ನವದೆಹಲಿ: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹಿರಿಯ ನಾಗರಿಕರಿಗೆ ಮತ್ತೊಂದು ಭರ್ಜರಿ ಉಡುಗೊರೆ ನೀಡಲು ಮುಂದಾಗಿದೆ. ಹಿರಿಯ ನಾಗರಿಕರ ರೈಲು ಪ್ರಯಾಣ ದರದಲ್ಲಿ ಗರಿಷ್ಠ ರಿಯಾಯಿತಿ ನೀಡಲು ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿದು ಬಂದಿದೆ. ಇದು ನಿಯಮ ಜಾರಿಯಾದಲ್ಲಿ ಹಿರಿಯ ನಾಗರಿಕರ ರೈಲು ಪ್ರಯಾಣ ಇನ್ನಷ್ಟು ಅಗ್ಗವಾಗಲಿದೆ. ಈ ಬಗ್ಗೆ ರೈಲ್ವೆ ಸಚಿವಾಲಯ ಅಧಿಕೃತ ಪ್ರಕಟಣೆ ಹೊರಡಿಸುವುದಷ್ಟೆ ಬಾಕಿ ಇದೆ.
ಕೇಂದ್ರ ಸರ್ಕಾರ ಹಿರಿಯ ನಾಗರಿಕರಿಗೆ ಸೌಲಭ್ಯಗಳನ್ನು ನಿರಂತರವಾಗಿ ಹೆಚ್ಚಿಸುತ್ತಾ ಬರುತ್ತಿದೆ. ವಿಶೇಷವಾಗಿ ಭಾರತೀಯ ರೈಲ್ವೆಯಲ್ಲಿ ಹಿರಿಯ ನಾಗರಿಕರಿಗೆ ಕೋಟಾ ನಿಗದಿ ಮಾಡಲಾಗಿದೆ. ಬರ್ತ್‌ಗಳ ಲಭ್ಯತೆ ಜೊತೆಗೆ ಈಗ ಪ್ರಯಾಣ ದರದಲ್ಲೂ ರಿಯಾಯಿತಿ ನೀಡಲು ಮುಂದಾಗಿದ್ದು, ಹೆಚ್ಚಿನ ಅನುಕೂಲವಾಗಲಿದೆ.
ಕೊರೊನಾ ನಂತರ ರಿಯಾಯಿತಿ ಕಡಿತ: ಹಿರಿಯ ನಾಗರಿಕರಿಗೆ ರೈಲು ಪ್ರಯಾಣದಲ್ಲಿ ರಿಯಾಯಿತಿ ನೀಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಎರಡು ಬಾರಿ ದರ ಕಡಿತ ಮತ್ತು ಸೌಲಭ್ಯ ವಿಸ್ತರಿಸಿತ್ತು. ಆದರೆ, ಕೊರೊನಾ ಬಳಿಕ ಈ ಸೌಲಭ್ಯವನ್ನು ರದ್ದು ಮಾಡಿತ್ತು. ಇದೀಗ ಮತ್ತೆ ಪ್ರಯಾಣ ದರದಲ್ಲಿ ಸಡಿಲಿಕೆ ಮಾಡಲು ಕೇಂದ್ರದ ಮೋದಿ ಸರ್ಕಾರ ನಿರ್ಧರಿಸಿದೆ.
ಎಸಿ ಕೋಚ್ನಲ್ಲಿ ಮೀಸಲಿಲ್ಲ: ರೈಲ್ವೆ ಸಚಿವಲಾಯ ಹಿರಿಯ ನಾಗರಿಕರಿಗೆ ನಾಲ್ಕು ವರ್ಷಗಳ ನಂತರ ವಿನಾಯಿತಿಯನ್ನು ಮರು ನೀಡುತ್ತಿದೆ. ಇದರಿಂದಾಗಿ ಹಿರಿಯ ನಾಗರಿಕರು ಕಡಿಮೆ ವೆಚ್ಚದಲ್ಲಿ ದೂರ ಪ್ರಯಾಣ ಮಾಡಲು ಸಾಧ್ಯವಾಗುತ್ತದೆ. ಎಲ್ಲ ರೈಲುಗಳ ಸ್ಲೀಪರ್ ಕ್ಲಾಸ್‌ಗಳಲ್ಲಿ ಮಾತ್ರ ಈ ಸೌಲಭ್ಯ ಸಿಗಲಿದೆ. ಎಸಿ ಕೋಚ್ನಲ್ಲಿ ಈ ಮೀಸಲಾತಿ ಅನ್ವಯಿಸುವುದಿಲ್ಲ. ರೈಲ್ವೆ ಇಲಾಖೆಗೆ ಹೆಚ್ಚುವರಿ ಹೊರೆಯಾಗುವುದನ್ನು ತಪ್ಪಿಸುವುದು ಇದರ ಹಿಂದಿನ ಕಾರಣವಾಗಿದೆ.
ಈ ಕುರಿತು ರೈಲ್ವೆ ಅಧಿಕಾರಿ ಮನೋಜ್‌ಕುಮಾರ್ ಮಾತನಾಡಿ, ‘ಈವರೆಗೂ ಅಂತಹ ಯಾವುದೇ ನಿರ್ಧಾರ ಹೊರಬಿದ್ದಿಲ್ಲ. ರೈಲ್ವೆ ಮಂಡಳಿಯು ನಿರ್ಧರಿಸುವ ತೀರ್ಮಾನಗಳನ್ನು ಶೀಘ್ರವೇ ಜಾರಿಗೆ ತರಲಾಗುವುದು. ರೈಲ್ವೆ ವಿಭಾಗಗಳಲ್ಲಿ ಅಧಿಕೃತ ಮಾಹಿತಿಗಾಗಿ ಕಾಯಲಾಗುತ್ತಿದೆ. ರೈಲ್ವೆ ಸಚಿವಾಲಯದಿಂದ ಅಧಿಕೃತ ಪ್ರಕಟಣೆ ಬಂದ ತಕ್ಷಣ ಅದನ್ನು ಕಾರ್ಯಗತಗೊಳಿಸಲಾಗುವುದು ಎಂದು ಅವರು ಹೇಳಿದರು.