ಚಂಡೀಗಢ: ಜನಪ್ರಿಯ ಪಂಜಾಬಿ ಯುವ ಗಾಯಕ ದಿ.ಸಿಧು ಮೂಸೆವಾಲಾ ಅವರ ಪೋಷಕರಿಗೆ 2ನೇ ಗಂಡು ಮಗು ಜನಿಸಿದೆ. ಇನ್ ವಿಟ್ರೊ ಫರ್ಟಿಲೈಸೇಶನ್ (ಐವಿಎಫ್) ತಂತ್ರಜ್ಞಾನದ ಸಹಾಯದಿಂದ ಮೂಸೆವಾಲ ಪೋಷಕರು ಮಗುವನ್ನು ಬರಮಾಡಿಕೊಳ್ಳಲಿದ್ದಾರೆ ಎಂದು ಇತ್ತೀಚೆಗೆ ಸುದ್ದಿಯಾಗಿತ್ತು. ಆದರೆ ಈ ಸಂಗತಿ ಕೇವಲ ವದಂತಿಯಷ್ಟೇ, ನಂಬಬೇಡಿ ಎಂದು ತಂದೆ ಬಲ್ಕೌರ್ ಸಿಂಗ್ ಮನವಿ ಮಾಡಿದ್ದರು. ಆದರೆ ಇದೀಗ ಅದೇ ವದಂತಿ ನಿಜವಾಗಿದೆ. ಬಲ್ಕೌರ್ ಸಿಂಗ್ ತಮಗೆ ಜನಿಸಿರುವ ಗಂಡು ಮಗುವಿನ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಘೋಷಿಸಿದ್ದಾರೆ.
ಸಿಧು ಮೂಸೆವಾಲಾ ಅವರು ಚರಣ್ ಕೌರ್ ಮತ್ತು ಬಲ್ಕೌರ್ ಸಿಂಗ್ ದಂಪತಿಯ ಏಕೈಕ ಪುತ್ರರಾಗಿದ್ದರು. 2022ರ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಅದೇ ವರ್ಷ ಮೇ 29ರಂದು ಮಾನ್ಸಾದ ಜವಾಹರ್ಕೆ ಗ್ರಾಮದಲ್ಲಿ ದುಷ್ಕರ್ಮಿಗಳ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು.
ಮಗನ ಸಾವಿನ ಬಳಿಕ ತೀವ್ರ ನೋವಿನಲ್ಲಿದ್ದ ಪೋಷಕರು ಇದೀಗ ಎರಡನೇ ಮಗು ಪಡೆದಿದ್ದು ಅತ್ಯಂತ ಸಂತೋಷದಲ್ಲಿದ್ದಾರೆ. ಬಲ್ಕೌರ್ ಸಿಂಗ್ ತಮ್ಮ ಮಗುವಿನ ಜೊತೆಗಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಪಂಜಾಬಿ ಭಾಷೆಯಲ್ಲಿ ಬರೆದುಕೊಂಡಿದ್ದಾರೆ. 'ಶುಭದೀಪ್ (ಸಿಧು ಮೂಸೆವಾಲಾ) ಅವರ ಅನುಯಾಯಿಗಳು, ಅಭಿಮಾನಿಗಳ ಶುಭ ಹಾರೈಕೆಗಳಿಗೆ ಧನ್ಯವಾದಗಳು. ಅಕಲ್ ಪುರಖ್(ದೇವರು) ಶುಭ್ ಅವರ ಚಿಕ್ಕ ಸಹೋದರನನ್ನು ನಮ್ಮ ಮಡಿಲಿಗೆ ಕಳುಹಿಸಿದ್ದಾರೆ. ನನ್ನ ಹೆಂಡತಿಯ ಆರೋಗ್ಯ ಉತ್ತಮವಾಗಿದೆ. ಸರ್ವಶಕ್ತನ ಆಶೀರ್ವಾದಕ್ಕೆ ಧನ್ಯವಾದಗಳು' ಎಂದು ತಿಳಿಸಿದ್ದಾರೆ.
ತಂದೆಗೆ 60, ತಾಯಿಗೆ 58 ವರ್ಷ ವಯಸ್ಸು: ಈ ಪ್ರಕಟಣೆಯ ಮೂಲಕ ಸಿಧು ಮೂಸೆವಾಲಾರ ನಿಜವಾದ ಹೆಸರು ಶುಭದೀಪ್ ಸಿಂಗ್ ಸಿಧು ಎಂಬುದು ತಿಳಿದುಬಂದಿದೆ. ವರದಿಗಳ ಪ್ರಕಾರ ಸಿಧು ಮೂಸೆವಾಲಾ ಅವರ ತಂದೆಗೆ 60 ವರ್ಷ ಹಾಗೂ ತಾಯಿಗೆ 58 ವರ್ಷ ವಯಸ್ಸಾಗಿದೆ. ಎದೆಯೆತ್ತರಕ್ಕೆ ಬೆಳೆದ ಮಗನನ್ನು ಕಳೆದುಕೊಂಡು ದಿಕ್ಕೇ ತೋಚದಂತಿದ್ದ ಈ ದಂಪತಿಯ ಮಡಿಲಿಗೆ ಇದೀಗ ತಮ್ಮದೇ ಮಗು ಬಂದು ಸೇರಿದ್ದು ಹೊಸ ಬದುಕಿನ ಭರವಸೆ ಮೂಡಿಸಿದೆ.
ಇದನ್ನೂ ಓದಿ: ಸಿಧು ಮೂಸೆವಾಲಾ ತಾಯಿ ಗರ್ಭಿಣಿ ವದಂತಿ: ಗಾಯಕನ ತಂದೆ ಕೊಟ್ಟ ಸ್ಪಷ್ಟನೆಯಿದು