ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಒಟ್ಟು 9 ರಾಜ್ಯಗಳಿಗೆ ನೂತನ ರಾಜ್ಯಪಾಲರು ಮತ್ತು ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಲೆಫ್ಟಿನೆಂಟ್ ಗವರ್ನರ್ ಅವರನ್ನು ನೇಮಿಸಿ ಶನಿವಾರ ರಾತ್ರಿ ಆದೇಶ ಹೊರಡಿಸಿದ್ದಾರೆ. ಈ ಪೈಕಿ ಆರು ರಾಜ್ಯಗಳಿಗೆ ನೂತನ ರಾಜ್ಯಪಾಲರು ಮತ್ತು ಮೂರು ರಾಜ್ಯಗಳಿಗೆ ಬೇರೆ ರಾಜ್ಯಗಳ ಹಾಲಿ ರಾಜ್ಯಪಾಲರನ್ನು ನೇಮಿಸಲಾಗಿದೆ.
ನೂತನ ರಾಜ್ಯಪಾಲರಾಗಿ ನೇಮಕಗೊಂಡವರಲ್ಲಿ ಕರ್ನಾಟಕದ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಸಿ.ಹೆಚ್.ವಿಜಯಶಂಕರ್ ಕೂಡ ಸೇರಿದ್ದಾರೆ. ಇವರನ್ನು ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ.
ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಸ್ಪೀಕರ್ ಹರಿಭಾವು ಬಾಗಡೆ ರಾಜಸ್ಥಾನದ ಗವರ್ನರ್ ಆಗಿ ನೇಮಕವಾಗಿದ್ದಾರೆ. ತ್ರಿಪುರಾ ಮಾಜಿ ಡಿಸಿಎಂ ಜಿಷ್ಣು ದೇವ್ ವರ್ಮಾ ತೆಲಂಗಾಣದ ರಾಜ್ಯಪಾಲ ಹುದ್ದೆಯ ಅವಕಾಶ ಪಡೆದಿದ್ದಾರೆ.
ಸಿಕ್ಕಿಂ ರಾಜ್ಯಪಾಲರಾಗಿ ಮಾಜಿ ರಾಜ್ಯಸಭಾ ಸಂಸದ ಓಂ ಪ್ರಕಾಶ್ ಮಥುರಾ, ಜಾರ್ಖಂಡ್ ರಾಜ್ಯಪಾಲರಾಗಿ ಮಾಜಿ ಕೇಂದ್ರ ಸಚಿವ ಸಂತೋಷ್ ಕುಮಾರ್ ಗಂಗ್ವಾರ್ ಮತ್ತು ಛತ್ತೀಸ್ಗಡ ರಾಜ್ಯಪಾಲರಾಗಿ ಅಸ್ಸೋಂನ ಮಾಜಿ ಸಂಸದ ರಮೇನ್ ದೆಕಾ ಅವರನ್ನು ರಾಷ್ಟ್ರಪತಿ ನೇಮಿಸಿದ್ದಾರೆ.
ಮೂವರು ರಾಜ್ಯಪಾಲರ ವರ್ಗಾವಣೆ: ಜಾರ್ಖಂಡ್ನ ಹಾಲಿ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಅವರನ್ನು ಮಹಾರಾಷ್ಟ್ರ ಗವರ್ನರ್ ಆಗಿ ಮತ್ತು ಅಸ್ಸೋಂ ಹಾಲಿ ರಾಜ್ಯಪಾಲ ಗುಲಾಬ್ ಚಂದ್ ಕಠಾರಿಯಾ ಅವರನ್ನು ಪಂಜಾಬ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಸಿಕ್ಕಿಂ ಹಾಲಿ ರಾಜ್ಯಪಾಲ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಅಸ್ಸೋಂ ಮತ್ತು ಹೆಚ್ಚುವರಿಯಾಗಿ ಮಣಿಪುರಕ್ಕೆ ನೇಮಿಸಲಾಗಿದೆ.
ಪುದುಚೇರಿಯ ಲೆಪ್ಟಿನೆಂಟ್ ಗವರ್ನರ್ ಆಗಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಕೈಲಾಸ್ನಾಥನ್ ನೇಮಕಗೊಂಡಿದ್ದಾರೆ.
ನೂತನ ರಾಜ್ಯಪಾಲರ ವಿವರ:
ರಾಜ್ಯ | ಹೆಸರು |
ಮೇಘಾಲಯ | ಸಿ.ಹೆಚ್.ವಿಜಯಶಂಕರ್ |
ತೆಲಂಗಾಣ | ಜಿಷ್ಣು ದೇವ್ ವರ್ಮಾ |
ರಾಜಸ್ಥಾನ | ಹರಿಭಾವು ಬಾಗಡೆ |
ಸಿಕ್ಕಿಂ | ಓಂ ಪ್ರಕಾಶ್ ಮಥುರಾ |
ಜಾರ್ಖಂಡ್ | ಸಂತೋಷ್ ಕುಮಾರ್ ಗಂಗ್ವಾರ್ |
ಛತ್ತೀಸ್‌ಗಢ | ರಮೆನ್ ದೇಕಾ |
ಮಹಾರಾಷ್ಟ್ರ | ಸಿ.ಪಿ.ರಾಧಾಕೃಷ್ಣನ್ |
ಪಂಜಾಬ್ | ಗುಲಾಬ್ ಚಂದ್ ಕಟಾರಿಯಾ |
ಅಸ್ಸೋಂ ಮತ್ತು ಮಣಿಪುರ | ಲಕ್ಷ್ಮಣ್ ಪ್ರಸಾದ್ ಆಚಾರ್ಯ |
ಪುದುಚೇರಿ | ಕೆ.ಕೈಲಾಸನಾಥನ್ |
ಇದನ್ನೂ ಓದಿ: ದೆಹಲಿ: IAS ಕೋಚಿಂಗ್ ಕೇಂದ್ರದ ನೆಲಮಾಳಿಗೆಗೆ ನುಗ್ಗಿದ ನೀರು; ಮೂವರು ವಿದ್ಯಾರ್ಥಿಗಳು ಸಾವು - Coaching Centre Flooded
ಮಾಜಿ ಸಿಎಂಗಳಿಂದ ಅಭಿನಂದನೆ: ಮೇಘಾಲಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಮಾಜಿ ಸಂಸದರು ಹಾಗೂ ಮಾಜಿ ಸಚಿವರಾದ ಸಿ.ಹೆಚ್.ವಿಜಯಶಂಕರ ಅವರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮತ್ತು ಸಂಸದ ಬಸವರಾಜ ಬೊಮ್ಮಾಯಿ ಅಭಿನಂದನೆ ತಿಳಿಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೇಘಾಲಯ ರಾಜ್ಯದ ನೂತನ ರಾಜ್ಯಪಾಲರಾಗಿ ನೇಮಕವಾಗಿರುವ ಮಾಜಿ ಸಂಸದರು ಹಾಗೂ ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಯಕರಾದ ಶ್ರೀ ಸಿ.ಹೆಚ್.ವಿಜಯಶಂಕರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) July 28, 2024
ಸಮಸ್ತ ಕನ್ನಡಿಗರ ಪರವಾಗಿ ಶ್ರೀ ವಿಜಯ ಶಂಕರ್ ಅವರಿಗೆ ಶುಭಾಶಯಗಳನ್ನು ಕೋರುತ್ತಾ, ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಅವರ… pic.twitter.com/nSCylS8OFV
ಕನ್ನಡಿಗರಾದ ವಿಜಯಶಂಕರ ಅವರು ಸಾಂವಿಧಾನಿಕ ಹುದ್ದೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ನಾಡಿನ ಘನತೆ ಹೆಚ್ಚಿಸಲಿ. ಮೇಘಾಲಯದ ಜನತೆಗೆ ಅವರಿಂದ ಉತ್ತಮ ಸೇವೆ ದೊರೆಯುವ ವಿಶ್ವಾಸವಿದೆ ಎಂದು ಬೊಮ್ಮಾಯಿ ಬರೆದುಕೊಂಡಿದ್ದಾರೆ.
ಮೇಘಾಲಯದ ನೂತನ ರಾಜ್ಯಪಾಲರಾಗಿ ನೇಮಕಗೊಂಡಿರುವ ಮಾಜಿ ಸಂಸದರು ಹಾಗೂ ಮಾಜಿ ಸಚಿವರಾದ ಸಿ.ಎಚ್. ವಿಜಯಶಂಕರ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.
— Basavaraj S Bommai (@BSBommai) July 28, 2024
ಕನ್ನಡಿಗರಾದ ಅವರು ಸಂವಿಧಾನಿಕ ಹುದ್ದೆಯಲ್ಲಿ ಉತ್ತಮ ಸೇವೆಯನ್ನು ಮಾಡಿ ನಾಡಿನ ಘನತೆಯನ್ನು ಹೆಚ್ಚಿಸಲಿ, ಮೇಘಾಲಯದ ಜನತೆಗೆ ಅವರಿಂದ ಉತ್ತಮ ಸೇವೆ ದೊರೆಯುವ ವಿಶ್ವಾಸವಿದೆ. pic.twitter.com/q19m1aMJ3r
ಸರಳ ಸಜ್ಜನಿಕೆಯ ವ್ಯಕ್ತಿತ್ವದ ನಾಯಕರಾದ ಸಿ.ಹೆಚ್.ವಿಜಯಶಂಕರ್ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. ಸಮಸ್ತ ಕನ್ನಡಿಗರ ಪರವಾಗಿ ಅವರಿಗೆ ಶುಭಾಶಯಗಳನ್ನು ಕೋರುತ್ತಾ, ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ಅವರ ಹೆಜ್ಜೆಗಳು ನಿರಂತರವಾಗಿ ಸಾಗಲಿ ಎಂದು ಕುಮಾರಸ್ವಾಮಿ ಆಶಿಸಿದ್ದಾರೆ.