ನವದೆಹಲಿ: ರೈಲ್ವೆ ಹುದ್ದೆಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿರುವ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಭಜರಂಗ್ ಪುನಿಯಾ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನುಮತಿ ದೊರೆಯುವ ಸಾಧ್ಯತೆ ಇದೆ. ಇಬ್ಬರ ರಾಜೀನಾಮೆಯನ್ನು ಇಲಾಖಾಧಿಕಾರಿಗಳು ಅಂಗೀಕರಿಸುವ ಪ್ರಕ್ರಿಯೆ ನಡೆಸುತ್ತಿದ್ದಾರೆ.
ಕುಸ್ತಿಪಟುಗಳ ಸಾಧನೆ ಮೆಚ್ಚಿ ಕ್ರೀಡಾ ಕೋಟಾದಡಿ ಇಬ್ಬರಿಗೆ ಕೇಂದ್ರ ರೈಲ್ವೆ ಇಲಾಖೆಯಲ್ಲಿ ಕೇಂದ್ರ ಸರ್ಕಾರ ಹುದ್ದೆ ನೀಡಿತ್ತು. ಇದೀಗ ಇಬ್ಬರೂ ಎರಡು ದಿನಗಳ ಹಿಂದಷ್ಟೇ ಉದ್ಯೋಗಕ್ಕೆ ರಾಜೀನಾಮೆ ನೀಡಿ ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಸೇರಿದ್ದರು. ಪಕ್ಷವು ವಿನೇಶ್ ಫೋಗಟ್ಗೆ ಜುನಾಲಾ ಕ್ಷೇತ್ರದಿಂದ ಕಣಕ್ಕಿಳಿಯಲು ಅವಕಾಶ ಮಾಡಿಕೊಟ್ಟಿದೆ. ಭಜರಂಗ್ಗೆ ಪಕ್ಷದಲ್ಲಿ ಸ್ಥಾನಮಾನ ನೀಡಿದೆ.
ರಾಜೀನಾಮೆ ಬಳಿಕ ನೋಟಿಸ್ ಅವಧಿಯನ್ನು ಪೂರೈಸದ ಮತ್ತು ಪೂರ್ವ ಮಾಹಿತಿ ನೀಡದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆಯು ಇಬ್ಬರಿಗೆ ಉತ್ತರ ಬಯಸಿ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಇಬ್ಬರೂ ಪ್ರತಿಕ್ರಿಯಿಸುವ ಮೊದಲೇ ರಾಜೀನಾಮೆ ಅಂಗೀಕರಿಸಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆಯಲ್ಲಿ ಸ್ಪರ್ಧೆಗಿಲ್ಲ ಅಡ್ಡಿ: ರೈಲ್ವೇ ಮೂಲಗಳ ಪ್ರಕಾರ, ಫೋಗಟ್ ಮತ್ತು ಪುನಿಯಾ ಇಬ್ಬರೂ ಸಾಧ್ಯವಾದಷ್ಟು ಬೇಗ ಪರಿಹಾರ ಬಯಸಿದ್ದಾರೆ. ಹೀಗಾಗಿ ಇಲಾಖೆಯು ಇವರ ರಾಜೀನಾಮೆಯನ್ನು ಅಂಗೀಕರಿಸಿಲು ಆರಂಭಿಸಿದೆ. ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಆತಂಕವಿಲ್ಲ. ಇಲಾಖೆಯು ಯಾವುದೇ ಅಡ್ಡಿ ಮಾಡುವ ಸಾಧ್ಯತೆ ಇಲ್ಲ ಎಂದು ತಿಳಿದುಬಂದಿದೆ.
ಕಳೆದ ಶುಕ್ರವಾರ ದೆಹಲಿಯ ಎಐಸಿಸಿ ಕೇಂದ್ರ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಇಬ್ಬರು ಕುಸ್ತಿಪಟುಗಳು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಹರಿಯಾಣ ವಿಧಾನಸಭೆ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಸೇರುವ ನಿರ್ಧಾರವನ್ನು ಕುಸ್ತಿಪಟುಗಳು ಪ್ರಕಟಿಸಿದ ನಂತರ ರೈಲ್ವೆ ಇಲಾಖೆಯು ಇಬ್ಬರೂ ಕುಸ್ತಿಪಟುಗಳಿಗೆ ಶೋಕಾಸ್ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ವಿನೇಶ್ ಫೋಗಟ್ ಅವರು ಚುನಾವಣೆಗೆ ಸ್ಪರ್ಧಿಸಬಹುದೇ ಎಂಬ ಪ್ರಶ್ನೆಗಳು ಎದ್ದಿದ್ದವು. ರಾಜೀನಾಮೆ ಬಳಿಕ ಮೂರು ತಿಂಗಳ ಸೂಚನಾ ಅವಧಿ (ನೋಟಿಸ್ ಪೀರಿಯಡ್)ಯನ್ನು ಅವರು ಪೂರೈಸಬೇಕಿತ್ತು.
ಇದೀಗ, ಕುಸ್ತಿಪಟುಗಳ ರಾಜೀನಾಮೆಯನ್ನು ಅಂಗೀಕರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮೂಲಕ, ರೈಲ್ವೆಯು ಇಬ್ಬರು ಆಟಗಾರರನ್ನು ಸೇವಾ ನಿಯಮಗಳಿಂದ ಮುಕ್ತಗೊಳಿಸಲು ಮುಂದಾಗಿದೆ.
ಹರಿಯಾಣ ಚುನಾವಣೆಗೆ ವಿನೇಶ್ ಫೋಗಟ್ ಅವರ ಪ್ರವೇಶವು ರಾಜಕೀಯ ವಲಯಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಪ್ಯಾರಿಸ್ ಒಲಿಂಪಿಕ್ಸ್ ಕುಸ್ತಿ ವಿಭಾಗದಲ್ಲಿ ಫೈನಲ್ ತಲುಪಿದ್ದ ವಿನೇಶ್ ಫೋಗಟ್ ದೇಹ ತೂಕ ಹೆಚ್ಚಿದ್ದರಿಂದ ನಿಯಮಗಳನುಸಾರ ಅನರ್ಹತೆಗೆ ಒಳಗಾಗಿದ್ದರು. ಇಡೀ ದೇಶವೇ ಈ ಬಗ್ಗೆ ಮರುಗಿತ್ತು.
ಇದನ್ನೂ ಓದಿ: ಕಾಂಗ್ರೆಸ್ ಸೇರಿರುವ ಫೋಗಟ್, ಪುನಿಯಾಗೆ ಶೋಕಾಸ್ ನೋಟಿಸ್; ಹೀಗಿದೆ ರೈಲ್ವೆ ಇಲಾಖೆ ಸ್ಪಷ್ಟನೆ - Show Cause Notice