ಕೋಲ್ಕತಾ, ಪಶ್ಚಿಮ ಬಂಗಾಳ: ಕೋಲ್ಕತಾದ ಆರ್ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಘಟನೆ ಖಂಡಿಸಿ ಪಶ್ಚಿಮ ಬಂಗಾಳದಾದ್ಯಂತ ಮುಷ್ಕರ ನಡೆಸುತ್ತಿರುವ ಕಿರಿಯ ವೈದ್ಯರು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಮಧ್ಯ ಪ್ರವೇಶಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಶುಕ್ರವಾರ ಮನವಿ ರವಾನಿಸಿದ್ದಾರೆ. ರಾಜ್ಯದ ಎಲ್ಲ ಕಿರಿಯ ವೈದ್ಯರು ಪಶ್ಚಿಮ ಬಂಗಾಳ ಕಿರಿಯ ವೈದ್ಯರ ವೇದಿಕೆ (ಡಬ್ಲ್ಯುಬಿಜೆಡಿಎಫ್) ಅಡಿ ಒಂದಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರಧಾನಿ, ಉಪರಾಷ್ಟ್ರಪತಿಗೂ ಇ-ಮೇಲ್ ಪ್ರತಿ ರವಾನೆ: ಕಳೆದ ತಿಂಗಳು ಆರ್ ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಭೀಕರ ಅತ್ಯಾಚಾರ ಮತ್ತು ಕೊಲೆಯ ಘಟನೆಯನ್ನು ರಾಷ್ಟ್ರಪತಿ ಮುರ್ಮು ಈ ಮುನ್ನ ಬಲವಾಗಿ ಖಂಡಿಸಿರುವುದು ಇಲ್ಲಿ ಗಮನಾರ್ಹ.
"ಅಪರಾಧದ ಭೀಕರ ಸ್ವರೂಪ, ಅದನ್ನು ಮುಚ್ಚಿಹಾಕುವ ಪ್ರಯತ್ನಗಳು ಮತ್ತು ಭಯದ ವಾತಾವರಣ ನಿರ್ಮಾಣವಾಗಿರುವ ಮಧ್ಯೆ ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಯಬೇಕೆಂದು ಇಡೀ ರಾಷ್ಟ್ರವೇ ಒತ್ತಾಯಿಸುತ್ತಿದೆ" ಎಂದು ವೈದ್ಯರ ವೇದಿಕೆಯು ರಾಷ್ಟ್ರಪತಿಗಳಿಗೆ ರವಾನಿಸಿದ ಇಮೇಲ್ನಲ್ಲಿ ತಿಳಿಸಲಾಗಿದೆ. ಉಪರಾಷ್ಟ್ರಪತಿ ಜಗದೀಪ್ ಧಂಕರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆ.ಪಿ.ನಡ್ಡಾ ಅವರಿಗೂ ಈ ಇಮೇಲ್ನ ಪ್ರತಿಯನ್ನು ಕಳುಹಿಸಲಾಗಿದೆ.
ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ತಿರುಚಲಾಗಿರುವ ಬಗ್ಗೆ ಕೆಲ ಉದಾಹರಣೆಗಳನ್ನು ಇಮೇಲ್ನಲ್ಲಿ ಪ್ರಸ್ತಾಪಿಸಲಾಗಿದ್ದು, ಬಂಗಾಳದ ವೈದ್ಯಕೀಯ ಕ್ಷೇತ್ರ ಮತ್ತು ವೈದ್ಯಕೀಯ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕವಾಗಿ ಬೇರೂರಿರುವ ಭ್ರಷ್ಟಾಚಾರದ ಬಗ್ಗೆ ಇಮೇಲ್ನಲ್ಲಿ ಮಾಹಿತಿ ನೀಡಲಾಗಿದೆ.
"ಇಂಥ ಭಯದ ವಾತಾವರಣದಲ್ಲಿ ನಾವು ಆಡಳಿತದ ಬಗ್ಗೆ ಅಪನಂಬಿಕೆ ಹೊಂದಿದ್ದು, ವೈದ್ಯಕೀಯ ಕ್ಷೇತ್ರದಲ್ಲಿ ಸುರಕ್ಷತೆಯ ವಾತಾವರಣ ಮೂಡಿಸಲು ಆಳವಾಗಿ ಬೇರುಬಿಟ್ಟಿರುವ ದುಷ್ಟ ಶಕ್ತಿಗಳನ್ನು ನಿರ್ಮೂಲನೆ ಮಾಡುವುದು ಅಗತ್ಯ" ಎಂದು ಇಮೇಲ್ನಲ್ಲಿ ಬರೆಯಲಾಗಿದೆ.
ಕೆಲಸದ ಸ್ಥಳದಲ್ಲಿ ಬೆಳಕಿನ ಕೊರತೆ: ಆಸ್ಪತ್ರೆಯ ಆವರಣದಲ್ಲಿ ನಿಯಮಿತವಾಗಿ ಪೊಲೀಸ್ ಗಸ್ತು ಇಲ್ಲದಿರುವುದು, ಕೆಲಸದ ಸ್ಥಳದಲ್ಲಿ ಬೆಳಕಿನ ಕೊರತೆ, ಕಳಪೆ ಬೀಗ ಮತ್ತು ಭದ್ರತಾ ವ್ಯವಸ್ಥೆ ಹಾಗೂ ಕುಂದುಕೊರತೆ ಪರಿಹಾರ ವ್ಯವಸ್ಥೆ ಇಲ್ಲದಿರುವುದು ಸೇರಿದಂತೆ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿನ ಅಸಮರ್ಪಕ ಮೂಲಸೌಕರ್ಯ ಸೌಲಭ್ಯಗಳು ಮತ್ತು ಭದ್ರತಾ ವ್ಯವಸ್ಥೆಗಳ ಬಗ್ಗೆ ಕಿರಿಯ ವೈದ್ಯರು ಇಮೇಲ್ ಮೂಲಕ ರಾಷ್ಟ್ರಪತಿಗಳಿಗೆ ಮಾಹಿತಿ ನೀಡಿದ್ದಾರೆ.
"ಈ ಕಷ್ಟದ ಸಮಯದಲ್ಲಿ ನಿಮ್ಮ ಮಧ್ಯಪ್ರವೇಶವು ನಮ್ಮೆಲ್ಲರಿಗೂ ಆಶಾದೀಪವಾಗಿ ಕೆಲಸ ಮಾಡಲಿದೆ ಮತ್ತು ಅದು ನಮ್ಮನ್ನು ಸುತ್ತುವರೆದಿರುವ ಕತ್ತಲೆಯಿಂದ ಹೊರಬರುವ ಮಾರ್ಗವನ್ನು ತೋರಿಸಲಿದೆ" ಎಂದು ಕಿರಿಯ ವೈದ್ಯರು ರಾಷ್ಟ್ರಪತಿಯವರಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ : ಹೇಮಾ ಕಮಿಟಿ ಮುಂದೆ ಸಾಕ್ಷ್ಯ ನುಡಿದ 50 ಜನರನ್ನು ಭೇಟಿಯಾಗಲಿದೆ ಎಸ್ಐಟಿ: 10 ದಿನಗಳಲ್ಲಿ ಪ್ರಕ್ರಿಯೆ ಪೂರ್ಣ - Hema Committee Report