ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ನಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ದುರಂತಕ್ಕೆ ಡಿಕ್ಕಿ ಹೊಡೆದ ಗೂಡ್ಸ್ ರೈಲಿನ ವೇಗವೇ ಕಾರಣ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಅಪಘಾತದ ವೇಳೆ ಗೂಡ್ಸ್ ರೈಲಿನ ವೇಗ ನಿಗದಿತ ವೇಗಕ್ಕಿಂತ ಹೆಚ್ಚಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಡಿಕ್ಕಿ ಹೊಡೆಯುವ ಮುಂಚೆ ಗೂಡ್ಸ್ ರೈಲಿನ ಪೈಲಟ್ ವೇಗದ ಮಿತಿಯಲ್ಲಿ ಚಲಾಯಿಸಿದ್ದಾನೆ. ಇದರ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ. ಸಹಾಯಕ ಚಾಲಕ ಗಾಯಗೊಂಡಿದ್ದು, ಚೇತರಿಸಿಕೊಂಡ ಬಳಿಕವಷ್ಟೇ ಇದಕ್ಕೆ ಉತ್ತರ ಸಿಗಲಿದೆ ಎಂದು ಈಶಾನ್ಯ ಗಡಿ ರೈಲ್ವೆ (ಎನ್‌ಎಫ್‌ಆರ್) ಅಧಿಕಾರಿಯೊಬ್ಬರು ಗುರುವಾರ ಹೇಳಿದ್ದಾರೆ.
ಗೂಡ್ಸ್ ರೈಲು ಚಾಲಕ ಮತ್ತು ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಗಾರ್ಡ್ ಸೇರಿದಂತೆ 10 ಮಂದಿ ಬಲಿಯಾದ ರೈಲು ದುರಂತವನ್ನು ರೈಲ್ವೆ ಸುರಕ್ಷತಾ ಆಯುಕ್ತರು (ಸಿಆರ್‌ಎಸ್) ತನಿಖೆ ನಡೆಸುತ್ತಿದ್ದಾರೆ. ನಿಗದಿತ ವೇಗದ ಮಿತಿಗಿಂತ ಗೂಡ್ಸ್ ರೈಲು ವೇಗವಾಗಿ ಚಲಿಸಲು ಕಾರಣವೇನು ಎಂಬುದರ ಕುರಿತೂ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ಚಲಾವಣೆ ವೇಳೆ ಗೂಡ್ಸ್ ರೈಲು ಚಾಲಕನಿಗೆ ಏನಾದರೂ ಆಗಿತ್ತೇ ಅಥವಾ ಬೇರೆ ಕಾರಣಗಳು ಇವೆಯಾ ಎಂಬುದು ಇನ್ನೂ ತಿಳಿದುಬಂದಿಲ್ಲ. ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ತೊಡಕುಂಟಾದಾಗ ಈ ಬಗ್ಗೆ ಚಾಲಕನಿಗೆ ಮಾಹಿತಿ ನೀಡಲಾಗಿತ್ತು. ಆದಾಗ್ಯೂ ಆತ ವೇಗವಾಗಿ ರೈಲು ಚಲಾಯಿಸಿದ್ದು, ಅಪಘಾತಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಸಾಮಾನ್ಯವಾಗಿ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆಯಾದಾಗ, ಯಾವುದೇ ರೈಲು ಚಾಲಕರಿಗೆ ಪ್ರೋಟೋಕಾಲ್ ನಿಯಮಗಳಿರುವ ಟಿ/ಎ 912 ಫಾರ್ಮ್ ಅನ್ನು ಕಳುಹಿಸಲಾಗುತ್ತದೆ. ಅದರಂತೆ ಅವರು ಸಿಗ್ನಲಿಂಗ್ ವ್ಯವಸ್ಥೆಯನ್ನು ಪಾಲಿಸಬೇಕು. ಯಾವ ಪ್ರದೇಶದಲ್ಲಿ ಮತ್ತು ನಿಲ್ದಾಣಗಳು ಸಮೀಪಿಸುತ್ತಿರುವಾಗ ಎಷ್ಟು ವೇಗದಲ್ಲಿ ರೈಲು ಚಲಾಯಿಸಬೇಕು ಎಂಬುದ ಅದರಲ್ಲಿ ಅಡಕವಾಗಿರುತ್ತದೆ. ಇದೆಲ್ಲವನ್ನೂ ಗೂಡ್ಸ್ ರೈಲು ಚಾಲಕ ಮೀರಿದ್ದಾನೆ ಎಂಬುದು ಅಧಿಕಾರಿಗಳ ಆರೋಪ.
ಕತಿಹಾರ್ ಡಿವಿಜನಲ್ ರೈಲ್ವೆ ಮ್ಯಾನೇಜರ್ (ಡಿಆರ್‌ಎಂ) ಪ್ರಕಾರ, ಜೂನ್ 19 ರಂದು ಬೆಳಿಗ್ಗೆ 5.15 ರ ಸುಮಾರಿಗೆ ಅಪಘಾತ ಸಂಭವಿಸಿದ ರೈಲು ವಿಭಾಗದಲ್ಲಿ ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಮತ್ತು ರೈಲು ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡುಬಂದಿತ್ತು. ಬಳಿಕ ರೈಲುಗಳಿಗೆ ವೇಗದ ನಿರ್ಬಂಧ ವಿಧಿಸಲಾಗಿತ್ತು. ಆದಾಗ್ಯೂ ಬೆಳಗ್ಗೆ 9 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದಿದ್ದಾರೆ.
ಸಹಾಯಕ ಚಾಲಕನೇ ಆಧಾರ: ಇನ್ನೂ, ರೈಲುಗಳ ಅಪಘಾತದಲ್ಲಿ ಗೂಡ್ಸ್ ರೈಲಿನ ಚಾಲಕ ಸಾವನ್ನಪ್ಪಿದ್ದಾನೆ. ಸಹಾಯಕ ಚಾಲಕ ತೀಗ್ರ ಗಾಯಗೊಂಡು ಬದುಕುಳಿದಿದ್ದಾನೆ. ಸದ್ಯ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲದ ಕಾರಣ, ವೇಗ ಹೆಚ್ಚಳದ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಈತ ಚೇತರಿಸಿಕೊಂಡ ಬಳಿಕ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಇದಕ್ಕೆ ಇನ್ನಷ್ಟು ದಿನಗಳು ತೆಗೆದುಕೊಳ್ಳಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.
ಸಿಗ್ನಲಿಂಗ್ ಸಮಸ್ಯೆಯ ನಿಯಮವೇನು?: ಸಿಗ್ನಲಿಂಗ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿ ಸಮಸ್ಯೆ ಕಂಡುಬಂದಾಗ ಯಾವುದೇ ರೈಲುಗಳು ಪ್ರತಿ ರೆಡ್ ಸಿಗ್ನಲ್‌ನಲ್ಲಿ ಒಂದು ನಿಮಿಷ ನಿಲ್ಲಬೇಕು. ನಂತರ ರೈಲುಗಳು ಗಂಟೆಗೆ ಗರಿಷ್ಠ 10 ರಿಂದ 15 ಕಿಮೀ ವೇಗದಲ್ಲಿ ಮಾತ್ರ ಓಡಬೇಕು ಎಂಬ ನಿಯಮವಿದೆ.
ಇದನ್ನೂ ಓದಿ: ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು ಅಪಘಾತ: ಹಲವಾರು ರೈಲುಗಳ ಸಂಚಾರ ರದ್ದು, ಮಾರ್ಗ ಬದಲಾವಣೆ - Several trains cancelled