ಕೋಲ್ಕತ್ತಾ: ತರಬೇತಿನಿರತ ವೈದ್ಯೆ ಮೇಲಿನ ಅತ್ಯಾಚಾರ ವಿರೋಧಿಸಿ ಕೋಲ್ಕತ್ತಾ, ಬಂಗಾಳ ಹಾಗೂ ದೇಶದ ವಿವಿಧ ಕಡೆಯಲ್ಲಿ ಸಾವಿರಾರು ಮಹಿಳೆಯರು ನಿನ್ನೆ ಮಧ್ಯರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ದೆಹಲಿಯ ಏಮ್ಸ್ ಮತ್ತು ಚಿತ್ತರಂಜನ್ ಪಾರ್ಕ್ ಸೇರಿದಂತೆ ಪ್ರಮುಖ ನಗರಗಳಲ್ಲಿ ರಾತ್ರಿ 11.55 ರ ಸುಮಾರಿಗೆ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಪ್ರತಿಭಟನೆ ನಡೆಸಿದರು.
ವಿವಿಧ ಘೋಷಣೆಗಳುಳ್ಳ ಭಿತ್ತಿಪತ್ರಗಳನ್ನು ಪ್ರದರ್ಶಿಸುವ ಮೂಲಕ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಕಾಲೇಜ್ ಸ್ಟ್ರೀಟ್, ಅಕಾಡೆಮಿ ಆಫ್ ಫೈನ್ ಆರ್ಟ್ಸ್ ಮತ್ತು ಕೋಲ್ಕತ್ತಾದ ಜಾದವ್‌ಪುರ 8 ಬಿ ಬಸ್ ನಿಲ್ದಾಣದಲ್ಲಿ ಮಾತ್ರ ಪ್ರತಿಭಟನೆ ನಡೆಯಬೇಕಿತ್ತು. ಆದರೆ ಅಧಿಕ ಸಂಖ್ಯೆಯಲ್ಲಿದ್ದ ಪ್ರತಿಭಟನಕಾರರು ಗರಿಯಾ ಕ್ರಾಸಿಂಗ್, ಪಾರ್ಕ್ ಸರ್ಕಸ್ ಮೈದಾನ, ನಕ್ತಾಲಾ ನಬಪಲ್ಲಿ, ಬೆಹಲಾ ಸಖೇರ್ ಬಜಾರ್, ಶ್ಯಾಂಬಜಾರ್ ಫೈವ್ ಪಾಯಿಂಟ್ ಕ್ರಾಸಿಂಗ್ ಮುಂತಾದೆಡೆ ಜಮಾಯಿಸಿ ಘೋಷಣೆ ಕೂಗಿದರು.
ಆಸ್ಪತ್ರೆಗೆ ನುಗ್ಗಿ ದಾಂಧಲೆ: ಇದರ ನಡುವೆ ಕೆಲವು ಪ್ರದೇಶಗಳಲ್ಲಿ ಪ್ರತಿಭಟನೆಯಲ್ಲದೇ ಕೆಲ ದುಷ್ಕರ್ಮಿಗಳು ಮಧ್ಯರಾತ್ರಿ 12.40ರ ಸುಮಾರಿಗೆ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ನುಗ್ಗಿ ವೈದ್ಯಕೀಯ ಸೌಲಭ್ಯದ ವಿಭಾಗ, ಪರಿಕರಗಳನ್ನು ಧ್ವಂಸಗೊಳಿಸಿದ್ದಾರೆ. ಪ್ರತಿಭಟನೆಯ ವೇಳೆ ಹಲವಾರು ಪೊಲೀಸ್ ಅಧಿಕಾರಿಗಳ ಇಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ.
ನಸುಕಿನಜಾವ 2 ಗಂಟೆಗೆ ಘಟನಾ ಸ್ಥಳಕ್ಕೆ ಆಗಮಿಸಿದ ಕೋಲ್ಕತ್ತಾ ಪೊಲೀಸ್ ಕಮಿಷನರ್ ವಿನೀತ್ ಗೋಯಲ್ ಅವರು ಈ ಹಿಂಸಾಚಾರಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಈ ಘಟನೆಗೆ ಸಂಬಂಧಿಸಿದ ವದಂತಿಗಳು ಮತ್ತು ಪೋಸ್ಟ್‌ಗಳು ಕಾರಣವೆಂದರು. ಜತೆಗೆ ಸುಮಾರು 40 ಜನರ ಗುಂಪು ಪ್ರತಿಭಟನಾಕಾರರಂತೆ ವೇಷ ಧರಿಸಿ ಆಸ್ಪತ್ರೆಯ ಆವರಣಕ್ಕೆ ನುಗ್ಗಿ ಸರ್ಕಾರಿ ಆಸ್ತಿಪಾಸ್ತಿ ಹಾನಿಗೊಳಿಸಿದ್ದಾರೆ. ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇದು ಗುಂಪನ್ನು ಚದುರಿಸಲು ಅಶ್ರುವಾಯು ನಡೆಸಲು ಪ್ರೇರೇಪಿಸಿತು. ಘಟನೆಯಲ್ಲಿ ಪೊಲೀಸ್ ವಾಹನ ಮತ್ತು ಸ್ಥಳದಲ್ಲಿದ್ದ ಕೆಲವು ದ್ವಿಚಕ್ರ ವಾಹನಗಳಿಗೂ ಹಾನಿಯಾಗಿದೆ.
ಹಿಂಸಾಚಾರದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇನ್ನು, ನಟ ರಿತುಪರ್ಣ ಸೇನ್‌ಗುಪ್ತಾ ಪ್ರತಿಭಟನಕಾರರಿಗೆ ಬೆಂಬಲ ನೀಡಿದ್ದಾರೆ. ಮಹಿಳೆಯರು ಮತ್ತು ವೈದ್ಯರ ಮೇಲಿನ ದೌರ್ಜನ್ಯವನ್ನು ನಿರ್ದಿಷ್ಟವಾಗಿ ಖಂಡಿಸಿದ ಅವರು, ನಾವು ಇನ್ನೂ ಈ ಸಮಸ್ಯೆಗಳನ್ನು ಎದುರಿಸುತ್ತಿರುವುದು ಆಘಾತಕಾರಿ ವಿಚಾರ. ಇಂತಹ ಹಿಂಸಾಚಾರ ಮತ್ತೆ ಸಂಭವಿಸದಂತೆ ತಡೆಯುವ ಭರವಸೆ ನಮಗೆ ಬೇಕು" ಎಂದು ಆಕ್ರೋಶ ಹೊರಹಾಕಿದ್ದಾರೆ.