ETV Bharat / bharat

ಪಶ್ಚಿಮ ಬಂಗಾಳದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ: 7 ಕಾರ್ಮಿಕರು ಸಾವು, ಹಲವರಿಗೆ ಗಾಯ - Coal Mine Blast - COAL MINE BLAST

ಪಶ್ಚಿಮ ಬಂಗಾಳದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿದ್ದು ಏಳು ಕಾರ್ಮಿಕರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.

ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ
ಪಶ್ಚಿಮ ಬಂಗಾಳದ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ (ETV Bharat)
author img

By PTI

Published : Oct 7, 2024, 2:51 PM IST

ಕೋಲ್ಕತಾ: ಪಶ್ಚಿಮ ಬಂಗಾಳದ ಬಿರ್‌ಭೂಮ್ ಜಿಲ್ಲೆಯ ಖೈರಸೋಲ್‌ನಲ್ಲಿ ಖಾಸಗಿ ಒಡೆತನದ ಕಲ್ಲಿದ್ದಲು ಗಣಿಯಲ್ಲಿ ಸೋಮವಾರ ಸ್ಫೋಟ ಸಂಭವಿಸಿದ್ದು, ಏಳು ಕಾರ್ಮಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.

ಸ್ಫೋಟದ ಬಳಿಕ ಭೂಕುಸಿತ ಸಂಭವಿಸಿದೆ. ಹೀಗಾಗಿ, ಕೆಲವರು ಗಣಿಗಳಲ್ಲೇ ಸಿಲುಕಿರುವ ಸಾಧ್ಯತೆ ಇದೆ. ಮೃತರಲ್ಲಿ ಹೆಚ್ಚಿನವರು ಆದಿವಾಸಿಗಳಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಫೋಟದ ತೀವ್ರತೆಗೆ ಕಾರ್ಮಿಕರ ದೇಹಗಳು ಛಿದ್ರಗೊಂಡಿದ್ದವು. ಹಲವು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಕಲ್ಲಿದ್ದಲು ಉತ್ಖನನಕ್ಕೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಇರುವುದು ಘಟನೆಗೆ ಕಾರಣ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವ ಅಧಿಕಾರಿಯೊಬ್ಬರು ಹೇಳಿದರು.

ಮೃತ ಕಾರ್ಮಿಕರ ಕುಟುಂಬ ಸದಸ್ಯರು ಮತ್ತು ಇತರ ಸ್ಥಳೀಯರು ಗಣಿ ಬಳಿಗೆ ಆಗಮಿಸಿ ಪ್ರತಿಭಟನೆ ಆರಂಭಿಸಿದ್ದರಿಂದ ಇಡೀ ಪ್ರದೇಶದಲ್ಲಿ ಉದ್ವಿಗ್ನತೆ ಉಂಟಾಗಿತ್ತು. ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಸದ್ಯ ಪರಿಸ್ಥಿತಿ ಹತೋಟಿಯಲ್ಲಿದೆ.

ಜಯದೇವ್ ಮುರ್ಮು, ಸೋಮಲಾಲ್ ಹೆಂಬ್ರಾಮ್, ಮಂಗಲ್ ಮರಾಂಡಿ, ಜೂಡು ಮರಾಂಡಿ, ಪಲಾಶ್ ಹೆಂಬ್ರಾಮ್, ರುಬಿಲಾಲ್ ಮುರ್ಮು ಮತ್ತು ಅಮಿತ್ ಸಿಂಗ್ ಮೃತಪಟ್ಟ ಕಾರ್ಮಿಕರು. ಇವರೆಲ್ಲರ ವಯಸ್ಸು ಸುಮಾರು 30ರಿಂದ 35 ವರ್ಷ ಇರಬಹುದೆಂದು ಅಂದಾಜಿಸಲಾಗಿದೆ.

ನಾಲ್ಕು ಅಗ್ನಿಶಾಮಕ ವಾಹನಗಳು, ವೈದ್ಯಕೀಯ ತಂಡ ಮತ್ತು ವಿಪತ್ತು ಸ್ಪಂದನಾ ತಂಡಗಳು ಸ್ಥಳದಲ್ಲಿವೆ ಎಂದು ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: ಉಡುಪಿಯಲ್ಲಿ ಮೇಘ ಸ್ಫೋಟ: ದಿಢೀರ್​ ಪ್ರವಾಹದಿಂದ ಮನೆಗಳಿಗೆ ಹಾನಿ, ವೃದ್ಧೆ ಸಾವು - Heavy Rain In Udupi

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.