ಚೆನ್ನೈ(ತಮಿಳುನಾಡು): ಕಾಂಚಿಪುರಂ ಜಿಲ್ಲೆಯ ಚುಂಗ್ವಾರ್‌ಛತ್ರಂ ಬಳಿಯ ಸ್ಯಾಮ್‌ಸಂಗ್ ಇಂಡಿಯಾದ ಘಟಕದ ಕಾರ್ಮಿಕರು ಕಳೆದೊಂದು ತಿಂಗಳಿನಿಂದ ನಡೆಸುತ್ತಿರುವ ಪ್ರತಿಭಟನೆಯನ್ನು ಇಂದು ಕೈಬಿಟ್ಟಿದ್ದಾರೆ.
ಇಂದು ಕಾರ್ಮಿಕ ಕಲ್ಯಾಣ ಇಲಾಖೆಯ ಅಧಿಕಾರಿಗಳು ಚೆನ್ನೈ ಮುಖ್ಯ ಕಾರ್ಯದರ್ಶಿ ಕಚೇರಿಯಲ್ಲಿ ಸ್ಯಾಮ್‌ಸಂಗ್ ಇಂಡಿಯಾ ಆಡಳಿತ ಮಂಡಳಿಯ ಪ್ರತಿನಿಧಿಗಳು ಮತ್ತು ಪ್ರತಿಭಟನಾನಿರತ ಕಾರ್ಮಿಕರ ಜೊತೆ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದೆ.
ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೂಚನೆಯ ಮೇರೆಗೆ ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವರು, ಕಾರ್ಮಿಕ ಸಚಿವರ ಸೇರಿದಂತೆ ಅಧಿಕಾರಿಗಳು ವಿವಿಧ ಹಂತಗಳಲ್ಲಿ ನಡೆಸಿದ ಚರ್ಚೆ ಫಲಪ್ರದವಾಗಿದ್ದು, ಸ್ಯಾಮ್‌ಸಂಗ್ ಇಂಡಿಯಾ ಮ್ಯಾನೇಜ್‌ಮೆಂಟ್ ಕಾರ್ಮಿಕರ ಹಿತಾಸಕ್ತಿಗೆ ಕ್ರಮ ತೆಗೆದುಕೊಳ್ಳುವುದಾಗಿ ಘೋಷಿಸಿದೆ.
ರಾಜಿ ಸಂಧಾನ ಸಭೆಯ ನಿರ್ಣಯಗಳು:
- ಮುಷ್ಕರನಿರತ ಕಾರ್ಮಿಕರು ಕೂಡಲೇ ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಮರಳಬೇಕು.
- ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಮಿಕರ ಮೇಲೆ ಆಡಳಿತ ಮಂಡಳಿ ಯಾವುದೇ ಕ್ರಮ ಕೈಗೊಳ್ಳಬಾರದು.
- ಕೆಲಸಕ್ಕೆ ಮರಳಿದ ನಂತರ, ಕಾರ್ಮಿಕರು ಆಡಳಿತ ಮಂಡಳಿಗೆ ಸಂಪೂರ್ಣವಾಗಿ ಸಹಕರಿಸಬೇಕು ಮತ್ತು ಅವರ ಹಿತಾಸಕ್ತಿಗಳಿಗೆ ಹಾನಿಯಾಗುವ ಯಾವುದೇ ಕೆಲಸಗಳನ್ನು ಮಾಡಬಾರದು.
- ಸಮನ್ವಯ ಅಧಿಕಾರಿಯ ಮುಂದೆ ಕಾರ್ಮಿಕರು ಸಲ್ಲಿಸಿದ ಬೇಡಿಕೆಗಳ ಚಾರ್ಟರ್‌ಗೆ ಆಡಳಿತ ಮಂಡಳಿ ಲಿಖಿತ ಉತ್ತರ ಸಲ್ಲಿಸುತ್ತದೆ.
ಈ ನಿರ್ಣಯಗಳನ್ನು ಕಾರ್ಮಿಕರು ಮತ್ತು ಆಡಳಿತ ಮಂಡಳಿ ಒಪ್ಪಿಕೊಂಡಿದ್ದು, ಕೂಡಲೇ ಪ್ರತಿಭಟನೆ ಕೈಬಿಟ್ಟು ಕೆಲಸಕ್ಕೆ ಮರಳುವುದಾಗಿ ಕಾರ್ಮಿಕರು ತಿಳಿಸಿದ್ದಾರೆ.