ಡೀಗ್(ರಾಜಸ್ಥಾನ): ಕಳೆದ ಒಂದು ತಿಂಗಳಲ್ಲಿ ರಾಜ್ಯದ ಡೀಗ್ ಜಿಲ್ಲೆಯಲ್ಲಿ ಡಿಫ್ತೀರಿಯಾದಿಂದಾಗಿ ಕನಿಷ್ಠ ಏಳು ಮಕ್ಕಳು ಪ್ರಾಣ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಡಿಫ್ತೀರಿಯಾ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ)ಯ ತಂಡವು ಡೀಗ್ ಜಿಲ್ಲೆಗೆ ಭೇಟಿ ನೀಡಿದೆ.
ಮೃತ ಮಕ್ಕಳು ಮೂರರಿಂದ ಏಳು ವರ್ಷದೊಳಗಿನವರಾಗಿದ್ದು, ಡೀಗ್ ಜಿಲ್ಲೆಯ ನಗರ, ಕಮಾನ್ ಮತ್ತು ಪಹಾಡಿ ಪ್ರದೇಶಗಳ ನಿವಾಸಿಗಳಾಗಿದ್ದಾರೆ. ಇಡೀ ಜಿಲ್ಲೆಯಲ್ಲಿ ವೈದ್ಯಕೀಯ ಇಲಾಖೆ ಹೈ ಅಲರ್ಟ್ ಘೋಷಿಸಿದೆ. ಡಿಫ್ತೀರಿಯಾದಿಂದ ಮಕ್ಕಳು ಸಾವನ್ನಪ್ಪಿದ ಜಿಲ್ಲೆಯ ಹಳ್ಳಿಗಳಲ್ಲಿ, ಡಬ್ಲ್ಯುಎಚ್ಒ ಮತ್ತು ಆರೋಗ್ಯ ಇಲಾಖೆ ಜೈಪುರದ ತಂಡಗಳು ವ್ಯಾಕ್ಸಿನೇಷನ್ ಪ್ರಾರಂಭಿಸಿವೆ.
ಶಂಕಿತ ಸೋಂಕು ತಗುಲಿದ ಮಕ್ಕಳ ರಕ್ತ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಸೆಪ್ಟೆಂಬರ್ 14 ರಂದು ಕಮಾನ್ ಪ್ರದೇಶದಲ್ಲಿ ಸುಮಿತ್ ಎಂದು ಗುರುತಿಸಲಾದ ಏಳು ವರ್ಷದ ಬಾಲಕ ಡಿಫ್ತೀರಿಯಾದಿಂದ ಸಾವನ್ನಪ್ಪಿದ್ದಾನೆ ಎಂದು ಡೀಗ್ ಸಿಎಂಎಚ್ಒ ವಿಜಯ್ ಸಿಂಘಾಲ್ ತಿಳಿಸಿದ್ದಾರೆ. ಇದರ ನಂತರ, ವೈದ್ಯಕೀಯ ಇಲಾಖೆ ಕಮಾನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಕ್ಕಳನ್ನು ಪರೀಕ್ಷಿಸಲು ಪ್ರಾರಂಭಿಸಿದೆ. ಸೆಪ್ಟೆಂಬರ್ 14 ಮತ್ತು ಅಕ್ಟೋಬರ್ 12 ರ ನಡುವೆ, ಜಿಲ್ಲೆಯಲ್ಲಿ ಮತ್ತೆ ಆರು ಮಕ್ಕಳು ಡಿಫ್ತೀರಿಯಾದಿಂದ ಸಾವನ್ನಪ್ಪಿವೆ.
ಜಿಲ್ಲೆಯಲ್ಲಿ ಸುಮಾರು 24 ಮಕ್ಕಳಿಗೆ ಡಿಫ್ತೀರಿಯಾ ಪಾಸಿಟಿವ್ ಬಂದಿದ್ದು, ಈ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಸರ್ಕಾರವು ಉಚಿತವಾಗಿ ಲಸಿಕೆ ನೀಡುತ್ತಿದ್ದರೂ ಜನರು ಲಸಿಕೆ ಹಾಕಿಸಿಕೊಳ್ಳದಿದ್ದರೆ ಇಂಥ ಪರಿಸ್ಥಿತಿಗಳು ಉಂಟಾಗುತ್ತವೆ. ಈ ರೋಗವು ಕೊರಿನೆಬ್ಯಾಕ್ಟೀರಿಯಂ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ. ಬ್ಯಾಕ್ಟೀರಿಯಾ ಮೊದಲು ಗಂಟಲನ್ನು ಹಾನಿಗೊಳಿಸುತ್ತದೆ. ಸರಿಯಾದ ಚಿಕಿತ್ಸೆ ಸಿಗದಿದ್ದರೆ ವ್ಯಕ್ತಿಯು ತನ್ನ ಪ್ರಾಣ ಕಳೆದುಕೊಳ್ಳಬಹುದು. ಈ ರೋಗವನ್ನು ತಡೆಗಟ್ಟುವ ಉದ್ದೇಶದಿಂದ, ಪ್ರತಿ ಹಳ್ಳಿಯಲ್ಲಿ ಪ್ರತಿ ತಿಂಗಳು ಮನೆ ಮನೆಗೆ ಹೋಗಿ ಲಸಿಕೆ ಹಾಕಲಾಗುತ್ತದೆ. ಆದರೆ ಕೆಲವರು ತಮ್ಮ ಮಕ್ಕಳಿಗೆ ಲಸಿಕೆ ಹಾಕಲು ಬಿಡುವುದಿಲ್ಲ" ಎಂದು ಸಿಎಂಎಚ್ಒ ಹೇಳಿದರು.
ಡಿಫ್ತೀರಿಯಾ ಎಂದರೇನು?: ಡಬ್ಲ್ಯುಎಚ್ಒ ಪ್ರಕಾರ, ಡಿಫ್ತೀರಿಯಾ ಎಂಬುದು ಕೊರಿನೆಬ್ಯಾಕ್ಟೀರಿಯಂ ಡಿಫ್ತೀರಿಯಾ ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುವ ಸಾಂಕ್ರಾಮಿಕ ರೋಗವಾಗಿದೆ. ಸೋಂಕು ತಗುಲಿದ 2 ರಿಂದ 5 ದಿನಗಳ ನಂತರ ರೋಗಲಕ್ಷಣಗಳು ಕಾಣಿಸಿಕೊಳ್ಳಲು ಪ್ರಾರಂಭವಾಗುತ್ತವೆ. ರೋಗಲಕ್ಷಣಗಳು ಸೌಮ್ಯದಿಂದ ತೀವ್ರವಾಗಿರಬಹುದು. ಸಾಮಾನ್ಯವಾಗಿ ಗಂಟಲು ನೋವು ಮತ್ತು ಜ್ವರದಿಂದ ಪ್ರಾರಂಭವಾಗಿ ಕ್ರಮೇಣ ರೋಗ ಹೆಚ್ಚಾಗುವುದು ಇದರ ಲಕ್ಷಣಗಳಾಗಿವೆ.
ಸೋಂಕು ತೀವ್ರವಾದ ಸಂದರ್ಭಗಳಲ್ಲಿ, ಬ್ಯಾಕ್ಟೀರಿಯಾವು ವಿಷವನ್ನು (ಟಾಕ್ಸಿನ್) ಉತ್ಪಾದಿಸುತ್ತದೆ. ಇದು ಗಂಟಲಿನ ಹಿಂಭಾಗದಲ್ಲಿ ದಪ್ಪ ಬೂದು ಅಥವಾ ಬಿಳಿ ತೇಪೆಯನ್ನು ಉಂಟುಮಾಡುತ್ತದೆ. ಇದು ವಾಯುಮಾರ್ಗವನ್ನು ನಿರ್ಬಂಧಿಸುವುದರಿಂದ ಉಸಿರಾಡಲು ಅಥವಾ ನುಂಗಲು ಕಷ್ಟವಾಗುತ್ತದೆ ಮತ್ತು ಬೊಗಳುವ ರೀತಿಯ ಕೆಮ್ಮು ಉಂಟಾಗುತ್ತದೆ. ದುಗ್ಧರಸ ಗ್ರಂಥಿಗಳು ಹಿಗ್ಗಿರುವುದರಿಂದ ಕುತ್ತಿಗೆಯು ಭಾಗಶಃ ಊದಿಕೊಳ್ಳಬಹುದು.
ವಿಷವು ರಕ್ತದ ಹರಿವಿಗೆ ಪ್ರವೇಶಿಸಿ ಹೃದಯದ ಸ್ನಾಯುವಿನ ಉರಿಯೂತ ಮತ್ತು ಹಾನಿ, ನರಗಳ ಉರಿಯೂತ, ಮೂತ್ರಪಿಂಡದ ಸಮಸ್ಯೆಗಳು ಮತ್ತು ರಕ್ತದ ಪ್ಲೇಟ್ ಲೆಟ್ಗಳ ಕೊರತೆಯುಂಟಾಗಿ ರಕ್ತಸ್ರಾವದ ಸಮಸ್ಯೆಗಳನ್ನು ಒಳಗೊಂಡಿರುವ ತೊಡಕುಗಳನ್ನು ಉಂಟುಮಾಡಬಹುದು. ಹಾನಿಗೊಳಗಾದ ಹೃದಯ ಸ್ನಾಯುಗಳು ಅಸಹಜ ಹೃದಯ ಬಡಿತಕ್ಕೆ ಕಾರಣವಾಗಬಹುದು ಮತ್ತು ನರಗಳ ಉರಿಯೂತವು ಪಾರ್ಶ್ವವಾಯುವಿಗೆ ಕಾರಣವಾಗಬಹುದು.
ಡಿಫ್ತೀರಿಯಾ ಹೇಗೆ ಹರಡುತ್ತದೆ?: ಡಿಫ್ತೀರಿಯಾ ನೇರ ಸಂಪರ್ಕದಿಂದ ಅಥವಾ ಕೆಮ್ಮು ಅಥವಾ ಸೀನುವಿಕೆಯಂತಹ ಉಸಿರಾಟದ ಹನಿಗಳ ಮೂಲಕ, ಗಾಳಿಯ ಮೂಲಕ ಜನರ ನಡುವೆ ಸುಲಭವಾಗಿ ಹರಡುತ್ತದೆ. ಇದು ಕಲುಷಿತ ಬಟ್ಟೆ ಮತ್ತು ವಸ್ತುಗಳಿಂದಲೂ ಹರಡಬಹುದು.
ಡಿಫ್ತೀರಿಯಾ ಬಗ್ಗೆ ಪ್ರಮುಖ ಸಂಗತಿಗಳು:
- ಡಿಫ್ತೀರಿಯಾ ಲಸಿಕೆಯಿಂದ ತಡೆಗಟ್ಟಬಹುದಾದ ರೋಗವಾಗಿದೆ. ಆದರೆ ರೋಗನಿರೋಧಕ ಶಕ್ತಿಯನ್ನು ಉತ್ಪಾದಿಸಲು ಮತ್ತು ಉಳಿಸಿಕೊಳ್ಳಲು ಅನೇಕ ಡೋಸ್ ಮತ್ತು ಬೂಸ್ಟರ್ ಡೋಸ್ ನೀಡಬೇಕಾಗುತ್ತದೆ.
- ಪ್ರತಿರಕ್ಷಣೆ ಪಡೆಯದ ಅಥವಾ ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿರುವವರಿಗೆ ರೋಗದ ಅಪಾಯ ಹೆಚ್ಚಾಗಿರುತ್ತದೆ.
- ಲಸಿಕೆ ಪಡೆಯದ ವ್ಯಕ್ತಿಗಳಿಗೆ ಸರಿಯಾದ ಚಿಕಿತ್ಸೆ ಸಿಗದಿದ್ದರೆ ಡಿಫ್ತೀರಿಯಾ ಸುಮಾರು 30% ಪ್ರಕರಣಗಳಲ್ಲಿ ಮಾರಣಾಂತಿಕವಾಗಬಹುದು. ಚಿಕ್ಕ ಮಕ್ಕಳು ಸಾಯುವ ಅಪಾಯ ಹೆಚ್ಚಾಗಿರುತ್ತದೆ.
- 2023 ರಲ್ಲಿ, ವಿಶ್ವಾದ್ಯಂತ ಅಂದಾಜು ಶೇ 84 ರಷ್ಟು ಮಕ್ಕಳು ಶೈಶವಾವಸ್ಥೆಯಲ್ಲಿ ಶಿಫಾರಸು ಮಾಡಿದ 3 ಡೋಸ್ ಡಿಫ್ತೀರಿಯಾ ಹೊಂದಿರುವ ಲಸಿಕೆಯನ್ನು ಪಡೆದಿದ್ದಾರೆ. ಇನ್ನು ಶೇ 16 ರಷ್ಟು ಮಕ್ಕಳು ಯಾವುದೇ ಲಸಿಕೆ ಪಡೆದಿಲ್ಲ ಅಥವಾ ಭಾಗಶಃ ಲಸಿಕೆ ಪಡೆದಿದ್ದಾರೆ. ಲಸಿಕಾ ಪ್ರಮಾಣ ದೇಶಗಳ ನಡುವೆ ಭಿನ್ನವಾಗಿದೆ.
ಇದನ್ನೂ ಓದಿ: ಅಮೆರಿಕದಿಂದ 31 ಪ್ರಿಡೇಟರ್ ಡ್ರೋನ್ ಖರೀದಿ; 32 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಭಾರತ ಸಹಿ