ಪಾಲಿ( ರಾಜಸ್ಥಾನ); ಜಿಲ್ಲೆಯ ಜದನ್ನಲ್ಲಿರುವ ದೇಶದ ಏಕೈಕ ಓಂ ಆಕಾರದ ಯೋಗ ಮಂದಿರ ಇಂದು ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 12.30ಕ್ಕೆ ಇಲ್ಲಿ ಮೂರ್ತಿ ಪ್ರತಿಷ್ಠಾಪನೆ, ಶಿಖರ ಕಲಶ ಪೂಜೆ, ಧ್ವಜಸ್ತಂಭ ಪ್ರತಿಷ್ಠಾಪನೆ ನಡೆಯಲಿದೆ. ರಾಜಸ್ಥಾನ ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಸೇರಿದಂತೆ ಹಲವು ಗಣ್ಯರು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ದೇವಾಲಯವು ದೇವಾಧಿದೇವ ಮಹಾದೇವನಿಗೆ ಸಮರ್ಪಿತವಾಗಿದೆ. ಈ ದೇವಾಲಯದ ವಿಶೇಷತೆ ಏನೆಂದರೆ ಗರ್ಭಗುಡಿಯಲ್ಲಿ ಒಂದೇ ಶಿವಲಿಂಗದಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳ ದರ್ಶನವಾಗುವಂತೆ ನಿರ್ಮಾಣ ಮಾಡಲಾಗಿದೆ. ಇದಲ್ಲದೆ, ಮಹಾದೇವನ 1008 ನಾಮಗಳ ಆಧಾರದ ಮೇಲೆ ನಿರ್ಮಾಣ ಮಾಡಲಾಗಿರುವ ಒಂದೇ ಸಂಖ್ಯೆಯ ರೂಪಗಳನ್ನು ಏಕಕಾಲದಲ್ಲಿ ಕಾಣಬಹುದಾಗಿರುವುದು ಮತ್ತೊಂದು ವಿಶೇಷತೆಯಾಗಿದೆ.
ಮಹಾಮಂಡಲೇಶ್ವರ ಸ್ವಾಮಿ ಮಹೇಶ್ವರಾನಂದರ ಮಾರ್ಗದರ್ಶನದಲ್ಲಿ ಯೋಗಾಶ್ರಮ ನಿರ್ಮಿಸಲಾಗಿದೆ. ಫೆಬ್ರವರಿ 10 ರಿಂದಲೇ ಇಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರುತ್ತಿವೆ. 4 ಅಂತಸ್ತಿನ ಕಟ್ಟಡದಲ್ಲಿ ವಾಸ್ತುಶಿಲ್ಪ ಕಲೆಯ ವೈಭವವನ್ನು ನೋಡಬಹುದಾಗಿದೆ. ಈ ಕಟ್ಟಡದ ಒಂದು ಭಾಗವು ಭೂಗತವಾಗಿದೆ. ಬ್ರಹ್ಮಾಂಡದ ಕಲ್ಪನೆಯ ಆಧಾರದ ಮೇಲೆ ನಿರ್ಮಾಣ ಮಾಡಲಾಗಿದೆ. ದೇವಾಲಯಕ್ಕೆ ಆಗಮಿಸುವ ಭಕ್ತರು ಇಲ್ಲಿ 12 ಜ್ಯೋತಿರ್ಲಿಂಗಗಳ ದರ್ಶನ ಮಾಡುವ ಮೂಲಕ ಏಳು ಜನ್ಮಗಳ ಪಾಪಗಳಿಂದ ಮುಕ್ತಿ ಪಡೆಯಬಹುದು ಎಂದು ಆಶ್ರಮದ ಉತ್ತರಾಧಿಕಾರಿ ಅವತಾರಪುರಿ ಮಹಾರಾಜರು ಹೇಳಿದ್ದಾರೆ.
ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಆಗಿರುವ ಪ್ರಮುಖ ಶಿವಲಿಂಗವನ್ನು ಒಡಿಶಾದಿಂದ ತರಲಾಗಿದೆ. ಗರ್ಭಗುಡಿಯ ಗೋಡೆಗಳ ಮೇಲೆ ಸ್ಥಾಪಿಸಲಾದ 1008 ಮೂರ್ತಿಗಳು ಒಂದಕ್ಕೊಂದು ವಿಭಿನ್ನವಾಗಿರಬೇಕು, ಆದ್ದರಿಂದ ಯೋಗಾಶ್ರಮ, ಮಹಾಮಂಡಲೇಶ್ವರ ಸ್ವಾಮಿ ಮಹೇಶ್ವರಾನಂದರ ಪ್ರೇರಣೆಯಿಂದ ಅವುಗಳನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ ಎಂದು ಅವತಾರಪುರಿ ಮಹಾರಾಜರು ಹೇಳಿದ್ದಾರೆ.
2000 ಕಂಬಗಳ ದೇವಾಲಯ: ಇಡೀ ಕಟ್ಟಡ 2000 ಕಂಬಗಳ ಮೇಲೆ ನಿಂತಿದೆ. ಪ್ರತಿ ಕಂಬಗಳ ಮೇಲೆ ರಾಮ-ಕೃಷ್ಣ ಲೀಲೆಗಳನ್ನು ಒಳಗೊಂಡಂತೆ ದೇವತೆಗಳ ವಿಗ್ರಹಗಳನ್ನು ಕೆತ್ತಲಾಗಿದೆ. ಎಂಟು ದಿಕ್ಕುಗಳ ಆಧಾರದ ಮೇಲೆ ದೇವಾಲಯಕ್ಕೆ ಎಂಟು ಬಾಗಿಲುಗಳನ್ನು ಇರಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ಐದು ಅಡಿಯ ಬೃಹತ್ ನಂದಿಯನ್ನು ಸ್ಥಾಪಿಸಲಾಗಿದೆ. ಈ ಆಶ್ರಮ ಮತ್ತು ದೇವಾಲಯವನ್ನು ಗುರು ಪರಮಹಂಸ ಸ್ವಾಮಿ ಮಾಧವಾನಂದ ಪುರಿ ಅವರ ಸ್ಮರಣಾರ್ಥವಾಗಿ ನಿರ್ಮಾಣ ಮಾಡಲಾಗಿದೆ.
12 ಜ್ಯೋತಿರ್ಲಿಂಗಗಳಿಂದ ನೀರು: 12 ಜ್ಯೋತಿರ್ಲಿಂಗಗಳು ಇರುವ ಸ್ಥಳಗಗಳಿಂದ ತಂದ ಜಲಾಭಿಷೇಕದಿಂದ ದೇವಾಲಯದ ಉದ್ಘಾಟನೆ ನಡೆಯಲಿದೆ ಎಂದು ಮಹಾಮಂಡಲೇಶ್ವರ ಸ್ವಾಮಿ ಫುಲ್ಪುರಿ ಮಹಾರಾಜ್ ಮತ್ತು ಸ್ವಾಮಿ ರಾಜೇಂದ್ರಪುರಿ ಮಹಾರಾಜ್ ತಿಳಿಸಿದ್ದಾರೆ. ಮಹಾಮಸ್ತಕಾಭಿಷೇಕದ ನಂತರ ದೇವಾಲಯವನ್ನು ಭಕ್ತರಿಗಾಗಿ ತೆರೆಯಲಾಗುತ್ತದೆ.
ದೇವಾಲಯದ ವೈಶಿಷ್ಠ್ಯ
- ಕಟ್ಟಡವು 2 ಸಾವಿರ ಕಂಬಗಳ ಮೇಲೆ ನಿಂತಿದೆ, ನಾಲ್ಕನೇ ಮಹಡಿಯಲ್ಲಿ ಇಡೀ ವಿಶ್ವವೇ ಗೋಚರಿಸುವಂತೆ ವಿನ್ಯಾಶಗೊಳಿಸಲಾಗಿದೆ
- 30 ವರ್ಷಗಳ ನಿರ್ಮಾಣದ ನಂತರ ಕಟ್ಟಡ ಪೂರ್ಣಗೊಂಡಿದೆ
- ವಿದೇಶಿಗರು ಸೇರಿದಂತೆ 500 ಕಾರ್ಮಿಕರು ಸತತವಾಗಿ ಕೆಲಸ ಮಾಡಿದ್ದಾರೆ
- 250 ಎಕರೆಗೂ ಹೆಚ್ಚು ಜಾಗದಲ್ಲಿ ದೇವಸ್ಥಾನ ನಿರ್ಮಾಣ
- 5 ಕಿಮೀ ದೂರದಿಂದಲೇ ದೇವಸ್ಥಾನ ಗೋಚರಿಸುತ್ತದೆ
- ಆಲಯ 40 ಮೀಟರ್ ಎತ್ತರವಿದೆ
- ಸಂಕೀರ್ಣದಲ್ಲಿ 108 ಕೊಠಡಿಗಳಿವೆ
- ಶಿವನ ಗರ್ಭಗುಡಿಯಲ್ಲಿ 1008 ವಿಗ್ರಹಗಳನ್ನ ಸ್ಥಾಪನೆ ಮಾಡಲಾಗಿದೆ
- 2000 ಕ್ಕೂ ಹೆಚ್ಚು ಕಾಲಮ್ಗಳನ್ನು ಹಾಕಿ ಬುನಾದಿ ಭದ್ರ ಪಡಿಸಲಾಗಿದೆ
ಇದನ್ನು ಓದಿ: ಅಯೋಧ್ಯೆಯ ರಾಮಮಂದಿರಕ್ಕೆ 2ನೇ ಬಾರಿ ಭೇಟಿ ನೀಡಿದ ಅಮಿತಾಭ್ ಬಚ್ಚನ್