ಚೆನ್ನೈ, ತಮಿಳುನಾಡು: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಕಡಿಮೆ ಒತ್ತಡದಿಂದಾಗ ತಮಿಳುನಾಡು ರಾಜಧಾನಿ ಚೆನ್ನೈ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳಾದ ತಿರುವಳ್ಳುವರ್, ಕಾಂಚೀಪುರಂ ಮತ್ತು ಚೆಂಗಲ್ಪಟ್ಟು ಪ್ರದೇಶದಲ್ಲಿ ಸೋಮವಾರ ರಾತ್ರಿ ಭಾರಿ ಮಳೆಯಾಗಿದೆ. ಇದರಿಂದ ಅನೇಕ ತಗ್ಗು ರಸ್ತೆಗಳಲ್ಲಿ ನೀರು ನಿಂತಿದ್ದು, ಜನರು, ವಾಹನ ದಟ್ಟಣೆ ಸೇರಿದಂತೆ ಇತರ ಸಮಸ್ಯೆಗೆ ಒಳಗಾಗುವಂತೆ ಆಗಿದೆ.
ಸೋಮವಾರ ರಾತ್ರಿಯಿಂದ ಚೆನ್ನೈ ಮತ್ತು ತಿರುವಳ್ಳೂರು ಜಿಲ್ಲೆ ಸೇರಿದಂತೆ ಅನೇಕ ಕಡೆ ಅಧಿಕ ಮಳೆಯಾಗಿದೆ. ಮಳೆ ಮುನ್ಸೂಚನೆ ಕುರಿತು ಎಕ್ಸ್ನಲ್ಲಿ ಐಎಂಡಿ ಪೋಸ್ಟ್ ಮಾಡಿದ್ದು, ಆಗ್ನೇಯ ಬಂಗಾಳ ಕೊಲ್ಲಿಯಲ್ಲಿನ ಕಡಿಮೆ ಒತ್ತಡದ ಪ್ರದೇಶ ಏರ್ಪಟ್ಟಿದ್ದು, ಈ ಮಾರುತಗಳು ಪಶ್ಚಿಮ-ವಾಯುವ್ಯದ ಕಡೆಗೆ ಚಲಿಸುವ ಸಾಧ್ಯತೆಯಿದೆ ಮತ್ತು ದಕ್ಷಿಣ ಬಂಗಾಳ ಕೊಲ್ಲಿಯ ಮಧ್ಯ ಭಾಗಗಳಲ್ಲಿ ಕಡಿಮೆ ಒತ್ತಡದ ಪ್ರದೇಶವಾಗಿ ಮಾರ್ಪಟ್ಟಿದೆ. ಇದರಿಂದ ಮುಂದಿನ ಎರಡು ದಿನ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರ ಪ್ರದೇಶದ ಕರಾವಳಿಯ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ.
(A) Low Pressure Area over southeast Bay of Bengal
— India Meteorological Department (@Indiametdept) October 14, 2024
The low pressure area over southeast Bay of Bengal persisted over the same region at 2330 hours IST of yesterday, the 14thOctober 2024.
It is likely to move west-northwestwards and become a well marked low pressure area over… pic.twitter.com/KSxZEPVZWO
ಇಂದು - ನಾಳೆ ಚೆನ್ನೈ ಸುತ್ತಮುತ್ತ ಭಾರಿ ಮಳೆ: ಅಕ್ಟೋಬರ್ 15 ಮತ್ತು 16 ರಂದು ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆ ತಿಳಿಸಿದ್ದು, ಈ ಪ್ರದೇಶಗಳಲ್ಲಿ ರೆಡ್ ಆಲರ್ಟ್ ಘೋಷಣೆ ಮಾಡಲಾಗಿದೆ. ರಾಣಿಪೇಟ್, ತಿರುವಣ್ಣಾಮಲೈ, ವಿಲ್ಲುಪುರಂ, ವೆಲ್ಲೂರು, ತಿರುಪತ್ತೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಕಲ್ಲಕುರಿಚಿ ಮತ್ತು ಕಡಲೂರಿನಲ್ಲಿ ಆರೆಂಜ್ ಮತ್ತು ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಸೋಮವಾರ ರಾತ್ರಿ ಸುರಿದ ಮಳೆಗೆ ಚೆನ್ನೈನ ಹಲವು ಕಡೆ, ಪೆರಂಬೂರ್, ಕೊಯಾಂಬೆಡು ಮತ್ತು ಇತರ ಸ್ಥಳಗಳು ಸೇರಿದಂತೆ ಹಲವಾರು ಭಾಗಗಳಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದೆ.
ಸಿಎಂ ನೇತೃತ್ವದಲ್ಲಿ ತುರ್ತು ಸಭೆ, ಪರಿಸ್ಥಿತಿಯ ಪರಿಶೀಲನೆ: ತಮಿಳುನಾಡಿನಲ್ಲಿ ಭಾರೀ ಮಳೆ ಹಿನ್ನೆಲೆ ಸೋಮವಾರ ಸಂಜೆ ಸಿಎಂ ಎಂಕೆ ಸ್ಟಾಲಿನ್ ಮಳೆಯ ಸನ್ನದ್ಧತೆ ಕುರಿತು ಅಧಿಕಾರಿಗಳು ಮತ್ತು ಸಚಿವರೊಂದಿಗೆ ಸಭೆ ನಡೆಸಿ ಮುನ್ನೆಚ್ಚರಿಕಾ ಕ್ರಮ ಹಾಗೂ ಮಳೆ ಪರಿಹಾರ ಕ್ರಮದ ಕುರಿತು ಚರ್ಚಿಸಿದ್ದರು. ನಗರದಲ್ಲಿ ತಗ್ಗು ಪ್ರದೇಶದಲ್ಲಿ ಜಲಾವೃತಗೊಂಡಲ್ಲಿ ಅವುಗಳನ್ನು ಹೊರತೆಗೆಯಲಿ 990 ಪಂಪ್‌ಗಳು, 57 ಪಂಪ್‌ಸೆಟ್‌ಗಳನ್ನು ಹೊಂದಿದ ಟ್ರ್ಯಾಕ್ಟರ್‌ಗಳು ಮತ್ತು 36 ದೋಣಿಗಳನ್ನು ಯಾವುದೇ ತುರ್ತು ಸಂದರ್ಭದಲ್ಲಿ ಬಳಕೆಗೆ ಸಿದ್ಧವಾಗಿರುವಂತೆ ನೋಡಿಕೊಳ್ಳಲು ತಿಳಿಸಿದ್ದರು. ಜೊತೆಗೆ ನೈರ್ಮಲ್ಯ ಕಾಪಾಡಲು 46ಎಂಟಿ ಬ್ಲೀಚಿಂಗ್ ಪೌಡರ್ ಮತ್ತು ಫಿನೈಲ್ ಲಭ್ಯತೆ ಹಾಗೂ ವೈದ್ಯಕೀಯ ಸಾಮಗ್ರಿ ಮತ್ತು ಆಹಾರ ಸುರಕ್ಷತೆ ಕಾಪಾಡುವಂತೆ ತಿಳಿಸಿದ್ದರು. ಮಳೆ ಸಂತ್ರಸ್ತರನ್ನು ಸುರಕ್ಷಿತ ಸ್ಥಳಾಂತರಕ್ಕಾಗಿ ವಿವಿಧೆಡೆ 169 ಸಂಪೂರ್ಣ ಸುಸಜ್ಜಿತ ಪರಿಹಾರ ಕೇಂದ್ರಗಳು ಕಾರ್ಯ ನಿರ್ವಹಣೆಗೆ ಸೂಚನೆ ನೀಡಲಾಗಿತ್ತು.
ಇದನ್ನೂ ಓದಿ: ತಮಿಳುನಾಡಿನಲ್ಲಿ ಭಾರಿ ಮಳೆ ಮುನ್ಸೂಚನೆ: ಐಟಿ ಉದ್ಯೋಗಿಗಳಿಗೆ ಅ.18ರವರೆಗೆ ವರ್ಕ್ ಫ್ರಂ ಹೋಮ್‌ಗೆ ಸೂಚನೆ