ಹೈದರಾಬಾದ್: ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಆರು ಮಾವೋವಾದಿಗಳು ಸಾವನ್ನಪ್ಪಿದ್ದಾರೆ. ಛತ್ತೀಸ್ಗಢದ ಗಡಿಯಲ್ಲಿರುವ ಕರಕಗುಡೆಮ್ ಮಂಡಲದ ರಘುನಾಥಪಾಲೆಮ್ ಬಳಿ ಈ ಘಟನೆ ನಡೆದಿದೆ. ಹತ್ಯೆಗೀಡಾದವರಲ್ಲಿ ತೆಲಂಗಾಣದ ಕೆಲ ಉನ್ನತ ಮಾವೋವಾದಿ ನಾಯಕರು ಸೇರಿದ್ದಾರೆ ಎಂದು ವರದಿಯಾಗಿದೆ.
ಪೊಲೀಸ್ ತಂಡವು ಕೂಂಬಿಂಗ್ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಅರಣ್ಯ ಪ್ರದೇಶದಲ್ಲಿ ಗುಂಡಿನ ಚಕಮಕಿ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದ್ದು, ಈ ಕುರಿತು ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ಬರಬೇಕಿವೆ.
ಕಳೆದ 10ರಿಂದ 15 ವರ್ಷಗಳ ನಿರಂತರ ಪ್ರಯತ್ನಗಳಿಂದಾಗಿ ತೆಲಂಗಾಣದಲ್ಲಿ ಎಡಪಂಥೀಯ ಉಗ್ರವಾದವು ಸಂಪೂರ್ಣವಾಗಿ ಕಣ್ಮರೆಯಾಗಿದ್ದರೂ, ನೆರೆಯ ರಾಜ್ಯಗಳಾದ ಛತ್ತೀಸ್ಗಢ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶಗಳಲ್ಲಿ ಇನ್ನೂ ಮಾವೋವಾದಿಗಳು ಸಕ್ರಿಯರಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
6 Maoists were killed and two security personnel were injured in an encounter with police in Telangana's Bhadradri Kothagudem district. Police also recovered arms and ammunition from them.
— ANI (@ANI) September 5, 2024
(Source: Police PRO, Bhadradri Kothagudem district) https://t.co/YKcwcLJV47 pic.twitter.com/BUepugG2Hl
ಈಗಲೂ ತೆಲಂಗಾಣ ಮೂಲದ ನಾಯಕರೇ ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ನೇತೃತ್ವ ವಹಿಸಿಕೊಂಡಿರುವುದು ಕಳವಳಕಾರಿಯಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಅನೇಕ ಸಂದರ್ಭಗಳಲ್ಲಿ ಹೇಳಿದ್ದಾರೆ.
ಗುರುವಾರದ ಎನ್‌ಕೌಂಟರ್ ರಾಜ್ಯದಲ್ಲಿ ತನ್ನ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವ ಮಾವೋವಾದಿ ಸಂಘಟನೆಗೆ ದೊಡ್ಡ ಹಿನ್ನಡೆಯಾಗಿದೆ. ಛತ್ತೀಸ್ಗಢದಲ್ಲಿ ಆರು ಮಹಿಳೆಯರು ಸೇರಿದಂತೆ ಒಂಬತ್ತು ಮಾವೋವಾದಿಗಳನ್ನು ಭದ್ರತಾ ಪಡೆಗಳು ಕೊಂದ ಎರಡು ದಿನಗಳ ನಂತರ ಈ ಘಟನೆ ನಡೆದಿದೆ. ಛತ್ತೀಸ್ಗಢದ ದಾಂತೇವಾಡ ಮತ್ತು ಬಿಜಾಪುರ ಜಿಲ್ಲೆಗಳ ಗಡಿಯುದ್ದಕ್ಕೂ ಸೆಪ್ಟೆಂಬರ್ 3 ರಂದು ನಡೆಸಿದ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ 9 ಮಾವೋವಾದಿಗಳು ಕೊಲ್ಲಲ್ಪಟ್ಟಿದ್ದಾರೆ.
ನಕ್ಸಲ್ ವಿರೋಧಿ ಜಂಟಿ ಕಾರ್ಯಾಚರಣೆಯಲ್ಲಿ ದಾಂತೇವಾಡ ಜಿಲ್ಲಾ ರಿಸರ್ವ್ ಗಾರ್ಡ್ಸ್, ಬಸ್ತಾರ್ ಫೈಟರ್ಸ್ ಮತ್ತು ಸಿಆರ್ಪಿಎಫ್ ಬೆಟಾಲಿಯನ್ಗಳಾದ 111 ಮತ್ತು 230 ಭಾಗಿಯಾಗಿದ್ದವು. ಛತ್ತೀಸ್ಗಢದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದವರಲ್ಲಿ ತೆಲಂಗಾಣದ ಉನ್ನತ ಮಾವೋವಾದಿ ನಾಯಕ ಮಾಚೆರ್ಲಾ ಎಸೊಬು ಸೇರಿದ್ದಾರೆ ಎಂದು ವರದಿಯಾಗಿದೆ. ಜಗನ್, ದಾದಾ ರಣದೇವ್ ಮತ್ತು ರಣಧೀರ್ ಎಂದೂ ಕರೆಯಲ್ಪಡುವ ಎಸೊಬು, ಸಿಪಿಐ (ಮಾವೋವಾದಿ) ಪಕ್ಷದ ಕೇಂದ್ರ ಮಿಲಿಟರಿ ಮತ್ತು ಮಹಾರಾಷ್ಟ್ರ-ಛತ್ತೀಸ್ಗಢ ಗಡಿಯ ಉಸ್ತುವಾರಿ ವಹಿಸಿದ್ದನು.
ದಂಡಕಾರಣ್ಯ ವಿಶೇಷ ವಲಯ ಸಮಿತಿಯ (ಡಿಕೆಎಸ್ಜೆಡ್ಸಿ) ಪ್ರಮುಖ ಸದಸ್ಯನಾಗಿರುವ ಎಸೊಬು ಹನಮಕೊಂಡ ಜಿಲ್ಲೆಯ ಕಾಜಿಪೇಟ್ ಮಂಡಲದ ತೆಕುಲಗುಡೆಮ್ ಗ್ರಾಮದವನಾಗಿದ್ದು, 1980 ರ ದಶಕದಿಂದ ಮಾವೋವಾದಿ ಚಳವಳಿಯಲ್ಲಿ ಸಕ್ರಿಯನಾಗಿದ್ದಾನೆ. ಹತ ಮಾವೋವಾದಿ ನಾಯಕನ ತಲೆಯ ಮೇಲೆ 25 ಲಕ್ಷ ರೂ.ಗಳ ನಗದು ಬಹುಮಾನ ಘೋಷಿಸಲಾಗಿತ್ತು.