ನವದೆಹಲಿ: ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಮಂಜೂರು ಮಾಡಿದ್ದ ಜಾಮೀನಿಗೆ ತಡೆಯಾಜ್ಞೆ ವಿಧಿಸಿರುವ ದೆಹಲಿ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಿಎಂ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರಿಂ ಕೋರ್ಟ್ ಮುಂದೂಡಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌ವಿಎನ್ ಭಟ್ಟಿ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು ಜೂ.26ಕ್ಕೆ ವಿಚಾರಣೆ ಮುಂದೂಡಿದೆ. ಅಬಕಾರಿ ನೀತಿ ಹಗರಣದಲ್ಲಿ ಬಂಧನವಾಗಿರುವ ಕೇಜ್ರಿವಾಲ್ ಅವರಿಗೆ ಕೆಳ ಹಂತದ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಇದನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಇಡಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುಧೀರ್ ಕುಮಾರ್ ಜೈನ್ ಅವರನ್ನೊಳಗೊಂಡ ಪೀಠವು, ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಲು ಇಡಿ ಬಯಸಿದ್ದರಿಂದ ಈ ಜಾಮೀನು ಆದೇಶವನ್ನು 2-3 ದಿನಗಳವರೆಗೆ ಕಾಯ್ದಿರಿಸುತ್ತಿರುವುದಾಗಿ ತಿಳಿಸಿತ್ತು. ಇದೇ ವೇಳೆ, ಇಡಿ ಅರ್ಜಿ ಸಂಬಂಧ ಪ್ರತಿಕ್ರಿಯಿಸುವಂತೆ ಕೇಜ್ರಿವಾಲ್ ಅವರಿಗೆ ಹೈಕೋರ್ಟ್ ನೋಟಿಸ್ ಕೂಡ ಜಾರಿ ಮಾಡಿದೆ.
ಮದ್ಯ ನೀತಿ ಹಗರಣದಲ್ಲಿ ಮಾರ್ಚ್ 21ರಂದು ಇಡಿ ಅಧಿಕಾರಿಗಳು ಸಿಎಂ ಕೇಜ್ರಿವಾಲ್ ಅವರನ್ನು ಬಂಧಿಸಿದ್ದರು. ಇದರ ನಡುವೆ ಲೋಕಸಭೆ ಚುನಾವಣೆಯ ಪ್ರಚಾರಕ್ಕೆಂದು ಸುಪ್ರೀಂ ಕೋರ್ಟ್ ಮೇ 10ರಂದು ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು. ಇದರ ಅವಧಿಯು ಜೂನ್ 2ರಂದು ಮುಗಿದ ಬಳಿಕ ಮತ್ತೆ ಜೈಲಿಗೆ ಶರಣಾಗಿದ್ದರು.
ಇದನ್ನೂ ಓದಿ: ಜಾಮೀನು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ; ಸದ್ಯಕ್ಕೆ ಕೇಜ್ರಿವಾಲ್ ಆಗಲ್ಲ ಬಿಡುಗಡೆ - Aravind Kejriwal