ಪ್ರಯಾಗರಾಜ್(ಉತ್ತರ ಪ್ರದೇಶ): 2025ರಲ್ಲಿ ಇಲ್ಲಿನ ಪ್ರಯಾಗ್ರಾಜ್ನಲ್ಲಿ ಕುಂಭಮೇಳ ನಡೆಯಲಿದ್ದು, ಜನರ ಸುರಕ್ಷಿತ ಪ್ರಯಾಣಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಬಿಗಿಭದ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ಪ್ರಯಾಗ್ರಾಜ್ಗೆ ದೇಶದ ವಿವಿಧ ನಿಲ್ದಾಣಗಳಿಂದ 900ಕ್ಕೂ ಅಧಿಕ ರೈಲುಗಳನ್ನು ವ್ಯವಸ್ಥೆ ಮಾಡಲಾಗಿದೆ. ಇವುಗಳಿಗೆ ಕೃತಕ ಬುದ್ಧಿಮತ್ತೆ (AI) ಆಧರಿತ ಸಿಸಿಟಿವಿ ಕ್ಯಾಮೆರಾಗಳ ನಿಗಾ ಇಡಲಾಗುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪ್ರಯಾಗ್ರಾಜ್ ರೈಲ್ವೆ ಮಂಡಳಿ ಮುಖ್ಯಸ್ಥ ಜಯವರ್ಮ ಸಿನ್ಹಾ, ಕುಂಭಮೇಳಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆ ಉಂಟಾಗದಿರಲು ಮತ್ತು ರೈಲುಗಳಲ್ಲಿ ಯಾವುದೇ ಅಸಹಜ ಚಟುವಟಿಕೆಗಳು ನಡೆಯದಂತೆ ಹದ್ದಿನ ಕಣ್ಣಿಡಲಾಗುತ್ತಿದೆ. ಹೀಗಾಗಿ ಎಐ ಆಧರಿತ ಸಿಸಿಟಿವಿಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಅವಘಡ ತಡೆಗೆ ಎಐ ಕ್ಯಾಮೆರಾ ನಿಗಾ: ದೇಶದಲ್ಲಿ ರೈಲು ಅವಘಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೇಶದ ಪ್ರತಿ ಲೋಕೋಮೋಟಿವ್ ಮತ್ತು ಪ್ರಮುಖ ಯಾರ್ಡ್ಗಳಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಸುರಕ್ಷತಾ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ಪ್ರತಿ ರೈಲುಗಳ ಮೇಲೆ ಭದ್ರತಾ ಸಿಬ್ಬಂದಿ ನಿಗಾ ವಹಿಸಲಿದ್ದಾರೆ. ಕುಂಭಮೇಳದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದರ ಜೊತೆಗೆ, ಮೇಳದ ವೇಳೆ ರೈಲ್ವೆ ಹಳಿಗಳನ್ನು ಹಾಳು ಮಾಡಲು ಪ್ರಯತ್ನಿಸುವ ದುಷ್ಕರ್ಮಿಗಳ ಮೇಲೆ ನಿಗಾ ಇಡಲೂ ಈ ಎಐ ಸಿಸಿಟಿವಿ ಕ್ಯಾಮೆರಾಗಳು ನೆರವಾಗಲಿವೆ. ಇವುಗಳನ್ನು ಪ್ರಮುಖ ಸ್ಥಳಗಳಲ್ಲಿ ಅಳವಡಿಸಲಾಗುವುದು. ಇದೆಲ್ಲವೂ ಕುಂಭಮೇಳ ಆರಂಭಕ್ಕೂ ಮೊದಲೇ ಪೂರ್ಣ ಮಾಡುವ ಉದ್ದೇಶವಿದೆ ಎಂದು ಮಾಹಿತಿ ನೀಡಿದ್ದಾರೆ.
ತೀರ್ಥಸ್ನಾನಕ್ಕಾಗಿ 900 ವಿಶೇಷ ರೈಲುಗಳ ವ್ಯವಸ್ಥೆ: ಮುಂದಿನ ವರ್ಷ ಜರುಗುವ ವಿಶೇಷ ತೀರ್ಥಸ್ನಾನಕ್ಕಾಗಿ ದೇಶದ ವಿವಿಧೆಡೆಯಿಂದ 30 ಕೋಟಿ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಎಲ್ಲರ ಪ್ರಯಾಣಕ್ಕಾಗಿ ಈ ಬಾರಿ 900 ರೈಲುಗಳನ್ನು ವ್ಯವಸ್ಥೆ ಮಾಡಲಾಗುತ್ತಿದೆ. ಜನದಟ್ಟಣೆ ನಿಯಂತ್ರಣದ ಬಗ್ಗೆಯೂ ಕ್ರಮ ವಹಿಸಲಾಗುವುದು. ಪ್ರಯಾಗ್ರಾಜ್ ಜಂಕ್ಷನ್ ಅನ್ನು ಅಮೃತ್ ಭಾರತ್ ನಿಲ್ದಾಣವನ್ನಾಗಿ ಆಯ್ಕೆ ಮಾಡಲಾಗಿದೆ. ಕಳೆದ ಬಾರಿ ನಡೆದ ಕುಂಭಮೇಳದ ವೇಳೆ 530 ವಿಶೇಷ ರೈಲುಗಳು ಕಾರ್ಯಾಚರಣೆ ನಡೆಸಿದ್ದವು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮುಂಬರುವ ಕುಂಭಮೇಳದ ಸಿದ್ಧತೆಗಳನ್ನು ಪರಿಶೀಲಿಸಿದ ಸಿನ್ಹಾ, ತೀರ್ಥಸ್ನಾನ ಆರಂಭಕ್ಕೂ ಮುನ್ನ ಜನರಿಗೆ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಸಿಂಹಸ್ಥ ಕುಂಭಮೇಳ: ₹15 ಸಾವಿರ ಕೋಟಿ ವೆಚ್ಚದ ಯೋಜನೆ ಸಿದ್ಧ - Simhastha Kumbh Mela