ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಒಂದು ದಿನ ಮುಂಚಿತವಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯ ಪಾತ್ರ ಹಾಗೂ ದೇಶ ಹೆಮ್ಮೆ ಪಡುವಂತಹ ಮಹಿಳೆಯರ ಸಾಧನೆಯ ಬಗ್ಗೆ ಅವರು ಒತ್ತಿ ಹೇಳಿದ್ದಾರೆ.
ಇಂದಿಗೂ ಮಹಿಳೆಯರಿಗೆ ಹಲವು ಸವಾಲುಗಳಿವೆ: ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಷ್ಟ್ರಪತಿ, "ಸಮಾಜದ ಪ್ರಗತಿಯನ್ನು ಮಹಿಳೆಯರು ಸಾಧಿಸಿದ ಪ್ರಗತಿಯಿಂದ ಅಳೆಯಲಾಗುತ್ತದೆ. ಹಾಗಾಗಿ ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಹಾಗೂ ಅವಳನ್ನು ಸಬಲೀಕರಣಗೊಳಿಸುವ ಅಗತ್ಯವನ್ನು ಒತ್ತಿ ಹೇಳಲು ಇದೊಂದು ಪ್ರಮುಖ ಸಂದರ್ಭ. ಇಂದಿಗೂ ಸಹ ಮಹಿಳೆಯರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅದನ್ನು ನಾವು ಪರಿಹರಿಸಬೇಕಾಗಿದೆ." ಎಂದು ಬರೆದುಕೊಂಡಿದ್ದಾರೆ.
ಮಹಿಳೆಯರಿಗೆ ಮತ್ತಷ್ಟು ಬಲ ನೀಡೋಣ: "ವಿಜ್ಞಾನ ಮತ್ತು ತಂತ್ರಜ್ಞಾನದಿಂದ ವೈದ್ಯಕೀಯ ಬಾಹ್ಯಾಕಾಶ, ಸಶಸ್ತ್ರ ಪಡೆಗಳು ಮತ್ತು ಕ್ರೀಡೆಗಳವರೆಗೆ ವಿವಿಧ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ಮಹಿಳೆಯರು ರಾಷ್ಟ್ರವನ್ನು ಹೆಮ್ಮೆ ಪಡೆಯುವಂತೆ ಮಾಡುತ್ತಿದ್ದಾರೆ. ಮಹಿಳೆಯರ ಹಾದಿಯಲ್ಲಿರುವ ತೊಡಕುಗಳನ್ನು ತೊಡೆದುಹಾಕಲು ನಾವು ಒಟ್ಟಾಗಿ ಕೆಲಸ ಮಾಡೋಣ ಹಾಗೂ ಅವರಿಗೆ ಇನ್ನಷ್ಟು ಬಲ ನೀಡೋಣ. ಏಕೆಂದರೆ ಅವರು ನಾಳೆಯ ಭಾರತವನ್ನು ರೂಪಿಸುತ್ತಾರೆ" ಎಂದು ಸಂದೇಶ ನೀಡಿದ್ದಾರೆ.
"ಈ ವರ್ಷದ ಗಣರಾಜ್ಯೋತ್ಸವ ಪರೇಡ್ನಲ್ಲಿ ಮಹಿಳಾ ಶಕ್ತಿ ಹಾಗೂ ನಾಯಕತ್ವದ ಗಮನಾರ್ಹ ಪ್ರದರ್ಶನ ಕಂಡುಬಂದಿತ್ತು. ಮಹಿಳಾ ದಿನಾಚರಣೆಯ ಯಶಸ್ಸಿಗೆ ನಾನು ಬಯಸುತ್ತೇನೆ. ಎಲ್ಲಾ ಮಹಿಳೆಯರ ಉಜ್ವಲ ಭವಿಷ್ಯಕ್ಕಾಗಿ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ" ಎಂದು ರಾಷ್ಟ್ರಪತಿ ಹೇಳಿದ್ದಾರೆ.
ಮಾರ್ಚ್ 8ರಂದು (ಇಂದು) ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.
ಇದನ್ನೂ ಓದಿ: ಮಹಿಳಾ ದಿನಾಚರಣೆ ವಿಶೇಷ: ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಕನ್ನಡ ಸ್ಟಾರ್ ನಟಿಯರು