ಅಮೃತಸರ (ಪಂಜಾಬ್): ಅಮೃತಸರದ ಶ್ರೀ ಗುರು ರಾಮದಾಸ್ ಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ಮಾಹಿತಿ ಪ್ರಕಾರ, ಬೆದರಿಕೆ ಹಾಕಿರುವ ಆರೋಪಿಯು, ವಿಮಾನ ನಿಲ್ದಾಣದಲ್ಲಿರುವ ಇಂಡಿಗೋ ಏರ್ಲೈನ್ಸ್ನ ಸ್ವಾಗತ ಕೌಂಟರ್‌ಗೆ ಆರು ಬಾಂಬ್‌ಗಳನ್ನು ಇಟ್ಟಿರುವುದಾಗಿ ಇಂಡಿಗೋ ಏರ್ಲೈನ್ಸ್ನ ಅಧಿಕೃತ ಇ-ಮೇಲ್ ಖಾತೆಗೆ ಇ-ಮೇಲ್ ಕಳುಹಿಸಿದ್ದಾನೆ. ಆರೋಪಿ ನೀಡಿದ ವಿಳಾಸಕ್ಕೆ ಒಂದು ಕೋಟಿ ರೂಪಾಯಿ ಕಳುಹಿಸದಿದ್ದರೆ ವಿಮಾನ ನಿಲ್ದಾಣವನ್ನು ಸ್ಫೋಟಿಸಲಾಗುವುದು ಎಂದು ಉಲ್ಲೇಖಿಸಿದ್ದಾನೆ.
ಓರ್ವ ಆರೋಪಿಯ ಬಂಧನ: ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಓರ್ವನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಫಿರೋಜ್‌ಪುರ ನಿವಾಸಿ ದರ್ಶನ್ ಸಿಂಗ್ ಎಂಬುವರ ಪುತ್ರ ಗುರುದೇವ್ ಸಿಂಗ್ ಅಲಿಯಾಸ್ ಸಾಬಿ ಎಂದು ಗುರುತಿಸಲಾಗಿದೆ. ಆತನನ್ನು ಮೂರು ದಿನಗಳ ಕಾಲ ಕಸ್ಟಡಿಗೆ ಪಡೆಯಲಾಗಿದ್ದು, ವಿಚಾರಣೆ ನಡೆಯುತ್ತಿದೆ.
ಇತ್ತೀಚಿನ ಪ್ರಕರಣ, ಚಂಡೀಗಢ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಎರಡು ತಿಂಗಳ ಹಿಂದೆ ಚಂಡೀಗಢ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದಿತ್ತು. ಇದಕ್ಕಾಗಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಇ-ಮೇಲ್ ಕಳುಹಿಸಿ ಬೆದರಿಕೆ ಹಾಕಲಾಗಿತ್ತು. ಇ-ಮೇಲ್ ಬಂದ ನಂತರ, ಚಂಡೀಗಢ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು, ಮೊಹಾಲಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಮೊಹಾಲಿ ಪೊಲೀಸರು ಮತ್ತು ಸಿಐಎಸ್‌ಎಫ್ ಜಂಟಿಯಾಗಿ ತನಿಖಾ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ, ಇಲ್ಲಿ ಅಂಥದ್ದೇನೂ ಕಂಡುಬಂದಿರಲಿಲ್ಲ. ಇದಾದ ಬಳಿಕ ವಿಮಾನ ಹಾರಾಟ ಸುಗಮವಾಗಿ ಆರಂಭವಾಯಿತು.
ಆಸ್ಪತ್ರೆ ಸ್ಫೋಟಿಸುವ ಬೆದರಿಕೆ ಬಂದಿತ್ತು: ಜೂನ್ 12 ರಂದು ಚಂಡೀಗಢದ ಸೆಕ್ಟರ್ 32 ನಲ್ಲಿರುವ ಮಾನಸಿಕ ಆರೋಗ್ಯ ಸಂಸ್ಥೆಗೆ ಬಾಂಬ್ ಬೆದರಿಕೆ ಬಂದಿತ್ತು. ಮಾನಸಿಕ ಆಸ್ಪತ್ರೆಯಲ್ಲಿ ಬಾಂಬ್‌ಗಳನ್ನು ಇರಿಸಲಾಗಿದೆ. ಅವುಗಳು ಬೇಗನೆ ಸ್ಫೋಟಗೊಳ್ಳುತ್ತವೆ ಮತ್ತು ನೀವೆಲ್ಲರೂ ಮೃತಪಡುತ್ತಿರಿ. ಪೊಲೀಸರ ಪ್ರಕಾರ, ಇ-ಮೇಲ್ ಜೂನ್ 12ರಂದು ಬೆಳಗ್ಗೆ 9.40ಕ್ಕೆ ಬಂದಿತ್ತು. ಇ-ಮೇಲ್ ನೋಡಿದ ಸಿಬ್ಬಂದಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯ ಆರಂಭಿಸಿದ್ದವು. ಆಗ ಆಸ್ಪತ್ರೆಯಲ್ಲಿ ಸುಮಾರು 150 ರೋಗಿಗಳು ಇದ್ದರು. ಆಸ್ಪತ್ರೆಯಲ್ಲಿ 20 ರೋಗಿಗಳು ದಾಖಲಾಗಿದ್ದರು. ಆ ಎಲ್ಲಾ ರೋಗಿಗಳನ್ನು ತಕ್ಷಣವೇ ಪಕ್ಕದ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ: ಲಂಡನ್ನ ಹೋಟೆಲ್ನಲ್ಲಿ ಏರ್ ಇಂಡಿಯಾ ಮಹಿಳಾ ಸಿಬ್ಬಂದಿ ಮೇಲೆ ಅಪರಿಚಿತನಿಂದ ಹಲ್ಲೆ - Air India Crew Member Assaulted