ಕರೀಂಗಂಜ್ (ಅಸ್ಸೋಂ): ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಅಸ್ಸೋಂನಲ್ಲಿ ಭಾರೀ ಅನಾಹುತಗಳು ಸಂಭವಿಸುತ್ತಿವೆ. ಮಂಗಳವಾರ ರಾತ್ರಿ ಭೂಕುಸಿತ ಉಂಟಾಗಿದ್ದು, ಕರೀಂಗಂಜ್ನಲ್ಲಿ ನಾಲ್ವರು ಮಕ್ಕಳು ಸೇರಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ.
ಕರೀಂಗಂಜ್ ಜಿಲ್ಲೆಯ ತಾಜುರ್ತಾಲ್ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಅಬ್ದುಲ್ ಕರೀಂ ಎಂಬಾತನ ಇಡೀ ಕುಟುಂಬ ಭೂಕುಸಿತದಲ್ಲಿ ಪ್ರಾಣ ಕಳೆದುಕೊಂಡಿದೆ. ಕುಟುಂಬದ ಐವರೂ ಅವಶೇಷಗಳಡಿ ಸಿಲುಕಿ ಅಸುನೀಗಿದ್ದಾರೆ. ಭೂಕುಸಿತದಲ್ಲಿ ಅಬ್ದುಲ್ ಕರೀಂ ಅವರ ಪತ್ನಿ ರೈಮುನ್ ನೆಸ್ಸಾ (55), ಪುತ್ರಿ ಸಹೇದಾ ಖಾನಂ (18), ಜಹೇದಾ ಖಾನಂ (16), ಹಮೀದಾ ಖಾನಂ (11) ಮತ್ತು ಮೊಮ್ಮಗ ಮೆಹೆದಿ ಹಸನ್ (3) ಮೃತಪಟ್ಟಿದ್ದಾರೆ.
ವಿಷಯ ತಿಳಿದ ಬದರ್‌ಪುರ ಪೊಲೀಸರು ಮತ್ತು ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಅವಶೇಷಗಳಡಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದೆ. ಕೆಲವು ದಿನಗಳ ಹಿಂದೆ, ರಾಜ್ಯದಲ್ಲಿ ಹಲವಾರು ಭೂಕುಸಿತಗಳು ಸಂಭವಿಸಿವೆ. ಜೊತೆಗೆ ಭಾರಿ ಮಳೆಯಿಂದಾಗಿ ನೆರೆರಾಷ್ಟ್ರಗಳಾದ ಸಿಕ್ಕಿಂ, ಅರುಣಾಚಲ ಪ್ರದೇಶದಲ್ಲೂ ಭೀಕರ ದುರಂತಗಳು ಸಂಭವಿಸಿದೆ. ಈಶಾನ್ಯ ಭಾಗದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು ಸಾಮಾನ್ಯ ಜನಜೀವನಕ್ಕೆ ಹಾನಿ ಉಂಟು ಮಾಡಿದೆ. ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಹಲವಾರು ಭಾಗಗಳಲ್ಲಿ ರಸ್ತೆ ಸಂಪರ್ಕ ಕಡಿತವಾಗಿದೆ.
470 ಹಳ್ಳಿಗಳ 1.61 ಲಕ್ಷ ಜನರು ಪ್ರವಾಹಕ್ಕೆ ತುತ್ತು: ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ರಾಜ್ಯದ ಹಲವು ಪ್ರದೇಶಗಳು ಜಲಾವೃತವಾಗಿವೆ. ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಬ್ರಹ್ಮಪುತ್ರ ಮತ್ತು ಬರಾಕ್ ನದಿಗಳ ನೀರಿನ ಮಟ್ಟ ಅಪಾಯದ ಮಟ್ಟ ಮೀತಿ ಹರಿಯುತ್ತಿವೆ.
ರಾಜ್ಯ ವಿಪತ್ತು ಪರಿಹಾರ ಪ್ರಾಧಿಕಾರದ ಇತ್ತೀಚಿನ ಮಾಹಿತಿಯ ಪ್ರಕಾರ, ರಾಜ್ಯದ 15 ಜಿಲ್ಲೆಗಳ 470 ಹಳ್ಳಿಗಳ ಪ್ರದೇಶಗಳು ಜಲಾವೃತವಾಗಿವೆ. 1.61 ಲಕ್ಷ ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ. ಈ ವರ್ಷ ಪ್ರವಾಹದಲ್ಲಿ ಒಟ್ಟು 26 ಮಂದಿ ಸಾವನ್ನಪ್ಪಿದ್ದಾರೆ.
ಕರೀಂಗಂಜ್ ನಗರವು ಹೆಚ್ಚು ಹಾನಿಗೊಳಗಾದ ಜಿಲ್ಲೆಯಾಗಿದೆ. ಇಲ್ಲಿನ 210 ಹಳ್ಳಿಗಳು ನೀರಿನಲ್ಲಿ ಮುಳುಗಿವೆ. ಸಾವಿರಾರು ಜಾನುವಾರುಗಳೂ ಪ್ರವಾಹಕ್ಕೆ ತುತ್ತಾಗಿವೆ. ಪ್ರವಾಹದಿಂದ ಈಗಾಗಲೇ 60 ಹೆಕ್ಟೇರ್ ಕೃಷಿ ಭೂಮಿ ಹಾನಿಗೀಡಾಗಿದೆ. ಸರ್ಕಾರ ಸ್ಥಾಪಿಸಿರುವ ಶೆಲ್ಟರ್‌ಗಳಲ್ಲಿ ಜನರು ಆಶ್ರಯ ಪಡೆದಿದ್ದಾರೆ.
ಇದನ್ನೂ ಓದಿ: ಸಿಕ್ಕಿಂನಲ್ಲಿ ಮಳೆ ಅಬ್ಬರ: ಹಲವೆಡೆ ಭೂಕುಸಿತ, ಸಂಚಾರ ಬಂದ್; ಸಂಕಷ್ಟದಲ್ಲಿ 1,500 ಪ್ರವಾಸಿಗರು - Sikkim Flood