ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಐದು ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಒಳಗೊಂಡಂತೆ ಸತತ ಆರನೇ ಬಜೆಟ್ ಅನ್ನು ಮಂಡಿಸಿ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಜುಲೈ 2019 ರಿಂದ ಸತತ ಐದು ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಮೂಲಕ ಹಣಕಾಸು ಸಚಿವರಾದ ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ ಚಿದಂಬರಂ ಮತ್ತು ಯಶವಂತ್ ಸಿನ್ಹಾ ಅವರ ದಾಖಲೆಗಳನ್ನು ನಿರ್ಮಲಾ ಸೀತಾರಾಮನ್ ಹಿಂದಿಕ್ಕಿದ್ದಾರೆ. ಇಂದಿನ ಮಧ್ಯಂತರ ಬಜೆಟ್ ಕೂಡ ಅವರ ದಾಖಲೆಯ ಪುಟಕ್ಕೆ ಸೇರ್ಪಡೆಗೊಂಡಿತು. ಇದರೊಂದಿಗೆ ಹಲವು ದಾಖಲೆಗಳು ಕೂಡ ಅವರ ಪಾಲಿಗೆ ಒಲಿದು ಬಂದಿವೆ.
ಮನಮೋಹನ್ ಸಿಂಗ್, ಅರುಣ್ ಜೇಟ್ಲಿ, ಪಿ ಚಿದಂಬರಂ ಮತ್ತು ಯಶವಂತ್ ಸಿನ್ಹಾ ಸತತ ಐದು ಬಾರಿ ಬಜೆಟ್ ಮಂಡಿಸಿದ್ದರೆ, ಹಣಕಾಸು ಮಂತ್ರಿಯಾಗಿ, ಮೊರಾರ್ಜಿ ದೇಸಾಯಿ 1959-1964 ರ ನಡುವೆ ಐದು ವಾರ್ಷಿಕ ಬಜೆಟ್ ಮತ್ತು ಒಂದು ಮಧ್ಯಂತರ ಬಜೆಟ್ ಮಂಡಿಸಿ ಅತಿಹೆಚ್ಚು ಬಾರಿ ಬಜೆಟ್ ಮಂಡಿಸಿದವರ ಪಟ್ಟಿಯಲ್ಲಿ ಮುಂಚೂಣಿಯಲಿದ್ದಾರೆ. ಸದ್ಯ ಇಂದಿನ ಮಧ್ಯಂತರ ಬಜೆಟ್ ಮಂಡನೆ ಮಾಡುವ ಮೂಲಕ ನರೇಂದ್ರ ಮೋದಿ ನೇತೃತ್ವದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ಇಂದಿನದ್ದು ಮಧ್ಯಂತರ ಬಜೆಟ್ ಆದರೂ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದು, ಇಲ್ಲಿ ಗಮನಿಸಬಹುದು.
ಜಿಡಿಪಿ ಶೇ ಏಳರಷ್ಟನ್ನೂ ದಾಟುವ ನಿರೀಕ್ಷೆ: 2024 - 25ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.7ರ ಸಮೀಪಕ್ಕೆ ಬರುವ ನಿರೀಕ್ಷೆಯಿದೆ. 2030ರ ವೇಳೆಗೆ ಆರ್ಥಿಕತೆ ಶೇ. 7 ಅನ್ನು ದಾಟುವ ಅವಕಾಶವಿದೆ ಎಂದು ಹಣಕಾಸು ಸಚಿವಾಲಯವು ಪರಿಶೀಲನಾ ವರದಿಯಲ್ಲಿಯೂ ತಿಳಿಸಿತ್ತು. ಅದರಂತೆ ಮುಂದಿನ ಮೂರು ವರ್ಷಗಳಲ್ಲಿ ಭಾರತ 5 ಟ್ರಿಲಿಯನ್ ಆರ್ಥಿಕತೆಯ ದೇಶವಾಗುವುದರಲ್ಲಿ ಸಂಶಯ ಇಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕಳೆದ 10 ವರ್ಷಗಳಲ್ಲಿ ಎನ್‌ಡಿಎ ಸಾಧನೆಗಳನ್ನು ಅವರು ಇದೇ ವೇಳೆ ಪಟ್ಟಿ ಮಾಡಿದ್ದಾರೆ.
ಇದು ಕೇವಲ ಮಧ್ಯಂತರ ಬಜೆಟ್ ಆಗಿದ್ದು ಲೋಕಸಭೆ ಚುನಾವಣೆಯ ನಂತರ, ಜೂನ್‌ನಲ್ಲಿ ಹೊಸ ಸರ್ಕಾರ ರಚನೆಯಾಗುವ ಸಾಧ್ಯತೆಯಿದೆ. ಆಗ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಕಳೆದ ತಿಂಗಳು ನಡೆದ ಉದ್ಯಮ ಸಮಾರಂಭವೊಂದರಲ್ಲಿ ಭಾಗಿಯಾಗಿ ಮಾತನಾಡಿದ್ದ ಸೀತಾರಾಮನ್, ಫೆಬ್ರವರಿ 1ರಂದು ಮಂಡಿಸಲಾಗುವ ಬಜೆಟ್‌ನಲ್ಲಿ ಯಾವುದೇ ಹೊಸ ಘೋಷಣೆ ಇರುವುದಿಲ್ಲ. ಪ್ರಮುಖವಾಗಿ ಅದ್ಭುತ ಘೋಷಣೆಗಳಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೂ, ಆರ್ಥಿಕ ದೃಷ್ಟಿಯಿಂದ ಮಧ್ಯಂತರ ಬಜೆಟ್‌ನಲ್ಲಿ ಕೆಲವು ಘೋಷಣೆ ಹಾಗೂ ಸಣ್ಣ-ಪುಟ್ಟ ಬದಲಾವಣೆಯ ಭವರಸೆ ನೀಡಿದ್ದಾರೆ.
ಸಾಮಾನ್ಯವಾಗಿ, ಮಧ್ಯಂತರ ಬಜೆಟ್ ಪ್ರಮುಖ ನೀತಿ ಘೋಷಣೆಗಳನ್ನು ಒಳಗೊಂಡಿರುವುದಿಲ್ಲ. ಆದರೆ, ಆರ್ಥಿಕತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸರ್ಕಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಇನ್ನು ಗುರುವಾರ ಬೆಳಗ್ಗೆ 11 ಗಂಟೆಗೆ ತಮ್ಮ ಭಾಷಣ ಪ್ರಾರಂಭಿಸಿದ ಸಚಿವರು, 11:58ಕ್ಕೆ ಸರಿಯಾಗಿ ಅಂತ್ಯಗೊಳಿಸಿದರು. ಇದು ಅವರ 6ನೇ ಬಜೆಟ್ ಆಗಿದ್ದು, ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ನಂತರ ಬಜೆಟ್ ಮಂಡಿಸಿದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಇದನ್ನೂ ಓದಿ: ಬಜೆಟ್ LIVE- ತೆರಿಗೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ನಿರ್ಮಲಾ