ಶಹಜಹಾನ್‌ಪುರ(ಉತ್ತರಪ್ರದೇಶ): ಜಿಲ್ಲೆಯ ಜಲಾಲಾಬಾದ್‌ನಲ್ಲಿ ಮದುವೆ ಸಮಾರಂಭವೊಂದರಲ್ಲಿ ಪುರಸಭೆ ಅಧ್ಯಕ್ಷರ ಸಹೋದರ, ಯುವಕನೊಬ್ಬನನ್ನು ಗುಂಡಿಕ್ಕಿ ಕೊಂದು ಹಾಕಿದ್ದಾನೆ. ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಕಾರ್ಯಕ್ರಮದ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ಕೋಪಗೊಂಡ ಪುರುಸಭೆ ಅಧ್ಯಕ್ಷ ಸಹೋದರ ಯುವಕನ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದು, ತನಿಖೆ ನಡೆಸುತ್ತಿದ್ದಾರೆ.
ಪುರಸಭೆ ಅಧ್ಯಕ್ಷ ಶಕೀಲ್ ಖಾನ್ ಅವರ ಪುತ್ರ ಅಬ್ದುಲ್ ರಜಾಕ್ ಅವರ ವಿವಾಹ ಭಾನುವಾರ ನಡೆದಿತ್ತು. ಬುಧವಾರ ಕೂಡಾ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದಲೇ ನಿಹಾಲ್ ಮುಂಬೈನಿಂದ ಕುಟುಂಬ ಸಮೇತ ಜಲಾಲಾಬಾದ್ಗೆ ಬಂದಿದ್ದರು ಎಂಬ ಅಂಶವು ಪೊಲೀಸರ ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ.
ಮುಂಬೈನಿಂದ ಮದುವೆಗೆ ಅಂತಲೇ ಬಂದಿದ್ದ ನಿಹಾಲ್ ಜೊತೆ, ಪುರಸಭಾ ಅಧ್ಯಕ್ಷ ಶಕೀಲ್ ಖಾನ್ ಸಹೋದರ ಕಾಮಿಲ್, ಯಾವುದೋ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದ. ಇದೇ ಕೋಪದಲ್ಲಿ ನಿಹಾಲ್ ಜತೆ ಜಗಳಕ್ಕೆ ನಿಂತಿದ್ದಾನೆ, ಮಾತಿಗೆ ಮಾತು ಬೆಳೆದು ಕಾಮಿಲ್ ತನ್ನ ಪಿಸ್ತೂಲ್ ತೆಗೆದು ನಿಹಾಲ್ ತಲೆಗೆ ಗುಂಡು ಹಾರಿಸಿದ್ದಾನೆ. ಗುಂಡೇಟು ತಿಂದ ನಿಹಾಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದರಿಂದ ಕಾರ್ಯಕ್ರಮದಲ್ಲಿ ಕೆಲ ಗೊಂದಲ ಉಂಟಾಗಿದೆ, ಅಲ್ಲದೇ ಕಾಲ್ತುಳಿತ ಕೂಡಾ ಆಗಿದೆ. ಈ ನಡುವೆ ಗುಂಡು ಹಾರಿಸಿದ ಕಾಮಿಲ್ ಸ್ಥಳದಿಂದ ಪರಾರಿಯಾಗಿದ್ದಾರೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಇನ್ನು ಕೊಲೆಯಾಗಿರುವ ನಿಹಾಲ್ ಶಕೀಲ್ ಖಾನ್ ರ ಸಂಬಂಧಿ ಆಗಿದ್ದಾರೆ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
ಘಟನೆ ಬಗ್ಗೆ ಪೊಲೀಸರು ಹೇಳುವುದಿಷ್ಟು: ಈ ಬಗ್ಗೆ ಮಾತನಾಡಿರುವ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಕುಮಾರ್ ಅವಸ್ತಿ, ಜಲಾಲಾಬಾದ್ ಪೊಲೀಸ್ ಠಾಣೆ ಪ್ರಭಾರಿ ತಂಡದೊಂದಿಗೆ ಸ್ಥಳಕ್ಕೆ ತೆರಳಿ ಮಾಹಿತಿ ಪಡೆದುಕೊಂಡಿದ್ದಾರೆ. ಸುಲ್ತಾನಪುರದ ದಿಬಿಯಾಪುರ ಗ್ರಾಮವು ಜಲಾಲಾಬಾದ್ ಪ್ರದೇಶದಲ್ಲಿದೆ. ಜಲಾಲಾಬಾದ್ ಪುರಸಭೆ ಅಧ್ಯಕ್ಷ ಶಕೀಲ್ ಅಹ್ಮದ್ ಅವರ ಸಹೋದರ ತನ್ನ ಸ್ವಂತ ಸಂಬಂಧಿ ಮೇಲೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.