ಪಾಟ್ನಾ: ಬಿಹಾರದ ಡೈನಾಮಿಕ್ ಐಪಿಎಸ್ ಅಧಿಕಾರಿ ಎಂದೇ ಪ್ರಸಿದ್ಧಿ ಪಡೆದಿರುವ ಕಾಮ್ಯಾ ಮಿಶ್ರಾ ರಾಜೀನಾಮೆ ನೀಡಿರುವ ಬಗ್ಗೆ ವರದಿಯಾಗಿದೆ. ವೈಯಕ್ತಿಕ ಕಾರಣಗಳಿಂದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ಪೊಲೀಸ್ ಕೇಂದ್ರ ಕಚೇರಿ PHQ ಇವರ ರಾಜೀನಾಮೆ ಅಂಗೀಕರಿಸಿಲ್ಲ ಎನ್ನಲಾಗಿದೆ. ಕಾಮ್ಯಾ ಮಿಶ್ರಾ ಅವರು ದರ್ಭಾಂಗದ ಗ್ರಾಮಾಂತರ ಎಸ್ಪಿ ಆಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಕಾಮ್ಯಾ ಮಿಶ್ರಾ ಅವರು 2019 ರಲ್ಲಿ UPSC ಪರೀಕ್ಷೆಯಲ್ಲಿ 172 ನೇ ರ‍್ಯಾಂಕ್ ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕೇವಲ 22 ವರ್ಷ ವಯಸ್ಸು ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆ ಸಂದರ್ಭದಲ್ಲೇ ಅವರು ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿದ್ದರು.
ವೈಯುಕ್ತಿಕ ಕಾರಣಕ್ಕೆ ರಾಜೀನಾಮೆ: ಬಿಹಾರ ಕೇಡರ್ ಐಪಿಎಸ್ ಅಧಿಕಾರಿ ಕಾಮ್ಯಾ ಮಿಶ್ರಾ ಅವರ ರಾಜೀನಾಮೆ ಪತ್ರ ಪೊಲೀಸ್ ಕೇಂದ್ರ ಕಚೇರಿಗೆ ತಲುಪುತ್ತಿದ್ದಂತೆಯೇ, ಅತ್ತ ರಾಜ್ಯದಲ್ಲಿ ಈ ಸುದ್ದಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಾಮ್ಯಾ ಅವರು ಪ್ರಸ್ತುತ ದರ್ಭಾಂಗದ ಗ್ರಾಮಾಂತರ ಎಸ್ಪಿಯಾಗಿ ಕೆಲಸ ಮಾಡುತ್ತಿದ್ದಾರೆ. ವೈಯಕ್ತಿಕ ಕಾರಣಗಳೇ ರಾಜೀನಾಮೆಗೆ ಕಾರಣ ಎಂದು ಅವರು ಹೇಳಿದ್ದಾರೆ.
ಒಡಿಶಾದ ಮೂಲದ ಕಾಮ್ಯಾ : ಬಿಹಾರದ ಮಾಜಿ ಸಚಿವ ಮತ್ತು ವಿಐಪಿ ಮುಖ್ಯಸ್ಥ ಮುಖೇಶ್ ಸಾಹ್ನಿ ಅವರ ತಂದೆ ಜಿತನ್ ಸಾಹ್ನಿ ಅವರ ಹೈ ಪ್ರೊಫೈಲ್ ಕೊಲೆ ಪ್ರಕರಣದ ತನಿಖೆಯ ಹೊಣೆಯನ್ನು ಕಾಮ್ಯಾ ಮಿಶ್ರಾ ಅವರಿಗೆ ನೀಡಲಾಗಿತ್ತು. ಕಾಮ್ಯಾ ಈ ತನಿಖೆಯನ್ನು ಬುದ್ಧಿವಂತಿಕೆಯಿಂದ ನಡೆಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಅಂದಿನಿಂದ ಅವರು ದೇಶಾದ್ಯಂತ ಜನಜನಿತರಾಗಿದ್ದರು. ಆದರೆ ಇದೀಗ ಅವರು ವೈಯಕ್ತಿಕ ಕಾರಣಗಳಿಂದ ಅವರು ತಮ್ಮ ರಾಜೀನಾಮೆ ನೀಡಿದ್ದು, ತಮ್ಮ ರಾಜೀನಾಮೆ ಪತ್ರವನ್ನು ಪೊಲೀಸ್ ಕೇಂದ್ರ ಕಚೇರಿಗೆ ರವಾನಿಸಿದ್ದಾರೆ. ಅವರ ರಾಜೀನಾಮೆ ಅಂಗೀಕಾರದ ಬಗ್ಗೆ ಕೇಂದ್ರ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಹೊರ ಬಿದ್ದಿದೆ.
22 ನೇ ವಯಸ್ಸಿನಲ್ಲೇ IPS: ಒಡಿಶಾ ಮೂಲದವರಾದ ಕಾಮ್ಯಾ ಮಿಶ್ರಾ 1 ನವೆಂಬರ್ 1996 ರಂದು ಜನಿಸಿದ್ದಾರೆ. 2019 ರ ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್‌ನ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ 172 ನೇ ರ‍್ಯಾಂಕ್ ಪಡೆದು ಐಪಿಎಸ್‌ಗೆ ಸೇರ್ಪಡೆಗೊಂಡಿದ್ದರು. ನಂತರ ಅವರು ಒಡಿಶಾದಿಂದ ಬಿಹಾರಕ್ಕೆ ತಮ್ಮ ಕೇಡರ್ ಅನ್ನು ಬದಲಾಯಿಸಿಕೊಂಡಿದ್ದರು. ಅವರು 26 ಆಗಸ್ಟ್ 2019 ರಂದು IPS ಆಗಿ ಸೇರಿದರು ಮತ್ತು 06 ಮಾರ್ಚ್ 2024 ರಂದು ದರ್ಭಾಂಗಾ ಗ್ರಾಮಾಂತರ ಎಸ್ಪಿ ಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.
2021 ರಲ್ಲಿ ಮದುವೆ: ದೆಹಲಿಯ ಶ್ರೀ ರಾಮ್ ಕಾಲೇಜಿನಲ್ಲಿ ಪದವಿ ಪಡೆದಿರುವ ಕಾಮ್ಯಾ ಮಿಶ್ರಾ ಅವರ ಪತಿ ಅವಧೇಶ್ ದೀಕ್ಷಿತ್ ಪ್ರಸ್ತುತ ಮುಜಾಫರ್‌ಪುರದ ಎಸ್‌ಪಿ ಆಗಿದ್ದಾರೆ. ಇಬ್ಬರೂ 2021 ರಲ್ಲಿ ವಿವಾಹವಾಗಿದ್ದರು. ಇಬ್ಬರೂ 2019ರ ಬ್ಯಾಚ್‌ನ ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಅವಧೇಶ್ ದೀಕ್ಷಿತ್ ಅವರು ರಾಜಸ್ಥಾನದವರು. ಕಾಮ್ಯಾ ಅವರಂತೆ, ಅವರು 26 ಆಗಸ್ಟ್ 2019 ರಂದು IPS ಆಗಿ ಅಧಿಕಾರ ವಹಿಸಿಕೊಂಡಿದ್ರು. ಅವಧೇಶ್ ದೀಕ್ಷಿತ್ ಅವರು 26 ಜನವರಿ 2024 ರಿಂದ ಮುಜಾಫರ್‌ಪುರ ಎಸ್ಪಿ ಆಗಿ ಕೆಲಸ ಮಾಡುತ್ತಿದ್ದಾರೆ.
ಇದನ್ನು ಓದಿ:ಕರ್ನಾಟಕ ಸೇರಿ ಕೆಲ ರಾಜ್ಯಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರ ಕಡೆಗಣನೆ: ಹೆಚ್.ಡಿ.ದೇವೇಗೌಡ - H D Devegowda