ನವದೆಹಲಿ: ಕಾಂಗ್ರೆಸ್ ಪಕ್ಷ ಸೇರಿರುವ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಭಜರಂಗ್ ಪುನಿಯಾ ಅವರ ರಾಜೀನಾಮೆಯನ್ನು ರೈಲ್ವೆ ಇಲಾಖೆ ಸೋಮವಾರ ಅಧಿಕೃತವಾಗಿ ಅಂಗೀಕರಿಸಿತು. ಇದರಿಂದ ಫೋಗಟ್ ಅವರು ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಅಡ್ಡಿ ಇಲ್ಲದೇ ಸ್ಪರ್ಧೆ ಮಾಡಬಹುದು.
ವಿನೇಶ್ ಮತ್ತು ಭಜರಂಗ್ ಅವರು ರೈಲ್ವೆ ಇಲಾಖೆಯ ಉದ್ಯೋಗಿಗಳಾಗಿದ್ದರು. ಬದಲಾದ ವಿದ್ಯಮಾನದಲ್ಲಿ ಇಬ್ಬರೂ ಕಾಂಗ್ರೆಸ್ ಪಕ್ಷ ಸೇರಿದ್ದರು. ರಾಜಕೀಯಕ್ಕೆ ಎಂಟ್ರಿ ನೀಡಿದ್ದರಿಂದ ನಿಯಮಗಳ ಪ್ರಕಾರ, ಸರ್ಕಾರ ಹುದ್ದೆಗೆ ರಾಜೀನಾಮೆ ನೀಡಬೇಕಿತ್ತು. ಹೀಗಾಗಿ ಕುಸ್ತಿಪಟುಗಳು ರೈಲ್ವೆ ಹುದ್ದೆಗೆ ಸೆಪ್ಟೆಂಬರ್ 6ರಂದು ರಾಜೀನಾಮ ಸಲ್ಲಿಸಿದ್ದರು. ಇದೀಗ ಅವರ ರಾಜೀನಾಮೆ ಅಂಗೀಕಾರವಾಗಿದೆ.
ತಿಂಗಳ ಸಂಬಳ ಪಾವತಿಸಿದ ಜಟ್ಟಿಗಳು: ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾಹಿತಿ ಹಂಚಿಕೊಂಡಿರುವ ಉತ್ತರ ರೈಲ್ವೇಯ ಹಿರಿಯ ಅಧಿಕಾರಿ, ವಿನೇಶ್ ಫೋಗಟ್ ಮತ್ತು ಭಜರಂಗ್ ಪುನಿಯಾ ಅವರು, ಒಂದು ತಿಂಗಳ ಸಂಬಳವನ್ನು ಠೇವಣಿ ಮಾಡಿದ್ದರಿಂದ ತಕ್ಷಣಕ್ಕೆ ಜಾರಿಗೆ ಬರುವಂತೆ ರಾಜೀನಾಮೆಗಳನ್ನು ಅಂಗೀಕರಿಸಲಾಗಿದೆ. ಇಲ್ಲವಾದಲ್ಲಿ ಇಬ್ಬರೂ ಮೂರು ತಿಂಗಳ ನೋಟಿಸ್ ಅವಧಿಯನ್ನು ಪೂರೈಸಬೇಕಾಗಿತ್ತು. ಆದರೆ ನಿಯಮದ ಅನುಸಾರ ತಿಂಗಳ ಸಂಬಳವನ್ನು ಪಾವತಿ ಮಾಡಿದ್ದರಿಂದ ಅವರನ್ನು ಹುದ್ದೆಯಿಂದ ಮುಕ್ತಗೊಳಿಸಲಾಗಿದೆ ಎಂದರು.
ಕ್ರೀಡಾ ಕೋಟಾದಲ್ಲಿ ಹುದ್ದೆ ಪಡೆದುಕೊಂಡಿದ್ದ ಕುಸ್ತಿಪಟುಗಳು ಕಾಂಗ್ರೆಸ್ ಪಕ್ಷ ಸೇರುವ ಸಲುವಾಗಿ ಸೆಪ್ಟೆಂಬರ್ 6ರ ಮಧ್ಯಾಹ್ನ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಸೆಪ್ಟೆಂಬರ್ 7 ಮತ್ತು 8 ಶನಿವಾರ ಮತ್ತು ಭಾನುವಾರವಾದ್ದರಿಂದ ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ನಿಯಮಗಳನ್ನು ಪಾಲಿಸಿದ್ದರಿಂದ ಇಂದು ಇಬ್ಬರ ರಾಜೀನಾಮೆಯನ್ನೂ ಪಡೆಯಲಾಗಿದೆ ಎಂದು ತಿಳಿಸಿದರು.
ನೋಟಿಸ್ ನೀಡಿದ್ದ ರೈಲ್ವೆ: ಇದಕ್ಕೂ ಮೊದಲು ವಿನೇಶ್ ಫೋಗಟ್ ಮತ್ತು ಭಜರಂಗ್ ಪುನಿಯಾ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಿದ್ದರಿಂದ ಸ್ಪಷ್ಟನೆ ಕೋರಿ ಇಬ್ಬರಿಗೂ ರೈಲ್ವೆ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿತ್ತು. ಪ್ರತಿಕ್ರಿಯಿಸಲು 10 ದಿನಗಳ ಕಾಲಾವಕಾಶ ನೀಡಲಾಗಿತ್ತು. ಜಟ್ಟಿಗಳಿಗೆ ನೋಟಿಸ್ ನೀಡಿದ್ದನ್ನು ಕಾಂಗ್ರೆಸ್ ಟೀಕಿಸಿತ್ತು. ಕೇಂದ್ರ ಸರ್ಕಾರ ಅಧಿಕಾರ ಬಳಸಿ ಇಬ್ಬರಿಗೆ ನೋಟಿಸ್ ನೀಡಿದೆ ಎಂದು ಜರಿದಿತ್ತು. ಆದರೆ, ನಿಯಮಗಳಸಾರ ಸರ್ಕಾರ ಹುದ್ದೆಯಲ್ಲಿದ್ದವರು ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುವಂತಿಲ್ಲ. ಹೀಗಾಗಿ ರೈಲ್ವೆ ಸ್ಪಷ್ಟನೆ ಬಯಸಿತ್ತು.
ಸೆಪ್ಟೆಂಬರ್ 7ರಂದು ವಿನೇಶ್ ಮತ್ತು ಭಜರಂಗ್ ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. 90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8ರಂದು ಮತ ಎಣಿಕೆ ನಡೆಯಲಿದೆ.
ಇದನ್ನೂ ಓದಿ: ರಾಜೀನಾಮೆ ಅಂಗೀಕರಿಸಲು ಮುಂದಾದ ರೈಲ್ವೆ: ಚುನಾವಣಾ ಕಣಕ್ಕಿಳಿಯಲು ವಿನೇಶ್ ಫೋಗಟ್ಗಿಲ್ಲ ಅಡ್ಡಿ - Vinesh Phogat