ಉದಯಪುರ (ರಾಜಸ್ಥಾನ) : ರಾಜಸ್ಥಾನದ ಉದಯಪುರ ಜಿಲ್ಲೆಯ ಗೊಗುಂಡಾ ಪ್ರದೇಶದಲ್ಲಿ ಚಿರತೆ ದಾಳಿ ಇನ್ನೂ ನಿಂತಿಲ್ಲ. ಭಾನುವಾರ ತಡರಾತ್ರಿ ಚಿರತೆ ದೇವಾಲಯದ ಅರ್ಚಕರೊಬ್ಬರ ಮೇಲೆ ದಾಳಿ ಮಾಡಿ ಕೊಂದಿತ್ತು. ಈ ಪ್ರದೇಶದಲ್ಲಿ ಚಿರತೆ ದಾಳಿಯಿಂದ ಇದುವರೆಗೆ 6 ಜನರು ಸಾವನ್ನಪ್ಪಿದ್ದಾರೆ.
ಚಿರತೆ ನಿರಂತರ ದಾಳಿಯಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಅರ್ಚಕ ಕಳೆದ 50 - 60 ವರ್ಷಗಳಿಂದ ದೇವಸ್ಥಾನದಲ್ಲಿ ವಾಸವಾಗಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
'ದೇವಾಲಯದಲ್ಲಿ ಮಲಗಿದ್ದ ಅರ್ಚಕನ ಮೇಲೆ ಚಿರತೆ ದಾಳಿ ಮಾಡಿ ಕೊಂದಿದೆ. ಮೃತ ವ್ಯಕ್ತಿಯ ಶವ ಕಾಡಿನಲ್ಲಿ ಪತ್ತೆಯಾಗಿದ್ದು, ಗೋಗುಂದ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಬಹುಶಃ ಈ ದಾಳಿಯನ್ನ ಒಂದೇ ಪ್ರಾಣಿ ನಡೆಸುತ್ತಿದೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ರಾತ್ರಿ ವೇಳೆ ಜನ ಮನೆಯಿಂದ ಹೊರಗೆ ಬರುತ್ತಿಲ್ಲ' ಎಂದು ಗೋಗುಂದ ಪೊಲೀಸ್ ಠಾಣಾಧಿಕಾರಿ ಶೈತಾನ್ ಸಿಂಗ್ ತಿಳಿಸಿದ್ದಾರೆ.
ಮಕ್ಕಳ ಮೇಲೆ ಚಿರತೆ ದಾಳಿ ಭಯ, ಸ್ಥಳಕ್ಕೆ ತೆರಳಿದ ಸಂಸದರು : ಗೋಗುಂದ ಭಾಗದಲ್ಲಿ ಮಕ್ಕಳ ಮೇಲೆ ಚಿರತೆ ದಾಳಿ ನಡೆಸಬಹುದು ಎಂಬ ಭಯದಲ್ಲಿರುವುದರಿಂದ ಗ್ರಾಮಸ್ಥರಲ್ಲಿ ಭದ್ರತೆಯ ಭಾವ ಮೂಡಿಸಲು ಸಂಸದ ಡಾ. ಮನ್ನಾಲಾಲ್ ರಾವತ್ ಅವರು ಮೇಲ್ವಿಚಾರಣೆ ವಹಿಸಿಕೊಂಡಿದ್ದಾರೆ. ಈಗಾಗಲೇ ಚಿರತೆ ದಾಳಿ ನಡೆಸಿರುವ ಪ್ರದೇಶಗಳಿಗೆ ಸಂಸದರು ತೆರಳಿ ಅಲ್ಲಿನ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸಂಸದ ಡಾ. ರಾವತ್ ಅವರು ಗೋಗುಂದದಲ್ಲಿ ಅರಣ್ಯ, ಪೊಲೀಸ್ ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ಬೃಹತ್ ಸಭೆ ನಡೆಸಿದ್ದಾರೆ. ಇದರಲ್ಲಿ ಚಿರತೆ ದಾಳಿ ಕಡಿಮೆ ಮಾಡಲು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕ್ರಿಯಾ ಯೋಜನೆಗಳ ಕುರಿತು ಚರ್ಚಿಸಲಾಗಿದೆ. ಚಿರತೆ ದಾಳಿಯಿಂದ ರಕ್ಷಿಸಿಕೊಳ್ಳಲು ಗ್ರಾಮಸ್ಥರಿಗೆ ಅರಿವು ಮೂಡಿಸಲು ಮತ್ತು ಪಂಜರಗಳ ಸಂಖ್ಯೆ ಹೆಚ್ಚಿಸಲು ಸೂಚನೆಗಳನ್ನು ನೀಡಲಾಗಿದೆ. ಚಿರತೆ ದಾಳಿಗೆ ಬಲಿಯಾದವರ ಕುಟುಂಬಗಳಿಗೆ ತಕ್ಷಣ ಪರಿಹಾರ ಮತ್ತು ಪರಿಹಾರ ಧನ ನೀಡುವಂತೆ ಸಂಸದರು ಸೂಚಿಸಿದ್ದಾರೆ.
ಇದನ್ನೂ ಓದಿ : ಹೊನ್ನಾವರದಲ್ಲಿ ಕರಿ ಚಿರತೆ ಕೊನೆಗೂ ಬೋನಿಗೆ.. ಪ್ಯಾಂಥರ್ ಘರ್ಜನೆಗೆ ಬೆದರಿದ ಗ್ರಾಮಸ್ಥರು!