ಮುಂಬೈ (ಮಹಾರಾಷ್ಟ್ರ): ಭಾರತೀಯ ಜನತಾ ಪಕ್ಷ (ಬಿಜೆಪಿ)ದಲ್ಲಿ ವಂಶಪಾರಂಪರ್ಯ ರಾಜಕಾರಣವಿದೆ. ಇತರರು ವಂಶಪಾರಂಪರ್ಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸುವ ಮೊದಲು ಬಿಜೆಪಿ ತನ್ನ ಪಕ್ಷದೊಳಗೆ ಇಣುಕಿ ನೋಡಿಕೊಳ್ಳಬೇಕೆಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಕುಟುಕಿದೆ.
ದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ನಡೆಯುತ್ತಿದೆ. ಬಿಜೆಪಿಯು ವಂಶಪಾರಂಪರ್ಯ ರಾಜಕೀಯ ಮತ್ತು ಸ್ವಜನಪಕ್ಷಪಾತದ ಬಗ್ಗೆ ಪ್ರತಿಪಕ್ಷಗಳನ್ನು ಟಾರ್ಗೆಟ್ ಮಾಡಿರುವ ಬಗ್ಗೆ ಪಕ್ಷದ ರಾಷ್ಟ್ರೀಯ ವಕ್ತಾರ ಕ್ಲೈಡ್ ಕ್ರಾಸ್ಟೊ ಟೀಕಿಸಿದ್ದಾರೆ. ಬಿಜೆಪಿಯಲ್ಲೇ ವಂಶಪಾರಂಪರ್ಯ ರಾಜಕೀಯ ಬೆಳೆಯುತ್ತಿದೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 370 ಸ್ಥಾನಗಳಲ್ಲಿ ಗೆಲ್ಲುತ್ತದೆ ಮತ್ತು ಅದರ ಎನ್‌ಡಿಎ ಮೈತ್ರಿಕೂಟವು 400 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿಕೊಳ್ಳುತ್ತಿದೆ. ಅಷ್ಟೊಂದು ವಿಶ್ವಾಸವಿದ್ದರೆ ನಿರಂತರವಾಗಿ ಪ್ರತಿಪಕ್ಷಗಳನ್ನು ಗುರಿಯಾಗಿಸುವುದು ಏಕೆ? ಎಂದು ಅವರು ತಮ್ಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಕಾಂಗ್ರೆಸ್ ಮತ್ತು ಎನ್‌ಸಿಪಿ (ಶರದ್ಚಂದ್ರ ಪವಾರ್) ಅಂತಹ ಹಲವಾರು ಪ್ರಮುಖ ವಿಪಕ್ಷಗಳನ್ನು ಒಳಗೊಂಡಿರುವ ಇಂಡಿಯಾ ಮೈತ್ರಿಕೂಟವು ಜನರ ಬೆಂಬಲದೊಂದಿಗೆ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ. ಇದರಿಂದ ಬಿಜೆಪಿ ಹೆದರುತ್ತಿದೆ ಎಂದು ಕ್ರಾಸ್ಟೊ ಹೇಳಿದ್ದಾರೆ.
ಇದನ್ನೂ ಓದಿ: ಅಜಿತ್ ಪವಾರ್ ಬಣವೇ 'ನಿಜವಾದ ಎನ್‌ಸಿಪಿ': ಮಹಾರಾಷ್ಟ್ರ ಸ್ಪೀಕರ್ ತೀರ್ಪು
1999ರಲ್ಲಿ ಶರದ್ ಪವಾರ್ ಅವರು ಸ್ಥಾಪಿಸಿದ್ದ ಎನ್‌ಸಿಪಿ 2023ರ ಜೂನ್ 30ರಂದು ವಿಭಜನೆಯಾಗಿದೆ. ಎನ್‌ಸಿಪಿ ವಿರುದ್ಧ ಬಂಡಾಯವೆದ್ದಿದ್ದ ಅಜಿತ್ ಪವಾರ್ ಹಿರಿಯ ನಾಯಕರೊಂದಿಗೆ ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರದಲ್ಲಿ ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ, ಈ ಸರ್ಕಾರದಲ್ಲಿ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ, ತಮ್ಮ ಕೆಲ ಬಂಬಲಿಗರು ಸಚಿವರಾಗಿ ಅಧಿಕಾರ ಹೊಂದಿದ್ದಾರೆ. ಮತ್ತೊಂದೆಡೆ, ಶರದ್ ಪವಾರ್ ನೇತೃತ್ವದ ಬಣದ ಎನ್‌ಸಿಪಿ, ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಬಣವು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತಿದೆ.
ಇದನ್ನೂ ಓದಿ: ಡಬಲ್ ಎಂಜಿನ್ ಸರ್ಕಾರ ಎಂದರೆ ನಿರುದ್ಯೋಗಿಗಳಿಗೆ ಡಬಲ್ ಹೊಡೆತ: ರಾಹುಲ್ ಗಾಂಧಿ