ನವದೆಹಲಿ: ಚುನಾವಣಾ ಬಾಂಡ್‌ಗಳ ಕುರಿತ ಆಯ್ದ ವಿವರಗಳನ್ನಷ್ಟೇ ಬಿಡುಗಡೆ ಮಾಡಬೇಡಿ. ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನೂ ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ(ಎಸ್‌ಬಿಐ) ಖಡಕ್ ಸೂಚನೆ ನೀಡಿತು. ಬಾಂಡ್ ಸಂಖ್ಯೆ ಸೇರಿದಂತೆ ಸಂಪೂರ್ಣ ಮಾಹಿತಿ ಬಹಿರಂಗಪಡಿಸಬೇಕು ಎಂದು ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಾಧೀಶರಿದ್ದ ಪೀಠವು ಚುನಾವಣಾ ಬಾಂಡ್ ಕುರಿತು ವಿಚಾರಣೆ ಮುಂದುವರೆಸಿತು. ಬಾಂಡ್‌ಗಳ ಸಂಖ್ಯೆ ಸೇರಿದಂತೆ ಎಲ್ಲಾ ವಿವರಗಳನ್ನು ಬಹಿರಂಗಪಡಿಸಲು ಎಸ್‌ಬಿಐಗೆ ಹೇಳಲಾಗಿತ್ತು. ನೀವು ಆಯ್ಕೆಯ ಮೂಲಕ ವಿವರಗಳನ್ನು ಬಹಿರಂಗಪಡಿಸಬಾರದು. ಎಸ್‌ಬಿಐನಿಂದ ಮಾಹಿತಿ ಪಡೆದ ನಂತರ ಕೇಂದ್ರ ಚುನಾವಣಾ ಆಯೋಗ ತಕ್ಷಣವೇ ತನ್ನ ವೆಬ್‌ಸೈಟ್‌ನಲ್ಲಿ ಈ ಕುರಿತ ವಿವರಗಳನ್ನು ಅಪ್‌ಲೋಡ್ ಮಾಡಲಿದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಮೌಖಿಕವಾಗಿ ತಿಳಿಸಿತು.
ಈ ಕುರಿತು ಮಾರ್ಚ್ 21ರ ಗುರುವಾರ ಸಂಜೆ 5 ಗಂಟೆಯೊಳಗೆ ವಿವರ ಸಲ್ಲಿಸುವಂತೆ ಎಸ್‌ಬಿಐ ಅಧ್ಯಕ್ಷರಿಗೆ ಕೋರ್ಟ್ ಆದೇಶಿಸಿದೆ.
"ನ್ಯಾಯಮೂರ್ತಿಗಳಾದ ನಾವು ಕೇವಲ ಕಾನೂನಿನ ಆಡಳಿತದಲ್ಲಿದ್ದೇವೆ. ಸಂವಿಧಾನದ ಪ್ರಕಾರ ಕೆಲಸ ಮಾಡುತ್ತೇವೆ" ಎಂದು ವಿಚಾರಣೆ ಸಂದರ್ಭದಲ್ಲಿ ಸಿಜೆಐ ಡಿ.ವೈ.ಚಂದ್ರಚೂಡ್ ಹೇಳಿದರು.
ಇದೇ ವೇಳೆ, 2019ರ ಏಪ್ರಿಲ್ 12ರೊಳಗೆ ಖರೀದಿಸಿದ ಮತ್ತು ಎನ್‌ಕ್ಯಾಶ್ ಮಾಡಿದ ಚುನಾವಣಾ ಬಾಂಡ್‌ಗಳನ್ನು ಬಹಿರಂಗಪಡಿಸಲು ಎಸ್‌ಬಿಐಗೆ ನಿರ್ದೇಶನ ಕೋರಿ ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು.
ಇದನ್ನೂ ಓದಿ: ಚುನಾವಣಾ ಬಾಂಡ್‌ಗಳ ಹೊಸ ಮಾಹಿತಿ ಬಹಿರಂಗ: ಬಿಜೆಪಿಗೆ ₹ 6,987 ಕೋಟಿ, ಜೆಡಿಎಸ್ಗೆ ₹ 89.75 ಕೋಟಿ ದೇಣಿಗೆ