರಳ ರಾಜ್ಯಕ್ಕೆ ಸಿಮೆಂಟ್ ಚೀಲಗಳನ್ನು ತುಂಬಿಕೊಂಡು ಬರುತ್ತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಲಾರಿಯಡಿ ಸಿಲುಕಿಕೊಂಡಿತ್ತು. ಕಾರು ಸಂಪೂರ್ಣ ಜಖಂಗೊಂಡಿದೆ. ಚಾಲಕ ಸೇರಿದಂತೆ 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಒಬ್ಬ ವ್ಯಕ್ತಿಯನ್ನು ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಪುಲಿಯಂಗುಡಿ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ನಂತರ ಚೊಕ್ಕಂಪಟ್ಟಿ ಪೊಲೀಸ್ ಉಪಾಧೀಕ್ಷಕ ಸೇರಿದಂತೆ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಿರುನಲ್ವೇಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ಮೈಸೂರು: ಹುಡುಗಿ ಚುಡಾಯಿಸಿದ್ದಕ್ಕೆ ಗಲಾಟೆ, ಯುವಕನ ಕೊಲೆ