ನವದೆಹಲಿ: ಚುನಾವಣಾ ಬಾಂಡ್‌ಗಳ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ ಕೇಂದ್ರ ಸರ್ಕಾರವು ನ್ಯಾಯಾಂಗದ ಮೇಲೆ ಒತ್ತಡ ಹೇರುತ್ತಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ. ಇದೇ ವೇಳೆ, ನರೇಂದ್ರ ಮೋದಿ ಸರ್ಕಾರ ಸ್ವತಂತ್ರ ಮತ್ತು ಬಲಿಷ್ಠ ನ್ಯಾಯಾಂಗ ಒಪ್ಪುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ನ್ಯಾಯಾಂಗದ ಮೇಲೆ 'ಪಟ್ಟಭದ್ರ ಹಿತಾಸಕ್ತಿ ಗುಂಪು' ಒತ್ತಡ ಹೇರಲು ಮತ್ತು ನ್ಯಾಯಾಲಯಗಳ ಮಾನಹಾನಿ ಮಾಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿ ಹಿರಿಯ ವಕೀಲ ಹರೀಶ್ ಸಾಳ್ವೆ ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿದಂತೆ 600ಕ್ಕೂ ಹೆಚ್ಚು ವಕೀಲರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ. ಇದಕ್ಕೆ ಕಾಂಗ್ರೆಸ್ ಪಕ್ಷವನ್ನು ಪ್ರಧಾನಿ ಮೋದಿ ಗುರಿಯಾಗಿಸಿಕೊಂಡು, ಇತರರ ಬಗ್ಗೆ ಬೊಬ್ಬೆ ಹೊಡೆಯುವುದು ಮತ್ತು ಬೆದರಿಸುವುದೇ ಹಳೆಯ ಕಾಂಗ್ರೆಸ್ ಸಂಸ್ಕೃತಿ ಎಂದು ಪೋಸ್ಟ್ ಮಾಡಿದ್ದರು. ಮತ್ತೊಂದೆಡೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಒಂದರ ನಂತರ ಮತ್ತೊಂದು ಎಂಬಂತೆ ಸಂಸ್ಥೆಗಳು ನಿಮ್ಮಿಂದ ಹಾನಿಗೆ ಒಳಗಾಗಿವೆ ಮೋದಿ ಅವರೇ, ನಿಮ್ಮ ಸ್ವಂತ ಪಾಪಗಳಿಗಾಗಿ ಕಾಂಗ್ರೆಸ್ ಪಕ್ಷದ ಮೇಲೆ ಆರೋಪ ಹೊರಿಸುವುದನ್ನು ನಿಲ್ಲಿಸಿ ಎಂದು ತಿರುಗೇಟು ನೀಡಿದ್ದರು.
ಇದೀಗ ಪ್ರಿಯಾಂಕಾ ಗಾಂಧಿ ಕೂಡ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ''ಚುನಾವಣಾ ಬಾಂಡ್‌ಗಳ (ಇದನ್ನು ಸುಲಿಗೆ ದಂಧೆ ಎಂದು ಸಾರ್ವಜನಿಕರು ಕರೆಯುತ್ತಿದ್ದಾರೆ) ಕುರಿತ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಹಗರಣಗಳ ಪದರಗಳು ಬಯಲಾಗುತ್ತಿರುವುದನ್ನು ಗಮನಿಸಿದ ನಂತರ ಪತ್ರಗಳನ್ನು ಬರೆಯುವ ಮೂಲಕ ನ್ಯಾಯಾಂಗ ವ್ಯವಸ್ಥೆ ಮೇಲೆ ಒತ್ತಡ ಹೇರುತ್ತಿರುವ ರೀತಿ ಮತ್ತು ಸ್ವತಃ ಪ್ರಧಾನ ಮಂತ್ರಿಯೇ ಅಖಾಡಕ್ಕಿಳಿದು ನ್ಯಾಯಾಂಗದ ಮೇಲೆ ನಕಾರಾತ್ಮಕ ಟೀಕೆಗಳನ್ನು ಮಾಡುತ್ತಿರುವುದು ರೀತಿಯು ಏನೋ ಮೀನಮೇಷವಿದೆ ಎಂಬುದನ್ನು ತೋರುತ್ತಿದೆ. ಅಲ್ಲದೇ, ಯಾವುದೋ ಒಂದು ವಿಷಯವಾಗಿ ಸ್ವತಃ ಅವರೇ ಭಯಪಡುತ್ತಿರುವಂತೆ ಕಾಣುತ್ತಿದೆ'' ಎಂದು ಪ್ರಿಯಾಂಕಾ ಗಾಂಧಿ ಕುಟುಕಿದ್ದಾರೆ.
ಮುಂದುವರೆದು, ''ರಾಜಕೀಯ ಹಸ್ತಕ್ಷೇಪದಿಂದ ಸಮಸ್ಯೆಗೆ ಒಳಗಾದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಪತ್ರಿಕಾಗೋಷ್ಠಿಗಳನ್ನು ನಡೆಸಿದ್ದು, ರಾಜ್ಯಸಭೆಗೆ ನ್ಯಾಯಮೂರ್ತಿಯನ್ನು ಕಳುಹಿಸುವುದು, ಚುನಾವಣೆಯಲ್ಲಿ (ಮಾಜಿ) ನ್ಯಾಯಾಧೀಶರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವುದು, ನ್ಯಾಯಮೂರ್ತಿಗಳ ನೇಮಕಾತಿಯನ್ನು ನಿಯಂತ್ರಿಸಲು ಪ್ರಯತ್ನಿಸುವುದು ಮತ್ತು ತೀರ್ಪುಗಳು ವಿರುದ್ಧವಾದಾಗ ನ್ಯಾಯಾಂಗದ ಬಗ್ಗೆ ಪ್ರತಿಕ್ರಿಯಿಸುವುದು. ಮೋದಿಜಿಯವರ ಸರ್ಕಾರ ಸ್ವತಂತ್ರ ಮತ್ತು ಬಲಿಷ್ಠ ನ್ಯಾಯಾಂಗವನ್ನು ಒಪ್ಪುವುದಿಲ್ಲವೇ?'' ಎಂದು ಕಾಂಗ್ರೆಸ್ ನಾಯಕಿ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: 'ನ್ಯಾಯಾಂಗದ ಮೇಲೆ ಪಟ್ಟಭದ್ರ ಹಿತಾಸಕ್ತಿ ಗುಂಪುಗಳ ಒತ್ತಡ': ಸಿಜೆಐಗೆ 600 ವಕೀಲರಿಂದ ಪತ್ರ