ನವದೆಹಲಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಫೆಬ್ರವರಿ 24 ರಂದು ಉತ್ತರ ಪ್ರದೇಶದ ಮೊರಾದಾಬಾದ್‌ನಿಂದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅನಾರೋಗ್ಯದ ಕಾರಣ ಫೆಬ್ರವರಿ 16 ರಂದು ನಡೆಯಲಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸಲು ಸಾಧ್ಯವಾಗದ ಹಿನ್ನೆಲೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಈ ಹಿಂದೆ ಬೇಸರ ವ್ಯಕ್ತಪಡಿಸಿದ್ದರು.
ಪ್ರಿಯಾಂಕಾ ಗಾಂಧಿ ಹೇಳಿದ್ದೇನು?: "ನಾನು ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸಬೇಕಿತ್ತು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಾನು ಗುಣಮುಖವಾದ ನಂತರ ಯುಪಿಯಲ್ಲಿ ನಡೆಯುತ್ತಿರುವ ನ್ಯಾಯ್ ಯಾತ್ರೆಯಲ್ಲಿ ಭಾಗವಹಿಸಲಿದ್ದೇನೆ. ಜೊತೆಗೆ ಎಲ್ಲ ಕಾರ್ಯಕರ್ತರಿಗೆ, ಯುಪಿಯಲ್ಲಿ ಕೆಲಸ ಮಾಡಿದ ನನ್ನ ಸಹೋದ್ಯೋಗಿಗಳಿಗೆ ಅಭಿನಂದಿಸುತ್ತೇನೆ. ನನ್ನ ಪ್ರೀತಿಯ ಸಹೋದರ ರಾಹುಲ್ ಗಾಂಧಿ ಯಶಸ್ವಿಯಾಗಿ ಚಂದೌಲಿಯನ್ನು ತಲುಪಿದ್ದಾರೆ" ಎಂದು ಪ್ರಿಯಾಂಕಾ ಗಾಂಧಿ ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಪೋಸ್ಟ್ ಬರೆದುಕೊಂಡಿದ್ದಾರೆ.
ನಿರ್ಜಲೀಕರಣ, ಹೊಟ್ಟೆಯ ಸೋಂಕಿನ ಬಳಲಿದ ಪ್ರಿಯಾಂಕಾ: ನಿರ್ಜಲೀಕರಣ ಮತ್ತು ಹೊಟ್ಟೆಯ ಸೋಂಕಿನ ಬಳುಲುತ್ತಿದ್ದ ಪ್ರಿಯಾಂಕಾ ಗಾಂಧಿ ನವದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಪಡೆದ ನಂತರ ಅವರು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.
ಸೋಮವಾರ ಮುಂಜಾನೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಉತ್ತರ ಪ್ರದೇಶದ ಅಮೇಥಿಯಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಪುನರಾರಂಭಿಸಿದರು. ಲೋಕಸಭೆ ಚುನಾವಣೆಗೆ ಮುನ್ನ 15 ರಾಜ್ಯಗಳನ್ನು ಒಳಗೊಂಡ ಮಣಿಪುರ - ಮುಂಬೈ ಯಾತ್ರೆಯಲ್ಲಿದ್ದಾರೆ. ಈ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ನಿರೀಕ್ಷೆಯಿದೆ.
15 ರಾಜ್ಯಗಳ ಮೂಲಕ 6,700 ಕಿ.ಮೀ ಕ್ರಮಿಸುವ ಗುರಿ: ಉತ್ತರ ಪ್ರದೇಶದ ಅಮೇಥಿ ಕಾಂಗ್ರೆಸ್ ಭದ್ರಕೋಟೆಯಾಗಿತ್ತು. ಅಲ್ಲಿ ರಾಹುಲ್ ಗಾಂಧಿ ಅವರು, 2019ರ ಚುನಾವಣೆಯಲ್ಲಿ ಸುಮಾರು 55,000 ಮತಗಳ ಅಂತರದಿಂದ ಸ್ಮೃತಿ ಇರಾನಿ ವಿರುದ್ಧ ಸೋಲು ಅನುಭವಿಸಿದ್ದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜನಮನ ಸೆಳೆಯಲು ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ 'ಭಾರತ್ ಜೋಡೋ ಯಾತ್ರೆ' ಪೂರ್ಣಗೊಂಡಿದೆ. ಇದೀಗ 'ಭಾರತ್ ಜೋಡೋ ನ್ಯಾಯ್ ಯಾತ್ರೆ'ಯಿಂದ 15 ರಾಜ್ಯಗಳ ಮೂಲಕ 6,700 ಕಿ.ಮೀ ಕ್ರಮಿಸುವ ಗುರಿಯನ್ನು ಹೊಂದಲಾಗಿದೆ.